

ಕುಂದಾಪುರದ ವಿಜಯಲಕ್ಷ್ಮೀ ಟ್ರೇಡರ್ಸ್ ಮಾಲಕಿ, ಗುರುಪ್ರಸಾದ ಮಹಿಳಾ ಮಂಡಳಿ ಅಧ್ಯಕ್ಷೆ, ಹಿರಿಯ ಕಲಾವಿದೆ ಶ್ರೀಮತಿ ಹಾಲಾಡಿ ಲಕ್ಷ್ಮೀದೇವಿ ವಾಸುದೇವ ಕಾಮತ್ ಆದಿತ್ಯವಾರ ಮಾರ್ಚ್ 2 ರಂದು ನಿಧನರಾದರು. (ವರ್ಷ 76)
ತಮ್ಮ ವ್ಯವಹಾರ ಜ್ಞಾನ, ಕ್ರಿಯಾಶೀಲತೆ, ಸಂಘಟನಾ ಶಕ್ತಿ, ಕಲೆ, ಸಾಹಿತ್ಯ, ಸಂಗೀತ, ಜನಪದ ಸಂಸ್ಕøತಿ ಬಗ್ಗೆ ಆಸಕ್ತಿಯಿಂದ ಸದಾ ಕ್ರಿಯಾಶೀಲರಾಗಿರುತ್ತಿದ್ದ ಹಾಲಾಡಿ ಲಕ್ಷ್ಮೀದೇವಿ ಕಾಮತ್ ತಮ್ಮ ಕೃತಿಗಳಾದ ಜೀವನ ಚಕ್ರ, ವೇದ ಸಾರ, ಜೋ… ಜೋ…., ಜಾನಪದ ಜೋಗುಳ ಗೀತೆ, ಕೃತಿಗಳಿಂದಲೂ ಜನಪ್ರಿಯರಾದವರು. ಕೊಂಕಣಿ, ಶಿಶುಗೀತೆಗಳ ಧ್ವನಿ ಪೆಟ್ಟಿಗೆ ಪ್ರಣಾಳಿಕೆ ತಂದವರು. ತಾಲೂಕಿನ ಅನೇಕ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷತೆಯೂ ಸೇರಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದವರು.
‘ಕೊಂಕಣಿ ಕಲಾ ಸಮಾಜದ’ದ ಅಧ್ಯಕ್ಷರಾಗಿ ಹಲವು ಸಮ್ಮೇಳನ ನಡೆಸಿದವರು. ಕೊಂಕಣಿ ಮಕ್ಕಳ ಸಂಘದ ಮೂಲಕ ಮಕ್ಕಳಿಗೆ ರಂಗ ಕಲೆ, ಯಕ್ಷಗಾನ, ಸಂಗೀತ ತರಬೇತಿ ವ್ಯವಸ್ಥೆ ಮಾಡುತ್ತಿದ್ದರು.
ಮಂಗಳೂರಿನ ಚೆಂಬರ್ ಆಫ್ ಕಾಮರ್ಸ್, ಕೆ. ಎಸ್. ಎಸ್. ಐ. ಸಿ. ಸದಸ್ಯರಾಗಿದ್ದ ಇವರು ಜಿಂಗಲ್ ಬೆಲ್ಸ್, ನರ್ಸರಿ ಶಾಲೆಯನ್ನು ಮಂಗಳೂರಿನ ಬಿಜೈಯಲ್ಲಿ ಸಂಚಾಲಕಿಯಾಗಿ ನಡೆಸಿದವರು. ಸ್ವತ: ಹಾಡುಗಾರರಾಗಿ ಆಕಾಶವಾಣಿ, ದೂರದರ್ಶನಗಳಲ್ಲೂ ಕಾರ್ಯಕ್ರಮ ನೀಡಿದ್ದಾರೆ. ಹಲವು ನಾಟಕಗಳನ್ನು ರಚಿಸಿ, ನಿರ್ದೇಶಿಸಿ ಅಭಿನಯಿಸಿದವರು.
ಕನ್ನಡ, ಕೊಂಕಣಿ ಸಾಹಿತ್ಯದ ಅಭಿವೃದ್ಧಿಗೆ ಇವರ ಕೊಡುಗೆ ದೊಡ್ಡದು.
ಇವರು ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.