ಕೋಲಾರ: ಕಾರ್ಯ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತರ ಇಲಾಖಾ ಮುಖ್ಯಸ್ತರು ನೀಡಿರುವ ಗುರಿಯನ್ನು ನಿಗಧಿತ ಅವಧಿಯೊಳಗೆ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿ ನ್ಯಾಯಾಂಗ ಸಭಾಂಗಣದಲ್ಲಿ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಸರ್ಕಾರವು ವಿವಿಧ ಕಾರ್ಯಕ್ರಮಗಳಲ್ಲಿ ಅಲ್ಪಸಂಖ್ಯಾತರಿಗೆ ನೀಡಿರುವ ಸೌಲಭ್ಯಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೋಲಾರ ಜಿಲ್ಲೆಯಲ್ಲಿ ಒಟ್ಟು 229492 ಅಲ್ಪಸಂಖ್ಯಾತರಿದ್ದು, ಜನಗಣತಿಯ ಆಧಾರದ ಮೇಲೆ ಶೇ. 14.93 ರಷ್ಟು ವಾಸವಿರುತ್ತಾರೆ.
ಜಿಲ್ಲೆಯಲ್ಲಿ ಗಾಜಲದಿನ್ನೆ ಮತ್ತು ಬಾಲಸಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ 2 ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲಿ ಒಟ್ಟು 493 ವಿದ್ಯಾರ್ಥಿಗಳು, ಮೌಲನಾ ಅಜಾದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 582 ವಿದ್ಯಾರ್ಥಿಗಳು ದಾಖಲಾಗಿರುತ್ತಾರೆ. ಒಟ್ಟು ಜಿಲ್ಲೆಯಲ್ಲಿ 6 ಅಲ್ಪಸಂಖ್ಯಾತರ ಮೇಟ್ರಿಕ್ ನಂತರ ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ ಒಟ್ಟು 219 ವಿದ್ಯಾರ್ಥಿಗಳು ದಾಖಲಾಗಿರುತ್ತಾರೆ. ಅಲ್ಪಸಂಖ್ಯಾತರ ಮಾದರಿ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 2 ವಸತಿ ಶಾಲೆಗಳು ಕೆ.ಜಿ.ಎಫ್, ಶ್ರೀನಿವಾಸಪುರ 1 ವಸತಿ ಶಾಲೆಯಲ್ಲಿ ಶೇ.100 ರಷ್ಟು ಮುಳಬಾಗಿಲು ಹಾಗೂ ಬಂಗಾರಪೇಟೆ ವಸತಿ ಶಾಲೆಗಳು 96.86 ಶೇ ಪಲಿತಾಂಶವನ್ನು ಪಡೆದಿರುತ್ತಾರೆ. ಈ ವಿಷಯವು ಜಿಲ್ಲೆಗೆ ಹೆಮ್ಮೆ ತರುವಂತ ವಿಷಯವಾಗಿದೆ. ಗ್ರಾಮೀಣ ಭಾಗದಲ್ಲಿ ವಸತಿ ನಿಲಯಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸಿ ಹೆಚ್ಚು ಪಲಿತಾಂಶಗಳನ್ನು ಪಡೆಯುವಲ್ಲಿ ಶ್ರಮವಹಿಸಬೇಕು ಎಂದರು.
ಮೇಟ್ರಿಕ್ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿಗಳ ಕೆ.ಜಿ.ಎಫ್, ಶ್ರೀನಿವಾಸಪುರ, ಮಾಲೂರು ಹಾಗೂ ಬಂಗಾರಪೇಟೆ ತಾಲ್ಲೂಕುಗಳಲ್ಲಿ ಒಟ್ಟು 5 ವಿದ್ಯಾರ್ಥಿ ನಿಲಯಗಳು ಅಗತ್ಯವಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಲು ಅಗತ್ಯ ನಿವೇಶನ ನೀಡುವುದಾಗಿ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಪುರಸಭೆ ಹಾಗೂ ನಗರಸಭೆ, ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ, ರೇಷ್ಮೆ ಇಲಾಖೆ, ಪಶು ಪಾಲನ ಇಲಾಖೆ, ಮೀನುಗಾರಿಕೆ ಇಲಾಖೆ, ಎಲ್ಲಾ ತಾಲ್ಲೂಕು ಪಂಚಾಯಿತಿಗಳಲ್ಲಿ ಅಲ್ಪಸಂಖ್ಯಾತರ ಯೋಜನೆಯಡಿ ಬರುವ ಎಲ್ಲಾ ಇಲಾಖೆಗಳ ಪ್ರಗತಿಯನ್ನು ಸಮಗ್ರವಾಗಿ ಪರಿಶೀಲಿಸಿ ಆಯಾ ಇಲಾಖೆಗಳಿಗೆ ನಿಗಧಿಪಡಿಸಲಾಗಿರುವ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಗಮನಹರಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಿವಕುಮಾರ್, ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಮುರಳಿ, ಕೃಷಿ ಜಂಟಿ ನಿರ್ದೇಶಕಿ ಸುಮ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀನಿವಾಸ್, ತೋಟಗಾರಿಕ ಉಪನಿರ್ದೇಶಕರಾದ ಕುಮಾರಸ್ವಾಮಿ, ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.