ಶ್ರೀನಿವಾಸಪುರ: ಕನಕದಾಸರು ಮಾನವೀಯ ನೆಲೆಯಲ್ಲಿ ರಚಿಸಲ್ಪಟ್ಟ ಕೀರ್ತನೆಗಳಲ್ಲಿ ಸರ್ವಕಾಲಿಕ ಮಾನವೀಯ ಮೌಲ್ಯ ಅಡಗಿದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ಏರ್ಪಡಿಸಿದ್ದ ಕನಕದಾಸರ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಸರ್ವ ಜನಾಂಗದ ಒಳಿತನ್ನೇ ಬಯಸಿದ ಕನಕದಾಸರನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂದು ಹೇಳಿದರು.
ಕ್ಷೇತ್ರದಲ್ಲಿ ಮನೆ ಇಲ್ಲದವರಿಗೆ ಮನೆ ನಿರ್ಮಿಸಿ ಕೊಡಲಾಗುವುದು. ಮನೆ ಅಗತ್ಯ ಇರುವ ಕುಟುಂಬಗಳನ್ನು ಪಕ್ಷಾತೀತವಾಗಿ ಗುರ್ತಿಸಿ ಪಟ್ಟಿ ಮಾಡುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ತಾಲ್ಲೂಕಿನ ಮದನಪಲ್ಲಿ ಹಾಗೂ ಮುಳಬಾಗಿಲು ರಸ್ತೆ ಪಕ್ಕದಲ್ಲಿ 3 ಸಾವಿರ ಎಕರೆ ವಿಸ್ತೀರ್ಣದಲ್ಲಿ ಕೈಗಾರಿಕಾ ಕ್ಷೇತ್ರ ನಿರ್ಮಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಕೈಗಾರಿಕೆ ಸ್ಥಾಪನೆಯಿಂದ ಯುವಕರಿಗೆ ಕೆಲಸ ಸಿಗುತ್ತದೆ ಎಂದು ಹೇಳಿದರು.
ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಮಾತನಾಡಿ, ಕನಕದಾಸರು 16ನೇ ಶತಮಾನದಲ್ಲಿ ಸಮಾಜದ ಡೊಂಕು ತಿದ್ದಲು ಪ್ರಯತ್ನಿಸಿದ ಮಹಾನ್ ಸಂತ. ಅವರ ಸಾಮಾಜಿಕ ಕಳಕಳಿ ಅನನ್ಯ ಹಾಗೂ ಅನುಕರಣೀಯ. ವಿದ್ಯಾರ್ಥಿಗಳು ಕನಕದಾಸರ ಜೀವನ ಚರಿತ್ರೆ ಓದಬೇಕು. ಅವರ ಸಾಹಿತ್ಯ ಕೃತಿಗಳ ಅಧ್ಯಯನ ಮಾಡಬೇಕು ಎಂದು ಹೇಳಿದರು.
ಭೈರವೇಶ್ವರ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಎ.ವೆಂಕಟರೆಡ್ಡಿ ಮಾತನಾಡಿ, ಕನಕದಾಸರ ಸಮರ್ಪಣಾಭಾವ, ತ್ಯಾಗ, ನಿಸ್ವಾರ್ಥ ಸೇವೆ ಹಾಗೂ ವಿಶಿಷ್ಟವಾದ ಆಧ್ಯಾತ್ಮಿಕ ಚಿಂತನೆ ಕಾಲಾತೀತವಾಗಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಲಕ್ಷ್ಮಿ ಕನಕದಾಸರ ಜೀವನ ಸಾಧನೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ್ದ ಕುರುಬ ಸಮುದಾಯದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಲಾಯಿತು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರಿ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ವೇಮಣ್ಣ, ಒಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಮುಖಂಡರಾದ ಮೂರ್ತಿ, ಚನ್ನಪ್ಪ, ಪಾತಪಲ್ಲಿ ಚೌಡರೆಡ್ಡಿ, ಎನ್.ಶ್ರೀಧರ್, ವಿವಿಧ ಇಲಾಖೆಗಳ ಮುಖ್ಯಸ್ಥರಾದ ಕೆ.ಸಿ.ಮಂಜುನಾಥ್, ಕೃಷ್ಣಪ್ಪ, ಎ.ಬೈರಾರೆಡ್ಡಿ, ಶ್ರೀನಿವಾಸ್, ನವೀನ್ ಕುಮಾರ್, ಕುಮುದ, ರಾಮತೀರ್ಥ ಇದ್ದರು.
ಮೆರವಣಿಗೆ: ಪಟ್ಟಣದ ಎಂಜಿ ರಸ್ತೆಯಲ್ಲಿ, ತಾಲ್ಲೂಕಿನ ವಿವಿಧೆಡೆಗಳಿಂದ ಕನಕದಾಸರ ಭಾವಚಿತ್ರದೊಂದಿಗೆ ತರಲಾಗಿದ್ದ ಪಲ್ಲಕಿಗಳ ಮೆರವಣಿಗೆ ಏರ್ಪಡಿಸಲಾಗಿತ್ತು.