ಕೋಲಾರ; ಆ.10: ಎಸ್ಸೆನ್ನಾರ್ ಜಿಲ್ಲಾಸ್ಪತ್ರೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಕೋಮಾ ಸ್ಥಿತಿಯಲ್ಲಿರುವ ಡಯಾಲಿಸಿಸ್ ಘಟಕಕ್ಕೆ ಮರುಜೀವ ಕೊಟ್ಟು ಬಡರೋಗಿಗಳ ಆರೋಗ್ಯ ರಕ್ಷಣೆ ಮಾಡಬೇಕೆಂದು ರೈತಸಂಘದಿಂದ ಜಿಲ್ಲಾಶಸ್ತ್ರಚಿಕಿತ್ಸಕ ಡಾ.ಎಸ್.ಎನ್.ವಿಜಯ್‍ಕುಮಾರ್‍ಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲೆ ಸೇರಿದಂತೆ ನೆರೆಯ ಆಂಧ್ರ ತಮಿಳುನಾಡು ರಾಜ್ಯಗಳಿಂದಲೂ ಎಸ್ಸೆನ್ನಾರ್ ಜಿಲ್ಲಾಸ್ಪತ್ರೆಗೆ ದಿನನಿತ್ಯ ಸಾವಿರಾರು ಹೊರರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಾರೆ. ಅಲ್ಲದೆ ನೂರಾರು ಮಂದಿ ಒಳರೋಗಿಗಳು ದಾಖಲಾಗಿದ್ದು, ವಿಶೇಷವಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಿರುವುದರಿಂದ ಹೆರಿಗೆ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುತ್ತವೆ. ಇಷ್ಟು ದೊಡ್ಡ ಪ್ರಮಾಣದ ಆಸ್ಪತ್ರೆಯಾಗಿದ್ದರೂ ಮೂಲಭೂತ ಸೌಕರ್ಯಗಳು ಇಲ್ಲದೆ ರೋಗಿಗಳು ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಮುಖವಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಾಗಿದ್ದು, ಒಳ ಮತ್ತು ಹೊರ ರೋಗಿಗಳು ಖಾಸಗಿ ಅಂಗಡಿಗಳಲ್ಲಿ ಹಣ ನೀಡಿ ನೀರಿನ ಬಾಟಲಿಗಳನ್ನು ಖರೀದಿಸಬೇಕಾದ ಪರಿಸ್ಥಿತಿಯಿದೆ. ಆಸ್ಪತ್ರೆಯಲ್ಲಿದ್ದ 2 ಶುದ್ಧ ಕುಡಿಯುವ ನೀರಿನ ಘಟಕಗಳು ಹಲವಾರು ತಿಂಗಳುಗಳಿಂದ ದುರಸ್ಥಿಯಾಗಿದ್ದರೂ ಅದನ್ನು ಸರಿಪಡಿಸಲು ಮುಂದಾಗಿಲ್ಲ. ಈಗಾಗಲೇ ಆರೋಗ್ಯ ಸಚಿವರು, ಸ್ಥಳೀಯ ಶಾಸಕರು, ಎಂಎಲ್ಸಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದರೂ ನೀರಿನ ಸಮಸ್ಯೆಯೂ ಬಗೆಹರಿದಿಲ್ಲ. ಜೊತೆಗೆ ಯಾವುದೇ ಬದಲಾವಣೆಗಳೂ ಆಗಿಲ್ಲ ಎಂದು ದೂರಿದರು.
ಇನ್ನು ಕೋಟ್ಯಾಂತರ ರೂ ಸರಕಾರದ ಅನುದಾನದಲ್ಲಿ ಪ್ರಾರಂಭಿಸಲಾಗಿದ್ದ ಡಯಾಲಿಸಿಸ್ ಘಟಕವು ಕೋಮಾ ಸ್ಥಿತಿಗೆ ತಲುಪಿ ಜೀವಂತ ಶವವಾಗಿದ್ದು, ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾದ ಪರಿಸ್ಥಿತಿಯಿದೆ. ಹಾಗಾಗಿ ಡಯಾಲಿಸಿಸ್ ಘಟಕದಲ್ಲಿನ ಯಂತ್ರಗಳನ್ನು ಸರಿಪಡಿಸಿ, ಸಿಬ್ಬಂದಿ ಕೊರತೆ ನೀಗಿಸಲು ನುರಿತ ತಜ್ಞರನ್ನು ನೇಮಿಸಿ ಬಡ ಜನತೆಗೆ ಆರೋಗ್ಯ ಸೇವೆ ಒದಗಿಸಲು ಕೂಡಲೇ ಕ್ರಮಕೈಗೊಳ್ಳಬೇಕಾಗಿದೆ ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಎಸ್ಸೆನ್ನಾರ್ ಆಸ್ಪತ್ರೆ ಆವರಣದಲ್ಲಿ ಅನಧಿಕೃತ ಅಂಗಡಿಗಳಿಂದ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಬರುವ ಆಂಬ್ಯುಲೆನ್ಸ್ ಮತ್ತಿತರರ ವಾಹನಗಳಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಬೇಕು.
