

ಕುಂದಾಪುರ ; “ಮನಸ್ಸನ್ನು ಪ್ರಶಾಂತವಾಗಿರಿಸಲಿಕ್ಕೆ ಒಂದೇ ಮಾರ್ಗವೆಂದರೆ ಪ್ರಾಣಶಕ್ತಿಯ ನಾಲ್ಕು ಮೂಲಗಳನ್ನು ನಮ್ಮದಾಗಿಸಿಕೊಳ್ಳುವುದು- ಸಮತೋಲಿತ ಆಹಾರ, ಹಿತ-ಮಿತದ ನಿದ್ದೆ, ಉಸಿರಿನ ಹಿಡಿತ, ಮತ್ತು ಧ್ಯಾನಸ್ಥ ಮನಸ್ಸು-ಈ ಸರಳ ಅಂಶಗಳನ್ನು ಅರಿತು ವಿದ್ಯಾರ್ಥಿಗಳು ಅವುಗಳನ್ನು ಹಂತಹಂತವಾಗಿ ಪಾಲಿಸಬೇಕು” ಎಂದು ಆರ್. ಎನ್..ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ ಯೋಗ-ಪ್ರಾಣಾಯಾಮ ತರಬೇತಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಪ್ರಖ್ಯಾತ “ಆರ್ಟ್ ಅಫ್ ಲಿವಿಂಗ್” ನ ಉಡುಪಿ ಶಾಖೆಯ ಯೋಗ ಶಿಕ್ಷಕಿ ಶೈಲಜಾ ಕೃಷ್ಣಾನಂದ ರವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾಲೇಜಿನ ಹಿರಿಯ ಉಪನ್ಯಾಸಕಿ ಹಿಂದಿ ವಿಭಾಗದ ಮುಖ್ಯಸ್ಥೆ ಜಯಶೀಲಾ ಪೈ ಯವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ನಿತ್ಯಜೀವನದಲ್ಲಿ ಯೋಗವನ್ನು ಅಳವಡಿಸುವುದರಿಂದ ಸಾತ್ವಿಕ ಆಹಾರ, ಗುಣ ಹಾಗೂ ಉತ್ತಮ ಜೀವನಶೈಲಿಯನ್ನು ತಮ್ಮದಾಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ನಾಗರತ್ನಾ ರವರು ಪ್ರಾರ್ಥನೆ ಹಾಡಿದರು. ಆಂಗ್ಲಭಾಷಾ ಉಪನ್ಯಾಸಕಿ ಸುಮತಿ ಶೆಣೈಯವರು ಕಾರ್ಯಕ್ರಮ ನಿರ್ವಹಿಸಿದರು.

