

ಮುಂಬೈ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯು ಭಾರೀ ಅನಾಹುತಕ್ಕೆ ಕಾರಣವಾಗಿದೆ. ಪ್ರವಾಹದ ನೀರು ಹಿಂದೂಸ್ತಾನ್ ಪೆಟ್ರೋಲಿಯಂ ಕರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್)ನ ಪಾತಾಳಗಂಗಾ ಎಲ್ಪಿಜಿ ಬಾಟ್ಲಿಂಗ್ ಘಟಕಕ್ಕೆ ನುಗ್ಗಿದ ಪರಿಣಾಮ ಸುಮಾರು 3,000 ತುಂಬಿದ ಹಾಗೂ ಖಾಲಿ ಎಲ್ಪಿಜಿ ಸಿಲಿಂಡರ್ಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿ ಪಾತಾಳಗಂಗಾ ನದಿಯಲ್ಲಿ ತೇಲುತ್ತಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ
ಪನ್ವೇಲ್ ತಾಲ್ಲೂಕಿನಲ್ಲಿರುವ ಎಚ್ಪಿಸಿಎಲ್ನ ಪಾತಾಳಗಂಗಾ ಘಟಕದಲ್ಲಿ ಪ್ರವಾಹದ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿತ್ತು. ನೀರಿನ ರಭಸಕ್ಕೆ ಘಟಕದ ಸುರಕ್ಷತಾ ವ್ಯವಸ್ಥೆ ಹಾನಿಗೊಳಗಾದ ಪರಿಣಾಮ ಸಾವಿರಾರು ಸಿಲಿಂಡರ್ಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಈ ಸಿಲಿಂಡರ್ಗಳು ನದಿಯ ಮೂಲಕ ಕೆಳಭಾಗದ ಪ್ರದೇಶಗಳಿಗೆ ಹರಿದು ಹೋಗಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ
ಈ ಘಟನೆಯ ಬಳಿಕ ರಾಯಗಢ ಜಿಲ್ಲಾಧಿಕಾರಿ ಕಿಶನ್ ಜವಾಲೆ ಸರ್ವಜನಿಕರಿಗೆ ವಿಶೇಷ ಎಚ್ಚರಿಕೆ ನೀಡಿದ್ದಾರೆ. ನದಿ, ಕಾಲುವೆ ಅಥವಾ ದಡದಲ್ಲಿ ತೇಲಿ ಬಂದಿರುವ ಯಾವುದೇ ಎಲ್ಪಿಜಿ ಸಿಲಿಂಡರ್ಗಳನ್ನು ಮುಟ್ಟಬಾರದು, ಮನೆಗೆ ಕೊಂಡೊಯ್ಯಬಾರದು ಅಥವಾ ಬಳಸಲು ಯತ್ನಿಸಬಾರದು ಎಂದು ಅವರು ಮನವಿ ಮಾಡಿದ್ದಾರೆ.ಇದ್ದರು.



