

ಕುಂದಾಪುರ; ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರವು ಯಶಸ್ವಿ 9 ಸಂವತ್ಸರಗಳನ್ನು ಮುಗಿಸಿ, ಹತ್ತನೇ ವರ್ಷಕ್ಕೆ ಪಾದಾರ್ಪಣೆಯ ಸಂಭ್ರಮಕ್ಕಾಗಿ ಉಚಿತ ಪ್ರೋಟಿನ್ ಪೌಡರ್, ಡಯಪರ್ ವಿತರಣೆ ಹಾಗೂ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮಗಳನ್ನು ಅಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯ ಸಲುವಾಗಿ ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ. ಕೆ ಪ್ರೇಮಾನಂದ ದೀಪ ಬೆಳಗಿಸಿ, ಜನ ಸ್ನೇಹಿ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ರೆಡ್ ಕ್ರಾಸನ್ನು ಶ್ಲಾಘಿಸಿದರು. ಕಡಿಮೆ ದರದಲ್ಲಿ ಗುಣಮಟ್ಟದ ಎಲ್ಲಾ ತರಹದ ಔಷಧಗಳನ್ನು ಜನರಿಗೆ ವಿತರಿಸುವ ಕಾರ್ಯ ಮಾಡುತ್ತಾ ಬಂದಿರುವ ರೆಡ್ ಕ್ರಾಸನ ಜನೌಷಧಿ ಸಂಸ್ಥೆಗೆ ಶುಭ ಕೋರಿದರು. ರೆಡ್ ಕ್ರಾಸನ ಉಪ ಸಭಾಪತಿ ಡಾ. ಉಮೇಶ ಪುತ್ರನ್ ಅತಿಥಿ-ಅಭ್ಯಾಗತರನ್ನು, ಅರ್ಹ ಫಲಾನುಭವಿಗಳನ್ನು ಸ್ವಾಗತಿಸಿ, ಜನೌಷಧಿ ಕೇಂದ್ರಕ್ಕೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲೆಂದು ಹಾರೈಸಿದರು. ಕುಂದಾಪುರ ರೆಡ್ ಕ್ರಾಸನ ಸಭಾಪತಿ ಎಸ್ ಜಯಕರ ಶೆಟ್ಟಿಯವರು ಪ್ರಾಸ್ತಾವಿಕ ಭಾಷಣ ಮಾಡಿ, ಈ ಜನೌಷಧಿ ಕೇಂದ್ರದ ಸ್ಥಾಪನೆಯಿಂದ ಇಲ್ಲಿಯ ತನಕದ ಘಟನೆಗಳನ್ನು ವಿವರಿಸುತ್ತಾ, ಪ್ರತಿ ದಿನ 350 ರಿಂದ 400 ಗ್ರಾಹಕರು ಈ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದು, ಈ ಕೇಂದ್ರದ ಯಶಸ್ಸಿಗೆ ಶ್ರಮಿಸಿದ ಸಿಬ್ಬಂದಿ ವರ್ಗ, ಗ್ರಾಹಕ ವೃಂದ, ವೈದ್ಯರು, ರೆಡ್ ಕ್ರಾಸನ ಆಡಳಿತ ಮಂಡಳಿ ಮತ್ತು ಸದಸ್ಯರುಗಳಿಗೆ ಅಭಿನಂದಿಸಿ ಕೃತಜ್ಞತೆ ಅರ್ಪಿಸಿದರು. ಫಾರ್ಮಾಸ್ಯುಟಿಕಲ್ ಮತ್ತು ಮೆಡಿಕಲ್ ಡಿವೈಸಸ್ ಬ್ಯೂರೊ ಅಫ್ ಇಂಡಿಯಾದ ಮಾರ್ಕೆಟಿಂಗ್ ಆಫೀಸರ್ ಶಿವಕುಮಾರ ಮಾತನಾಡಿ, ದೇಶದಾದ್ಯಂತ ಜನೌಷಧಿ ಕೇಂದ್ರದ ಚಟುವಟಿಕೆ, ಕಾರ್ಯ ವ್ಯಾಪ್ತಿಯನ್ನು ತಿಳಿಸಿ, ಕುಂದಾಪುರ ಜನೌಷಧಿ ಕೇಂದ್ರವು ರಾಜ್ಯದಲ್ಲೆ ಮೊದಲ ಐದು ಸ್ಥಾನದಲ್ಲಿ ಇದ್ದು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ. ಈ ಕೇಂದ್ರದ ಸಾಧನೆಗಾಗಿ ” ಜನೌಷಧಿ ಸರ್ವ ಶ್ರೇಷ್ಠ 2025-26 ” ಪ್ರಶಸ್ತಿಯೊಂದಿಗೆ ಗುರುತಿಸಿ ಗೌರವಿಸಲಾಗಿದೆ ಎಂದು ಬಣ್ಣಿಸಿದರು. ಇದರ ಯಶಸ್ಸಿಗೆ ಆಡಳಿತ ಮಂಡಳಿ ಮತ್ತು ಸ್ನೇಹಮಯಿ ಸಿಬ್ಬಂದಿ ವರ್ಗವೇ ಕಾರಣ ಎಂದರು. ಇನ್ನೂ ಹೆಚ್ಚಿನ ಎತ್ತರಕ್ಕೆ ಈ ಕೇಂದ್ರ ಬೆಳೆಯಲಿ ಎಂದು ಹಾರೈಸಿದರು.
ರೆಡ್ ಕ್ರಾಸನ ಆಡಳಿತ ಮಂಡಳಿಯ ಸದಸ್ಯರಾದ ವೈ ಸೀತಾರಾಮ ಶೆಟ್ಟಿ ವಂದಾನಾರ್ಪಣೆ ಮಾಡಿದರು. ಸೀತಾರಾಮ ನಕ್ಕತ್ತಾಯ, ಗಣೇಶ್ ಆಚಾರ್ಯ, ಡಾ. ಸೋನಿ ಡಿ ಕೋಸ್ಟ, ಸರಸ್ವತಿ ಪುತ್ರನ್, ಮುತ್ತಯ್ಯ ಶೆಟ್ಟಿ, ಖಜಾಂಜಿ ಶಿವರಾಮ ಶೆಟ್ಟಿ, , ಜನೌಷಧಿ ಕೇಂದ್ರದ ಚಂದ್ರಶೇಖರ, ಸದಸ್ಯರಾದ ದಿನಕರ ಶೆಟ್ಟಿ, ಹುಂತ್ರಿಕೆ ಸುಧಾಕರ ಶೆಟ್ಟಿ, ರಾಧಾಕೃಷ್ಣ ಶೆಟ್ಟಿ ಗಣೇಶ ಪುತ್ರನ್ ಮತ್ತು ಇನ್ನಿತರು, ರಕ್ತನಿಧಿ ಕೇಂದ್ರ ಹಾಗೂ ಜನೌಷಧಿ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಬ್ಲಡ್ ಶುಗರ್, ಬ್ಲಡ್ ಪ್ರೇಶರ್ ಪರೀಕ್ಷೆಗಳನ್ನು 162 ಮಂದಿಗೆ ಉಚಿತವಾಗಿ ಮಾಡಲಾಯಿತು. ಅರ್ಹ ಫಲಾನುಭವಿಗಳಿಗೆ ಪ್ರೋಟಿನ್ ಪೌಡರ್ ಹಾಗೂ ಅಡಲ್ಟ್ ಡಯಪರ್ ವಿತರಿಸಲಾಯಿತು.

