ಸುದರ್ಶನ್ ನೇತೃತ್ವದ ಜನಸ್ನೇಹಿ ತಂಡದಿಂದ `ಕೋಲಾರ ಅಂದು-ಇಂದು-ಮುಂದು’ ಶಾಸಕಾಂಗ,ಕಾರ್ಯಾಂಗದ ಸಾಫಲ್ಯತೆ ಕುರಿತು ಆತ್ಮಾವಲೋಕನ ಅಗತ್ಯ-ನ್ಯಾ.ಗೋಪಾಲಗೌಡ

ಕೋಲಾರ:- ಭಾರತದ 75ನೇ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಶಾಸನ ಮಾಡುವಲ್ಲಿ ಶಾಸಕಾಂಗ, ಅದರ ಅನುಷ್ಠಾನದಲ್ಲಿ ಕಾರ್ಯಾಂಗ ಸಫಲವಾಗಿದೆಯೇ ಎಂಬುದರ ಆತ್ಮಾವಲೋಕನ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅಭಿಪ್ರಾಯಪಟ್ಟರು.
ನಗರದ ಸುವರ್ಣ ಕನ್ನಡ ಭವನದಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ನೇತೃತ್ವದ ಜಿಲ್ಲೆಯ ಜನಸ್ನೇಹಿ ತಂಡ ಸಂವಿಧಾನದ ನಾಲ್ಕು ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮ ನಿರ್ವಹಿಸಿದ ಕರ್ತವ್ಯಗಳ ಕುರಿತಾದ `ಕೋಲಾರ ಅಂದು-ಇಂದು-ಮುಂದು’ ವಿಶಿಷ್ಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ, ಕಾರ್ಯಾಂಗದ ಕಾರ್ಯವೈಖರಿ, ಶಾಸಕಾಂಗದ ಜವಾಬ್ದಾರಿ ನಿರ್ವಹಣೆ, ನ್ಯಾಯಾಂಗದ ಜನಪರ ತೀರ್ಪು, ಜನರ ಸ್ಥಿತಿಗತಿಗಳು ಈ ಎಲ್ಲಾ ವಿಷಯಗಳ ಕುರಿತು ಆತ್ಮಾವಲೋಕನ ಅಗತ್ಯವಿದೆ ಮತ್ತು ಸಂವಿಧಾನ ನೀಡಿರುವ ಹಕ್ಕುಗಳು ಜನರಿಗೆ ತಲುಪಿದೆಯೇ ಎಂಬುದರ ಕುರಿತು ಅವಲೋಕನವೂ ಅಗತ್ಯವಿದೆ ಎಂದರು.

ರಾಜಕಾರಣವು ಮಾನವೀಯ ವಿಜ್ಞಾನ


ರಾಜಕಾರಣ,ರಾಜಕೀಯ ಎಂದರೆ ಪಕ್ಷಗಳಿಗೆ ಸೀಮಿತವಲ್ಲ ಅದು ಮಾನವೀಯ ವಿಜ್ಞಾನ ಎಂದ ಅವರು, ಕಟ್ಟಕಡೆ ವ್ಯಕ್ತಿಯಿಂದ ರಾಷ್ಟ್ರಪತಿವರೆಗೂ ಮೂಲಭೂತ ಹಕ್ಕುಗಳಿವೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ, ಆರ್ಥಿಕನ್ಯಾಯ, ರಾಜಕೀಯ ನ್ಯಾಯ ಎಲ್ಲರಿಗೂ ಸಿಕ್ಕಿದೆಯೇ ಎಂಬುದರ ಕುರಿತ ವಿಶ್ಲೇಷಣೆ ಅಗತ್ಯವಿದೆ ಎಂದರು.
1947 ರಲ್ಲಿ 39 ಕೋಟಿಯಿದ್ದ ಜನಸಂಖ್ಯೆ ಇಂದು 135 ಕೋಟಿ ಆಗಿದೆ ಇಂತಹ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳು ಎಲ್ಲರಿಗೂ ಸಿಕ್ಕಿವೆಯೇ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.
ಶಾಲೆ,ದೀಪ,ರಸ್ತೆ, ಶಾಲೆ,ಆಸ್ಪತ್ರೆ ನೀಡಿದ್ದೇವೆ ಎಂದರೂ ಇತ್ತೀಚೆಗೆ ಕೋವಿಡ್‍ನಿಂದಾದ ಸಾವುಗಳಿಗೆ ಯಾರು ಹೊಣೆ ಎಂದ ಅವರು, ಆಡಳಿತ ನಡೆಸುವವರನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ, ಅಭಿವೃದ್ದಿಗಾಗಿ ಶಾಸನಗಳಿವೆ ಆದರೆ ಅನುಷ್ಠಾನ ಸಮರ್ಪಕವಾಗಿ ಹಂಚಿಕೆಯಾಗಿಲ್ಲ ಎಂದು ವಿಷಾದಿಸಿದರು.
ಪ್ರಮಾಣವಚನ ಸ್ವೀಕರಿಸಿ ಜಾತ್ಯಾತೀತ ತತ್ವಗಳಿಗೆ ವಿರುದ್ದವಾಗಿ ನಡೆದುಕೊಳ್ಳುವವರನ್ನು ಅಧಿಕಾರದಲ್ಲಿ ಮುಂದುವರೆಯಲು ಬಿಡಬಾರದು ಎಂದ ಅವರು, ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟ್ ಸರ್ಕಾರ ಟಾಟಾ ಕಂಪನಿಗೆ ಸಾವಿರ ಎಕರೆ ಜಮೀನು ನೀಡಿದ ಪ್ರಕರಣವನ್ನು ತಾನೇ ನ್ಯಾಯಮೂರ್ತಿಯಾಗಿದ್ದಾಗ ರದ್ದು ಪಡಿಸಿದ್ದೆ ಎಂದು ಸ್ಮರಿಸಿದರು.