ಸರ್ಕಾರಿ ಆಸ್ಪತ್ರೆಯ ಮುಂದೆಯೇ ನೂರಾರು ಖಾಸಗಿ ಆಂಬ್ಯುಲೆನ್ಸ್‍ಗಳಿದ್ದು, ತುರ್ತು ಪರಿಸ್ಥಿತಿಯಲ್ಲಿ 108 ಸರ್ಕಾರಿ ಸೇವೆಯ ಆಂಬ್ಯುಲೆನ್ಸ್ ವ್ಯವಸ್ಥೆ ಇಲ್ಲದಿರುವುದನ್ನೇ ಬಂಡವಾಳವಾಗಿಸಿಕೊಂಡು ಖಾಸಗಿ ಆಂಬ್ಯುಲೆನ್ಸ್ ಮಾಲೀಕರು ರೋಗಿಗಳನ್ನು ತುರ್ತು ಪರಿಸ್ಥಿತಿಯಲ್ಲಿ ಬೇರೆ ಕಡೆ ಸಾಗಿಸಲು ಸಾವಿರಾರು ರೂಪಾಯಿ ಅನಧಿಕೃತ ಹಣ ಕೀಳುತ್ತಿರುವುದು ಸರ್ಕಾರಿ ಆಂಬ್ಯುಲೆನ್ಸ್ ವ್ಯವಸ್ಥೆ ಹದಗೆಟ್ಟಿರುವುದೇ ಕಾರಣವಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕಾಗಿದೆ.
ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ತರಬೇತಿ ಪಡೆಯುವಾಗ ಪ್ರತಿ ರೂಮಿನಲ್ಲೂ ಮೊಬೈಲ್ ಬಳಕೆ ಮಾಡಿ ರೋಗಿಗಳಿಗೆ ಸ್ಪಂದಿಸದೆ ಅಶಿಸ್ತು ವರ್ತನೆ ಮಾಡುತ್ತಿರುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು.
ಬಡವರಿಗೆ ಸರ್ಕಾರದಿಂದ ವಿತರಣೆಯಾಗುವ ಔಷಧಿಗಳ ವಿತರಣೆ ಮಾಡುವ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯು ರೋಗಿಗಳ ಜೊತೆ ಸರಿಯಾಗಿ ಸ್ಪಂದಿಸುತ್ತಿಲ್ಲ. ತಮಗಿಷ್ಟ ಬಂದ ರೀತಿ ಮಾತ್ರೆಗಳನ್ನು ಬಿಸಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡು ಏನೂ ತಿಳಿಯದ ರೋಗಿಗಳಿಗೆ ಮಾತ್ರೆ ಯಾವ ರೀತಿ ಸೇವಿಸಬೇಕೆಂದು ತಿಳುವಳಿಕೆ ಹೇಳುತ್ತಿಲ್ಲ. ಈ ಅವ್ಯವಸ್ಥೆ ಸರಿಪಡಿಸಬೇಕೆಂದು ಮಾನ್ಯರಲ್ಲಿ ಮನವಿ.
ಮನವಿ ಸ್ವೀಕರಿಸಿ ಮಾತನಾಡಿದ ಡಾ.ವಿಜಯ್ ಕುಮಾರ್, ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆಯಿರುವುದು ನಿಜ. ಬೋರ್‍ವೆಲ್ ಕೊರೆಯಿಸಿದ್ದರೂ ಪ್ರಯೋಜನವಾಗಿಲ್ಲ. ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ವಾರದೊಳಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಜೊತೆಗೆ ಉಳಿದ ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವ ಭರವಸೆ ನೀಡಿದರು.
ಮನವಿ ನೀಡುವಾಗ ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಮೂರಾಂಡಹಳ್ಳಿ ಶಿವಾರೆಡ್ಡಿ, ಮಂಗಸಂದ್ರ ತಿಮ್ಮಣ್ಣ, ಗೋವಿಂದಪ್ಪ, ಯಾರಂಘಟ್ಟ ಗಿರೀಶ್, ಕೇಶವ, ನರಸಿಂಹ, ಸುಪ್ರೀಂಚಲ, ತೆರ್ನಹಳ್ಳಿ ಆಂಜಿನಪ್ಪ ಉಪಸ್ಥಿತರಿದ್ದರು.