ಶ್ರೀನಿವಾಸಪುರ: ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳ ಜೊತೆಗ ದಾನಿಗಳು ನೀಡುವ ಶೈಕ್ಷಣಿಕ ನೆರವು ಪಡೆದು ಶೈಕ್ಷಣಿಕ ಅಭಿವೃದ್ಧಿ ಸಾಧಿಸಬೇಕು ಎಂದು ಚಿಕ್ಕಹಸಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೆ.ಎಸ್.ಮುನಿರಾಜು ಹೇಳಿದರು.
ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಥ್ಯಾಂಕ್ಸ್ ಟು ಧಮೇರ್ಶ್ ಕಾರ್ಯಕ್ರಮದಲ್ಲಿ, ಶಾಲಾ ವಿದ್ಯಾರ್ಥಿಗಳಿಗೆ ದಾನಿ ಧರ್ಮೇಶ್ ನೀಡಿದ ಲೇಖನ ಸಾಮಗ್ರಿ, ಕುಡಿಯುವ ನೀರಿನ ಬಾಟೆಲ್ ಮತ್ತಿತರ ವಸ್ತುಗಳನ್ನು ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಎಸ್.ಆರ್.ಧರ್ಮೇಶ್ ತಮ್ಮ ಸಂಬಳದಲ್ಲಿ ಪ್ರತಿ ತಿಂಗಳು ರೂ.10 ಸಾವಿರ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಹಾಗೂ ಸಮೇಜ ಸೇವಾ ಕಾರ್ಯಗಳಿಗೆ ಮೀಸಲಿಟ್ಟು ಮಾನವೀಯತೆ ಮೆರೆದಿದ್ದಾರೆ ಎಂದು ಹೇಳಿದರು.
ಜಿಲ್ಲೆಯಾದ್ಯಂತ ಸರ್ಕಾರಿ ಶಾಲೆ ಮಕ್ಕಳು ಧರ್ಮೇಶ್ ಅವರ ಶೈಕ್ಷಣಿಕ ನೆರವು ಪಡೆದಿದ್ದಾರೆ. ಪರಿಸರ ರಕ್ಷಣೆ, ಮಾನವೀಯ ನೆರವು ನೀಡುವುದರಲ್ಲೂ ಅವರು ಮುಂಚೂಣಿಯಲ್ಲಿದ್ದಾರೆ. ಸರಳ ವ್ಯಕ್ತಿತ್ವದ ಶಿಕ್ಷಕ ಎಸ್.ಆರ್.ಧರ್ಮೇಶ್ ಮಕ್ಕಳಲ್ಲಿ ದೇವರನ್ನು ಕಾಣುತ್ತಾರೆ. ಅಂಥ ಕೊಡಗೈ ದಾನಿಗಳ ಸಂಖ್ಯೆ ಹೆಚ್ಚಬೇಕು. ಬಡ ವಿದ್ಯಾರ್ಥಿಗಳಿಗೆ ಆಸರೆಯಾಗಿ ನಿಲ್ಲುವಂಥ ವ್ಯಕ್ತಿಗಳು, ಮಕ್ಕಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸುತ್ತಾರೆ ಎಂದು ಹೇಳಿದರು.
ಶಿಕ್ಷಕ ಆರ್.ಹರಿನಾಥ್ ಮಾತನಾಡಿ, ಸರಳ ಜೀವನ ನಡೆಸುವ ದಾನಿ ಧರ್ಮೇಶ್ ಅವರು, ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಹಾಗೂ ಅಶಕ್ತರ ಸೇವೆಯಲ್ಲಿ ತೃಪ್ತಿ ಕಂಡುಕೊಂಡಿದ್ದಾರೆ. ಅವರ ಸೇವೆ ಇನ್ನಷ್ಟು ಜನರಿಗೆ ಸಿಗುವಂತಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಲೇಖನ ಸಾಮಗ್ರಿ ನೀಡುವುದರ ಜೊತೆಗೆ, ಶಾಲೆ ಬಳಕೆಗೆ ಮೈಕ್ ಸೆಟ್ ನೀಡಲಾಯಿತು.
ಎಸ್ಡಿಎಂಸಿ ಅಧ್ಯಕ್ಷೆ ಸವಿತ, ಉಮಾದೇವಿ, ಪೂರ್ಣಿಮಾ ರಾಣಿ, ಯಶೋಧಮ್ಮ, ಪ್ರಿಯಾಂಕ ಇದ್ದರು.