ಹೋರಾಟ ಜೀವಂತ ಪ್ರಜಾಪ್ರಭುತ್ವಕ್ಕೆ ಅರ್ಥ


ಮಾಜಿ ಸಭಾಪತಿ ಹಾಗೂ ಜನಸ್ನೇಹಿ ತಂಡದ ನೇತೃತ್ವ ವಹಿಸಿ ಕಾರ್ಯಕ್ರಮ ಆಯೋಜಿಸಿರುವ ವಿ.ಆರ್.ಸುದರ್ಶನ್ ಪ್ರಾಸ್ತಾವಿಕವಾಗಿ ಮಾತನಾಡಿ, ಹೋರಾಟಗಳು ಜೀವಂತವಾಗಿದ್ದರೆ ಮಾತ್ರವೇ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ ಎಂದರು.
ದೇಶ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ದೇಶ ಮಾತ್ರವಲ್ಲ ಕೋಲಾರದ ಅಭಿವೃದ್ದಿಯ ಕುರಿತು ತಿಳಿದುಕೊಳ್ಳುವ ಪುಟ್ಟ ಹೆಜ್ಜೆ ಈ ಕಾರ್ಯಕ್ರಮವಾಗಿದೆ, ಮನಸ್ಸುಗಳ ಪರಿವರ್ತನೆಯ ಮೂಲಕ ದೇಶದಲ್ಲಿ ಸ್ವಾತಂತ್ರ್ಯದ ಸವಿ ಸಮಾನವಾಗಿ ಹಂಚಿಕೆಯಾಗಬೇಕು ಎಂದರು.
ಜನಪರ,ಮಾನವೀಯ ಹಾಗೂ ಪ್ರಪಂಚದ ಅತಿ ಶ್ರೇಷ್ಠ ಸಂವಿಧಾನವಾªಗಿದೆ ಎಂದ ಅವರು, ಸಂವಿಧಾನ ಅರ್ಥ ಮಾಡಿಕೊಳ್ಳಲು ಮೊದಲು ದೇಶವನ್ನು ಅರ್ಥಮಾಡಿಕೊಳ್ಳಬೇಕು, 12ನೇ ಶತಮಾನದ ಬಸವಣ್ಣನವರ ಅನುಭವ ಮಂಟಪ ಸಂವಿಧಾನಕ್ಕೆ ಪ್ರೇರಣೆಯಾಗಿದೆ, ಶೋಷಿತರ ಧ್ವನಿಯಾಗುವ ರೀತಿ ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ ಎಂದರು.
ಕಾಲಕಾಲಕ್ಕೆ ತಕ್ಕಂತೆ ಸಂವಿಧಾನದಡಿ ಅನೇಕ ತಿದ್ದುಪಡಿ, ಕಾಯಿದೆಗಳು ರೂಪಿತವಾಗಿವೆ, ಅದರಲ್ಲಿ ಅಧಿಕಾರ ವಿಕೇಂದ್ರೀಕರಣ ತಿದ್ದುಪಡಿ, 18 ವರ್ಷಕ್ಕೆ ಮತದಾಹದ ಹಕ್ಕು, ಶೋಷಿತರಿಗೆ ನ್ಯಾಯ ಒದಗಿಸುವ ಎಸ್ಸಿಎಸ್ಟಿ ಆಯೋಗ ರಚನೆ,ಶಿಕ್ಷಣ ಹಕ್ಕು ಕಾಯಿದೆ ಮತ್ತಿತರವನ್ನು ಉದಾಹರಿಸಿದರು.
ಶಿಕ್ಷಣಕ್ಕೂ ಕೋಲಾರ ಜಿಲ್ಲೆ ಉತ್ತಮ ಕೊಡುಗೆ ನೀಡಿದೆ, ಕೆಎಎಎಸ್, ಐಎಎಸ್‍ನಲ್ಲಿ ಜಿಲ್ಲೆಯ ಸಾಧಕರಿಗೆ ಕೊರತೆಯಿಲ್ಲ ಎಂದ ಅವರು, ಇತ್ತೀಚೆಗೆ ಎಸ್ಪಿ ದೇವರಾಜ್ ಅವರು ಸ್ವರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರ ಸ್ಥಾಪನೆಯ ಪ್ರಯತ್ನ ಮಾಡಿರುವುದು ಶ್ಲಾಘನೀಯ ಎಂದರು.
