


ಶ್ರೀನಿವಾಸಪುರ : ಕರ್ನಾಟಕದ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗೀಕರಣದ ಹೆಸರಿನಲ್ಲಿ Tata Power ಕಂಪನಿಗೆ ನೀಡಲು ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ತಾಲ್ಲೂಕಿನ ರೈತಪರ, ಜನಪರ, ದಲಿತಪರ, ಕನ್ನಡಪರ ಹಾಗೂ ನೌಕರರ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.
ಸಂಯುಕ್ತ ಹೋರಾಟ ಸಮಿತಿಯ ನೇತೃತ್ವದಲ್ಲಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಯುಕ್ತ ಹೋರಾಟ ಸಮಿತಿಯ ಸಂಚಾಲಕ ಹಾಗೂ ವಿದ್ಯುತ್ ಖಾಸಗೀಕರಣ ವಿರೋಧಿ ಹೋರಾಟ ಸಮಿತಿಯ ಮುಖಂಡ ಪಿ.ಆರ್. ಸೂರ್ಯನಾರಾಯಣ, ಸ್ವಾತಂತ್ರ್ಯದ ಆರಂಭಿಕ ದಿನಗಳಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಅವಕಾಶ ನೀಡಿದಾಗ ಟಾಟಾ ಕಂಪನಿ ಮುಂದೆ ಬಂದಿರಲಿಲ್ಲ. ಆದರೆ ಸಾರ್ವಜನಿಕರ ಹಾಗೂ ಸರ್ಕಾರದ ಹಣದಿಂದ ಬಲಿಷ್ಠವಾದ ವಿದ್ಯುತ್ ವಿತರಣಾ ವ್ಯವಸ್ಥೆ ನಿರ್ಮಾಣವಾದ ಬಳಿಕ ಅದನ್ನು ಖಾಸಗಿ ಕಂಪನಿಗೆ ನೀಡಲು ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು.
ಖಾಸಗೀಕರಣದಿಂದ ರೈತರ ಪಂಪ್ಸೆಟ್ಗಳು, ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆಗಳು, ಸಣ್ಣ ಹಾಗೂ ಗೃಹ ಕೈಗಾರಿಕೆಗಳಿಗೆ ದೊರೆಯುತ್ತಿರುವ ರಿಯಾಯಿತಿಗಳು ಮತ್ತು ಕ್ರಾಸ್ ಸಬ್ಸಿಡಿಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಇದರಿಂದ ವಿದ್ಯುತ್ ದರ ಹೆಚ್ಚಳವಾಗಿ ಜನಸಾಮಾನ್ಯರಿಗೆ ಭಾರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿದ್ಯುತ್ ಕ್ಷೇತ್ರವು ದೇಶದ ಭದ್ರತೆ ಹಾಗೂ ಸಾರ್ವಜನಿಕ ಅವಶ್ಯಕತೆಗೆ ಸಂಬಂಧಿಸಿದ ಪ್ರಮುಖ ಸೇವೆಯಾಗಿದ್ದು, ಇದನ್ನು ಖಾಸಗೀಕರಣ ಮಾಡಿದರೆ ಕಾರ್ಮಿಕರ ಹಕ್ಕುಗಳಿಗೆ ಧಕ್ಕೆಯಾಗಲಿದೆ. ಸಾರ್ವಜನಿಕರ ಹಣದಿಂದ ನಿರ್ಮಾಣವಾಗಿರುವ ವಿದ್ಯುತ್ ವಿತರಣಾ ಕೇಂದ್ರಗಳು, ಟ್ರಾನ್ಸ್ಫಾರ್ಮರ್ಗಳು, ಕಂಬ–ತಂತಿ ಜಾಲ ಸೇರಿದಂತೆ ಮೂಲಸೌಕರ್ಯಗಳು ಖಾಸಗಿ ಕಂಪನಿಗಳ ನಿಯಂತ್ರಣಕ್ಕೆ ಹೋಗುವ ಅಪಾಯವಿದೆ ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ವಿದ್ಯುತ್ ನೌಕರರ ಸಂಘದ ಶಿವಪ್ರಸಾದ್, ಆರ್. ಚಂದ್ರು, ಎಸ್. ರಾಮಾಂಜನಪ್ಪ, ಎನ್.ಎಸ್. ಶ್ರೀನಿವಾಸ್, ಎನ್. ರಾಜಣ್ಣ, ಆರ್.ಕೆ. ಬಾಬು, ಕರ್ನಾಟಕ ರಾಜ್ಯ ರೈತ ಸಂಘದ ಬೈರಾರೆಡ್ಡಿ, ನಾರಾಯಣಸ್ವಾಮಿ, ಚಂದ್ರೇಗೌಡ, ಶ್ರೀನಿವಾಸ್, ದೇವರಾಜ್, ರಮೇಶ್, ಕರ್ನಾಟಕ ಪ್ರಾಂತ ರೈತ ಸಂಘದ ಸೈಯದ್ ಫಾರೂಕ್, ಜಿ. ಮಂಜುಳಾ, ದಲಿತ ಸಂಘದ ಸಿ.ವಿ. ಮುನಿವೆಂಕಟಪ್ಪ, ಮಾವು ಬೆಳೆಗಾರರ ಸಂಘದ ಚಿನ್ನಪ್ಪ ರೆಡ್ಡಿ, ಕನ್ನಡಪರ ಸಂಘಟನೆಗಳ ಎಸ್.ಎಂ. ಶ್ರೀನಿವಾಸ ರೆಡ್ಡಿ, ಸಾಧಿಕ್ ಅಹಮದ್, ಕನ್ನಡ ರಾಷ್ಟ್ರ ಪಕ್ಷದ ಇಮ್ರಾನ್, ಅಕ್ಮಲ್, ಸಾಮಾಜಿಕ ಕಾರ್ಯಕರ್ತರಾದ ಅಸ್ಲಾಂ ಪಾಷಾ, ಮುನಿರೆಡ್ಡಿ, ಮುನಿಯಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

