

ಕುಂದಾಪುರ, ತೆಕ್ಕಟ್ಟೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿ, ತಂದೆ ಮತ್ತು ಮಗ ಮೃತಪಟ್ಟು, ತಾಯಿಯ ಪರಿಸ್ಥಿತಿ ಗಂಭೀರವಾದ ಘಟನೆ ಮೇ 15ರ ಗುರುವಾರ ನಡೆದಿದೆ.
ಅಂಕದಕಟ್ಟೆ ಪೆಟ್ರೋಲ್ ಬಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಧವ ದೇವಾಡಿಗ(56), ಹಾಗೂ ಅವರ ಮಗ ಪ್ರಸಾದ್ ದೇವಾಡಿಗ(22) ಮೃತಪಟ್ಟವರು.
ಕಂಚುಗಾರುಬೆಟ್ಟು ನಿವಾಸಿ, ತಾರಾ ದೇವಾಡಿಗ ಅವರ ಪರಿಸ್ಥಿತಿ ಗಂಭೀರವಾಗಿದ್ದು, ಕೋಟದ ಜೀವನ್ ಮಿತ್ರ ನಾಗರಾಜ್ ಅವರ ಆಂಬುಲೆನ್ಸ್ ಸಹಾಯದಿಂದ ತತ್ ಕ್ಷಣವೇ ಕೋಟೇಶ್ವರದ ಆಸ್ಪತ್ರೆಗೆ ಸಾಗಿಸಲಾಗಿದೆ.

ಗುರುವಾರ ಮುಂಜಾನೆ ಮನೆಯ ಸಮೀಪದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಕುಂದಾಪುರದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಮೃತ ದೇಹವನ್ನು ಮೇಲಕ್ಕೆತ್ತಲಾಗಿದೆ. ಕೋಟ ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.
ತಂದೆ ಮತ್ತು ಮಗ ಆತ್ಮಹತ್ಯೆಗೆ ಶರಣಾಗಿರುವುದನ್ನು ತಿಳಿದ ತಾಯಿ, ತಾರಾ ದೇವಾಡಿಗ ಅವರು ಬಾವಿಗೆ ಹಾರಿದ್ದು, ಅವರ ಆಕ್ರಂದನದ ಧ್ವನಿ ಕೇಳಿದ ಸ್ಥಳೀಯ ನಿವಾಸಿಗಳಾದ ಸಂತೋಷ್ ಶೆಟ್ಟಿ, ಶ್ರೀನಾಥ್ ಶೆಟ್ಟಿ ಹಾಗೂ ಸ್ಥಳೀಯರು ರಕ್ಷಣೆಗೆ ಧಾವಿಸಿದರು.
ಘಟನಾ ಸ್ಥಳದಲ್ಲಿ ಸ್ಥಳೀಯ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಕುಂದಾಪುರ ಪುರಸಭೆ ಸದಸ್ಯ ಗಿರೀಶ್ ದೇವಾಡಿಗ, ತೆಕ್ಕಟ್ಟೆ ಗ್ರಾಮ ಪಂಚಾಯಿತ್ ನ ಸದಸ್ಯರು ಮತ್ತಿತರರು ನೆರೆದಿದ್ದರು.
ಘಟನೆಯಿಂದ ಇಡೀ ಗ್ರಾಮವೇ ಬೆಚ್ಚಿಬಿದ್ದಿದ್ದು, ಪರಿಸರದಲ್ಲಿ ಮೌನ ಮಡುಗಟ್ಟಿದೆ. ಮನೆಯಲ್ಲಿ ಡೆತ್ ನೋಟ್ ಸಿಕ್ಕಿದ್ದು, ಬಡ ಕುಟುಂಬಕ್ಕೆ ಸಾಲಬಾಧೆ ಕಾಡುತ್ತಿರುವುದರಿಂದ ಮರ್ಯಾದೆಗಾಗಿ ಅಂಜಿ ಆತ್ಮಹತ್ಯೆ ಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.