ಕೆಸಿ ವ್ಯಾಲಿ,ಎತ್ತಿನಹೊಳೆ,ಯರಗೋಳು ಯೋಜನೆಗಳ ಅನುಷ್ಟಾನದ ಜತೆಗೆ ಪರಿಶಿಷ್ಟರು, ಹಿಂದುಳಿದವರ ಸಾಮಾಜಿಕ,ಆರ್ಥಿಕ ಸುಧಾರಣೆಗೆ ಒತ್ತು ಅಗತ್ಯವಿದೆ, ಸಾಮಾಜಿಕ ಕಲ್ಯಾಣ ಯೋಜನೆಗಳು ರಾಜ್ಯದಲ್ಲಿ ಇರುವುದರಿಂದಲೇ ಇಲ್ಲಿ ನಕ್ಸಲ್ ಸಮಸ್ಯೆ ಕಡಿಮೆ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ವೆಂಕಟ್‍ರಾಜಾ ಅನುಪಸ್ಥಿತಿಯಲ್ಲಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ವಹಿಸಿದ್ದರು.
ಇದೇ ಸಂದರ್ಭದಲ್ಲಿ ಮಾಜಿ ಯೋಧ ಜಗನ್, ರೈತ ಮುಖಂಡರಾದ ರಾಧಾಕೃಷ್ಣ, ನೆನುಮನಹಳ್ಳಿ ಚಂದ್ರಶೇಖರ್, ಕಾರ್ಮಿಕಮುಖಂಡ ಯಲ್ಲಪ್ಪ, ಮಹಿಳಾ ಮುಖಂಡರಾದ ಅಂಧ್ರಹಳ್ಳಿ ಶಾಂತಮ್ಮ, ಮಂಜುಳಾ ಭೀಮರಾವ್, ಸ್ವಾತಂತ್ರ್ಯ ಹೋರಾಟಗಾರ ಮುನಿಸ್ವಾಮಿ ಅವರ ಪತ್ನಿ ಗೌರಮ್ಮ, ಪೌರ ಕಾರ್ಮಿಕರು ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.
ಜನಸ್ನೇಹಿ ತಂಡದ ಜಯರಾಜ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಶ್ಚೇತಾ ಶಬರೀಷ್,ಉಪಾಧ್ಯಕ್ಷ ಬಿ.ಅಸ್ಲಂ ಪಾಷಾ, ವಕೀಲರ ಸಂಘದ ಅಧ್ಯಕ್ಷ ಶ್ರೀಧರ್, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಸುರೇಶ್, ಜನಸ್ನೇಹಿ ತಂಡದ ಆರ್.ಕಿಶೋರ್‍ಕುಮಾರ್,ರಾಧಾಕೃಷ್ಣ, ಅಲ್ತಾಪ್, ನಾರಾಯಣಪ್ಪ, ಮಂಜುನಾಥ್, ಎಸ್.ಆರ್.ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದು, ರಾಜ್‍ಕುಮಾರ್,ಮಂಜುಳಾ ಕಾರ್ಯಕ್ರಮ ನಿರೂಪಿಸಿ, ಕಲಾವಿದ ಜನ್ನಘಟ್ಟ ಕೃಷ್ಣಮುರ್ತಿ ಗಾಯನ, ವಂದೇಮಾತರಂ, ನಾಡಗೀತೆ ನಡೆಸಿಕೊಟ್ಟರು.