ಶ್ರೀನಿವಾಸಪುರ: ತಾಲ್ಲೂಕಿನ ಎಲ್ಲ ಗ್ರಾಮಗಳಿಗೆ ರೂ.350 ಕೋಟಿ ವೆಚ್ಚದಲ್ಲಿ ಜಲ್ ಜೀವನ್ ಮಿಷನ್ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ರೋಣೂರು ಹಾಗೂ ಕೊಳತೂರು ಗ್ರಾಮದಲ್ಲಿ ಶನಿವಾರ ಜಲ್ ಜೀವನ್ ಮಿಷನ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರೋಣೂರಿಗೆ ರೂ. 5.50 ಕೋಟಿ ಹಾಗೂ ಕೊಳತೂರಿಗೆ ರೂ.1 ಕೋಟಿ ವೆಚ್ಚದಲ್ಲಿ ಮನೆ ಮನೆಗೆ ನಲ್ಲಿ ಮೂಲಕ ನೀರು ಪೂರೈಸಲಾಗುವುದು. ಮೂರು ತಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಗ್ರಾಮ ಹಾಗೂ ಪಟ್ಟಣ ಪ್ರದೇಶದ ನಾಗರಿಕರಿಗೆ ಕುಡಿಯುವ ನೀರು ಪೂರೈಸುವುದು ಮೊದಲ ಆದ್ಯತೆಯಾಗಿದೆ. ಯಾವುದೇ ಸಂದರ್ಭದಲ್ಲಿ ಕುಡಿಯುವ ನೀರು ಪೂರೈಕೆಗೆ ತೊಂದರೆ ಆಗದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜಲ್ ಜೀವನ್ ಮಿಷನ್ ಯೋಜನೆ ಜಾರಿಗೆ ಬಂದ ಮೇಲೆ ಗ್ರಾಮೀಣ ಮಹಿಳೆಯರಿಗೆ ದೂರ ಪ್ರದೇಶದಿಂದ ನೀರು ಹೊರುವುದು ತಪ್ಪುತ್ತದೆ. ಮನೆ ಬಾಗಿಲಿಗೇ ನೀರು ಸರಬರಾಜು ಮಾಡಲಾಗುತ್ತದೆ ಎಂದು ಹೇಳಿದರು.
ಅಭಿವೃದ್ಧಿ ಕಾಮಗಾರಿ ಗುಣಮಟ್ಟ ಸರಿ ಇರುವಂತೆ ನೋಡಿಕೊಳ್ಳಬೇಕು. ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ನಾಗರಿಕರು ಕಾಮಗಾರಿ ಕೈಗೊಳ್ಳಲು ಸಹಕರಿಸಬೇಕು. ವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೆಹರ್ ತಾಜ್, ಮಣಿ, ಎಸ್.ಎಂ.ಶ್ರೀನಿವಾಸ್, ನಾರಾಯಣಗೌಡ, ಚಂದ್ರಪ್ಪ, ಆಂಜಿ, ಜಯರಾಮ್, ಜಯರಾಮೇಗೌಡ, ನಂಜುಂಡಗೌಡ ಇದ್ದರು.