ಕುಂದಾಪುರ: ಕುಂದಾಪುರ ನಗರದಲ್ಲಿ ಸೋಮವಾರ ಸಂಜೆ ನಡೆದ ಮೂರು ಕಡೆಯ ನವರಾತ್ರಿ ಶಾರದೆ ವಿಸರ್ಜನಾ ಮೆರವಣಿಗೆ ಹಾಗೂ ದರ್ಗಾದ ಉರೂಸ್ ಕಾರ್ಯಕ್ರಮದ ವೇಳೆ ಹಿಂದೂ ಮುಸ್ಲೀಂ ಭಾವೈಕ್ಯತೆ, ಸೌಹಾರ್ಧತೆ, ಪರಸ್ಪರ ಸಹಕಾರ ಕಂಡುಬಂತು.
ಕುಂದಾಪುರದ ಶ್ರೀರಾಮಮಂದಿರ ದೇವಸ್ಥಾನ, ವೆಂಕಟರಮಣ ದೇವಸ್ಥಾನ, ರಕ್ತೇಶ್ವರಿ ದೇವಸ್ಥಾನದ ನವರಾತ್ರಿಯ ಶಾರದಾ ದೇವಿ ವಿಸರ್ಜನಾ ಮೆರವಣಿಗೆ ಮತ್ತು ಕುಂದಾಪುರದ ಜೆ.ಎಮ್ ರಸ್ತೆಯ ಹಝ್ರತ್ ಸುಲ್ತಾನ್ ಸಯ್ಯಿದ್ ಯೂಸುಫ್ ವಲಿಯುಲ್ಲಾಹಿ ದರ್ಗಾದ ವಾರ್ಷಿಕ ಕುಂದಾಪುರ ಉರೂಸ್ ಮುಬಾರಕ್ ಕಾರ್ಯಕ್ರಮ ಸೋಮವಾರ ಸಂಜೆ ಏಕಕಾಲದಲ್ಲಿ ಜರುಗಬೇಕಿತ್ತು. ಪೊಲೀಸರು ಮೊದಲೇ ಎರಡು ಧರ್ಮದ ಮುಖಂಡರ ಬಳಿ ಸಮನ್ವಯತೆ ಸಾಧಿಸಿ ಮೂರು ಮೆರವಣಿಗೆ ಹಾಗೂ ಉರೂಸ್ ಕಾರ್ಯಕ್ರಮ ಸಂಭ್ರಮದಿಂದ ಜರುಗುವ ಸಲುವಾಗಿ ಸಮಯ ನಿಗದಿ ಮಾಡಿದ್ದರು. ಅದರಂತೆಯೇ ರಾಮ ಮಂದಿರ ಮತ್ತು ವೆಂಕಟರಮಣ ದೇವಸ್ಥಾನದ ಮೆರವಣಿಗೆ ಒಂದೂವರೆ ಗಂಟೆಗಳ ಅಂತರದಲ್ಲಿ ನಡೆದಿದ್ದು ಇದರ ನಡುವಿನ ಸಮಯದಲ್ಲಿ ಉರೂಸ್ ಮೆರವಣಿಗೆ ಸಾಗಿತು.
ಉರೂಸ್ ಹಿನ್ನೆಲೆ ದರ್ಗಾ ಸಮೀಪದಿಂದ ಫೆರ್ರಿ ರಸ್ತೆ ಪಾರ್ಕ್ ತನಕ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ರಾಮಮಂದಿರ, ವೆಂಕಟರಮಣ ದೇವಸ್ಥಾನದಲ್ಲಿನ ಶಾರದಾ ಮೂರ್ತಿ ಮೆರವಣಿಗೆ ಸಾಗುವಾಗ ಎತ್ತರದ ವಿದ್ಯುತ್ ದೀಪಾಲಂಕಾರ ಹಾಗೂ ಆರಂಭದಲ್ಲಿ ಹಾಕಿದ ಸ್ವಾಗತ ಕಮಾನು ತಡೆಯಾಗುವ ಹಂತದಲ್ಲಿದ್ದು ಕಮಾನಿನ ಮೇಲ್ಭಾಗವನ್ನು ಮುಸ್ಲೀಂ ಬಾಂಧವರು ತೆರವು ಮಾಡಿದರು. ವಿದ್ಯುತ್ ದೀಪಾಲಂಕಾರಕ್ಕೆ ತಗುಲದಂತೆ ಅಗತ್ಯಕ್ರಮಗಳನ್ನು ಮಾಡಿಕೊಟ್ಟು ಮೆರವಣಿಗೆ ಸುಗಮವಾಗಿ ಸಾಗಲು ಅನುವು ಮಾಡಿಕೊಟ್ಟರು. ಮೆರವಣಿಗೆಯಲ್ಲೂ ಕೂಡ ಆ ಭಾಗದಲ್ಲಿ ತೆರಳುವಾಗ ಜಾಗಟೆ, ಚಂಡೆ ಬಾರಿಸುವುದನ್ನು ನಿಲ್ಲಿಸಿ ಮುಸ್ಲೀಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸಿದರು. ಮೆರವಣಿಗೆ ಸಾಗುವಾಗ ದರ್ಗಾ ಬಳಿ ಜಮಾಯಿಸಿದ್ದ ಮುಸ್ಲೀಂ ಬಾಂಧವರು ಪರಸ್ಪರ ಹಬ್ಬಕ್ಕೆ ಶುಭಕೋರಿದರು.
ಮುಸ್ಲೀಂ ಸಮುದಾಯದ ಮುಖಂಡರಾದ ಅಬು ಮೊಹಮ್ಮದ್ ಕುಂದಾಪುರ, ರಫೀಕ್ ಅಹಮದ್ ಗಂಗೊಳ್ಳಿ, ಶ್ರೀ ರಾಮಮಂದಿರ ದೇವಸ್ಥಾನದ ದೇವಕಿ ಸಣ್ಣಯ್ಯ, ವೆಂಕಟರಮಣ ದೇವಸ್ಥಾನದ ತ್ರಿವಿಕ್ರಮ ಪೈ, ಕೇಶವ ಭಟ್, ರಕ್ತೇಶ್ವರಿ ದೇವಸ್ಥಾನದ ವಿಶ್ವನಾಥ ಶೆಟ್ಟಿ, ಶ್ರೀಧರ್ ಪೂಜಾರಿ ಮೊದಲಾದವರು ಇದ್ದರು.
ಕುಂದಾಪುರ ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ, ಕುಂದಾಪುರ ಪೊಲೀಸ್ ನಿರೀಕ್ಷಕ ನಂದಕುಮಾರ್ ನೇತೃತ್ವದಲ್ಲಿ ಕುಂದಾಪುರ ಉಪವಿಭಾಗದ ವಿವಿಧ ಪೊಲೀಸ್ ಠಾಣೆ ಉಪನಿರೀಕ್ಷಕರು, ಸಿಬ್ಬಂದಿಗಳು ಬಂದೋಬಸ್ತ್ ನೆರವೇರಿಸಿದರು. ಕೆ.ಎಸ್.ಆರ್.ಪಿ ಹಾಗೂ ಡಿ.ಎ.ಆರ್ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.