

ಮಂಗಳೂರು; ಸಂತ ರೀಟಾ ಆಂಗ್ಲ ಮಾಧ್ಯಮ ಶಾಲೆ ಕಾಸ್ಸಿಯಾ, ಜೆಪ್ಪು ಮಂಗಳೂರು ಇಲ್ಲಿ 2026-27ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಸಭೆಯು ದಿನಾಂಕ : 20.06.2026 ರಂದು ರೆ ಫಾ. ರಿತೇಶ್ ರೊಡ್ರಿಗಸ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಕ್ಕಳ ಭಾವನೆಗಳನ್ನು ಅರ್ಥ ಮಾಡಿಕೊಂಡು ಮಕ್ಕಳನ್ನು ನಮ್ಮ ಆಸ್ತಿಯನ್ನಾಗಿ ಮಾಡೋಣ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಕ್ರೈಸ್ತ ಧರ್ಮ ಅಧ್ಯಯನ ಪೀಠದ ಮುಖ್ಯಸ್ಥರು ವಂದನೀಯ ಗುರುಗಳು ಡಾ|| ಸುನಿಲ್ ಜಾರ್ಜ್ ಡಿಸೋಜಾ ರವರು ಮಾತನಾಡಿದರು.
ದೀಪ ಬೆಳಗಿಸುವುದರ ಮೂಲಕ 2026 – 27 ನೇ ಸಾಲಿನ ಸಭೆಗೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳಿಂದ ಸ್ವಾಗತ ನೃತ್ಯವನ್ನು ಪ್ರಸ್ತುತಪಡಿಸಲಾಯಿತು. 2025-26 ನೇ ಸಾಲಿನ ಶಿಕ್ಷಕ – ರಕ್ಷಕ ಸಂಘದ ಕಾರ್ಯ ಚಟುವಟಿಕೆಗಳ ಒಂದು ಸಂಕ್ಷಿಪ್ತ ಪ್ರಸ್ತುತಿಯನ್ನು ಹೆತ್ತವರಿಗೆ ಪ್ರದರ್ಶಿಸಲಾಯಿತು.
2025 – 26 ನೇ ಸಾಲಿನ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ 16 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ನಂತರ ಮುಖ್ಯ ಅತಿಥಿಗಳು ಹೆತ್ತವರಿಗೆ ಮಕ್ಕಳನ್ನು ಯಾವ ರೀತಿ ಭಾವನಾತ್ಮಕವಾಗಿ ಬೆಳೆಸಬಹುದು ಎಂದು ಮಾರ್ಗದರ್ಶನ ನೀಡಿದರು. ಮುಖ್ಯ ಶಿಕ್ಷಕಿ ಮೆಟಿಲ್ಡಾ ಡಿಕೋಸ್ತಾರವರು ಶಾಲಾ ನಿಯಮ ನಿರ್ಬಂಧನೆಗಳ ಬಗ್ಗೆ ಪೋಷಕರಿಗೆ ವಿವರಿಸಿದರು.
ಪ್ರಸ್ತುತ 2026-27ನೇ ಸಾಲಿನ ಶಿಕ್ಷಕ – ರಕ್ಷಕ ಸಂಘದ ಕಾರ್ಯಕಾರಿ ಸಮಿತಿಗೆ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು. ಹಾಗೂ ಹೂ ನೀಡಿ ಅವರನ್ನು ಅಭಿನಂದಿಸಲಾಯಿತು ತದನಂತರ ವಂದನೀಯ ಗುರುಗಳಾದ ರಿತೇಶ್ ರೊಡ್ರಿಗಸ್ ಅಧ್ಯಕ್ಷೀಯ ಭಾಷಣವನ್ನು ಮಾಡಿದರು. ಶಾಲಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಶಿಕ್ಷಕ – ರಕ್ಷಕ ಸಂಘದ ಕೋಶಾಧಿಕಾರಿಯಾಗಿರುವ ಮೊಹಮ್ಮದ್ ಇಮ್ರಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿಯಾದ ಶ್ರೀಮತಿ ಶಾಂತಿ ಡಿಸೋಜರವರು ಎಲ್ಲರನ್ನು ಸ್ವಾಗತಿಸಿದರು. ಶ್ರೀಮತಿ ರೈನಾ ಫ್ಲೋರ ಡಿಸೋಜರವರು ವಂದಿಸಿದರು. ಶ್ರೀಮತಿ ಚೈತ್ರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.




