ಚಿಂತನಕುಂಟೆಯಲ್ಲಿ ವನಮಹೋತ್ಸವ ; ಪರಿಸರ ಸಂರಕ್ಷಣೆಗೆ ಜನಜಾಗೃತಿ ಅಗತ್ಯ ಎಂದು ಕರೆ



ಶ್ರೀನಿವಾಸಪುರ, ಜುಲೈ 11: ಎಷ್ಟು ದಿನ ಗಿಡಗಳು ಉಸಿರಾಡುತ್ತವೆಯೋ ಅಷ್ಟು ದಿನ ಮಾತ್ರ ಮಾನವ ಬದುಕಲು ಸಾಧ್ಯ. ಗಿಡಗಳ ಉಸಿರಾಟ ನಿಂತರೆ ಮಾನವನ ಬದುಕೂ ಅಪಾಯಕ್ಕೆ ಸಿಲುಕುತ್ತದೆ. ಆದ್ದರಿಂದ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ ಹೇಳಿದರು.
ತಾಲ್ಲೂಕಿನ ಚಿಂತನಕುಂಟೆ ಅರಣ್ಯ ಪ್ರದೇಶದಲ್ಲಿ ಶನಿವಾರ ಕರ್ನಾಟಕ ಲೋಕಾಯುಕ್ತ, ಜಿಲ್ಲಾಡಳಿತ, ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಕನಿಷ್ಠ ಶೇ.33ರಷ್ಟು ಅರಣ್ಯ ಪ್ರದೇಶ ಇರಬೇಕಾದರೆ, ಪ್ರಸ್ತುತ ಶೇ.25ರಷ್ಟು ಮಾತ್ರ ಅರಣ್ಯ ಉಳಿದಿದೆ. ಉಳಿದ ಅರಣ್ಯವನ್ನೂ ಮನುಷ್ಯನೇ ನಾಶ ಮಾಡುತ್ತಿರುವುದರಿಂದ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಓಜೋನ್ ಪದರ ಹಾನಿಗೊಳಗಾಗುತ್ತಿದ್ದು, ಅದರ ಪರಿಣಾಮವಾಗಿ ಅನೇಕ ರೋಗಗಳು ಹೆಚ್ಚಾಗುತ್ತಿವೆ. ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರ ಒದಗಿಸಲು ಪ್ರತಿಯೊಬ್ಬರೂ ಗಿಡ ನೆಟ್ಟು ಅವುಗಳನ್ನು ಮರಗಳಾಗಿ ಬೆಳೆಸಬೇಕು ಎಂದು ಕರೆ ನೀಡಿದರು.
ಕರ್ನಾಟಕ ಉಪಲೋಕಾಯುಕ್ತ ಬಿ. ವೀರಪ್ಪ ಮಾತನಾಡಿ, ಶಿಕ್ಷಕರು ರಾಜಕೀಯ ನಂಟಿನಿಂದ ದೂರ ಉಳಿದು ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು. ಪರಿಸರ ಸಂರಕ್ಷಣೆ ಹಾಗೂ ವೃಕ್ಷಸಂಪತ್ತಿನ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಜೊತೆಗೆ ಪ್ರಾಯೋಗಿಕ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ರೂಪಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಮಾತನಾಡಿ, ಪ್ರಕೃತಿ ದೇವರು ನೀಡಿದ ಅಮೂಲ್ಯ ವರವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಶುದ್ಧ ಗಾಳಿಯ ಬದಲಿಗೆ ರಾಸಾಯನಿಕ ಮಿಶ್ರಿತ ಗಾಳಿಯನ್ನು ಉಸಿರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಯೊಂದು ಗ್ರಾಮದಲ್ಲೂ ಮನೆಗಳ ಸುತ್ತಮುತ್ತ ಮಗುವಿಗೊಂದು ಸಸಿ ನೆಟ್ಟು, ಅದನ್ನು ಮರವಾಗಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ್ ಮಾತನಾಡಿ, ಗಿಡ ನೆಟ್ಟು ಅದನ್ನು ಪೋಷಿಸುವ ಸಂಸ್ಕಾರವನ್ನು ಮಕ್ಕಳಲ್ಲಿ ಬೆಳೆಸಬೇಕು. ಪರಿಸರದ ಬಗ್ಗೆ ಮಕ್ಕಳಲ್ಲಿ ಪ್ರೀತಿ, ಕಾಳಜಿ ಹಾಗೂ ಹೊಣೆಗಾರಿಕೆ ಮೂಡಿಸಿದಾಗ ಮಾತ್ರ ಹಸಿರು ಉಳಿಯುತ್ತದೆ. ಮನೆ ಹಾಗೂ ಶಾಲೆಗಳಲ್ಲಿ ಪರಿಸರ ಜಾಗೃತಿ ಬೆಳೆಸುವ ಕೆಲಸಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಭುನೀಲಚಾರಿ ಬಡಿಗಾರ್, ಅಪರ ಜಿಲ್ಲಾಧಿಕಾರಿ ಎಸ್.ಎನ್. ಮಂಗಳ, ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಎ. ಆನಂದ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಂ.ಎಸ್. ಶಿವರಾತ್ರೇಶ್ವರಸ್ವಾಮಿ ಮತ್ತು ಆರ್. ಗಿರೀಶ್, ತಾಲೂಕು ಪ್ರಧಾನ ಸಿವಿಲ್ ನ್ಯಾಯಾಧೀಶ ಕರಣ್ ಸಿಂಗ್, ಅಪರ ಸಿವಿಲ್ ನ್ಯಾಯಾಧೀಶೆ ಪಿ. ಲಾವಣ್ಯ, ಡಿವೈಎಸ್ಪಿ ಮೊನಿಶಾ, ತಹಶೀಲ್ದಾರ್ ಜಿ.ಎನ್. ಸುದೀಂದ್ರ, ಇಒ ಕೆ. ಸರ್ವೇಶ್, ಪೊಲೀಸ್ ಇನ್ಸ್ಪೆಕ್ಟರ್ ಶಂಕರಾಚಾರ್, ಪ್ರಭಾರ ಬಿಇಒ ಶಂಕರೇಗೌಡ, ವಲಯ ಅರಣ್ಯಾಧಿಕಾರಿ ಹರ್ಷವರ್ಧನ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ಜಿ. ಹರೀಶ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ವಿ. ನಾಗರಾಜ್, ಲೋಕಾಯುಕ್ತ ಇನ್ಸ್ಪೆಕ್ಟರ್ ರೇಣುಕ, ಸಿಬ್ಬಂದಿ ದೇವಪ್ಪ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಕೆ.ಕೆ. ನವೀನ್ ಕುಮಾರ್, ಮಂಜುನಾಥ್, ನಾಗಾರ್ಜುನ, ನವನೀತ್, ಶ್ರೀನಾಥ್, ಕೆ.ವಿ. ಅನೀಲ್ ಕುಮಾರ್, ಜಿ. ಚಂದು, ನಾಗರಾಜ, ಕೃಷ್ಣಮೂರ್ತಿ, ನಾಚಪ್ಪ ಮತ್ತು ಹರೀಶ್ ಉಪಸ್ಥಿತರಿದ್ದರು.

