ಶ್ರೀನಿವಾಸಪುರ:ವಾಲ್ಮೀಕಿ ಸಮುದಾಯದ ಅರ್ಹ ಫಲಾನುಭವಿಗಳಿಗೆ ಕೃಷಿ ಕೊಳವೆ ಬಾವಿ ಮತ್ತಿತರ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿ ಅವರು, ವಾಲ್ಮೀಕಿ ಸಮುದಾಯದ ಅನುಕೂಲಕ್ಕಾಗಿ ತಾಲ್ಲೂಕು ಕೇಂದ್ರದಲ್ಲಿ ವಾಲ್ಮೀಕಿ ಭವನ ನಿರ್ಮಿಸಲಾಗುವುದು. ಸರಾಮಾಯಣ ಮಹಾಕಾವ್ಯ ರಚಿಸುವುದರ ಮೂಲಕ ಮಾನವ ಕುಲಕ್ಕೆ ಆದರ್ಶ ಕಟ್ಟಿಕೊಟ್ಟ ಮಹರ್ಷಿ ವಾಲ್ಮೀಕಿ ಅವರನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂದು ಹೇಳಿದರು.
ವಾಲ್ಮೀಕಿ ಸಮುದಾಯ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಹಾಗಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗಾಗಿ ಸರ್ಕಾರದ ಯೋಜನೆಗಳ ಜತೆಗೆ ಸರ್ಕಾರದಿಂದ ವಿಶೇಷ ಅನುದಾನ ತರಲಾಗುವುದು. ತಾಲ್ಲೂಕಿನಲ್ಲಿ ಕೈಗಾರಿಕಾ ಕ್ಷೇತ್ರ ಸ್ಥಾಪಿಸಿ ಯುವ ಸಮುದಾಯಕ್ಕೆ ಉದ್ಯೋಗಾವಕಾಶ ಕಲ್ಪಿಸಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಯೋಜನೆ ರೂಪಿಸಿ ಜಾರಿಗೆ ತರಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್ ಮಾತನಾಡಿ, ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಕಾಲಾತೀತವಾಗಿ ಸಮಾಜಕ್ಕೆ ದಾರಿದೀಪವಾಗಿದೆ. ಸಮಾಜ ಮಹಾಕಾವ್ಯದ ಬೆಳಕಲ್ಲಿ ಬದುಕು ಕಟ್ಟಿಕೊಳ್ಳಬೇಕು. ರಾಮಾಯಣ ಸಾವಿರಾರು ವರ್ಷಗಳಿಂದ ಭಾರತೀಯ ಸಂಸ್ಕøತಿಯಲ್ಲಿ ಹಾಸುಹೊಕ್ಕಾಗಿದೆ. ಹಾಗಾಗಿ ಮಹರ್ಷಿ ವಾಲ್ಮೀಕಿ ಸಮಾಜದ ಗೌರವಕ್ಕೆ ಪಾತ್ರರಾಗಿದ್ದಾರೆ. ಕಾವ್ಯದೊಂದಿಗೆ, ರಚಿಸಿದ ಕವಿಯೂ ಉಳಿದುಕೊಂಡಿದ್ದಾರೆ ಎಂದು ಹೇಳಿದರು.
ಶಿಕ್ಷಕ ಚನ್ನರಾಯಪ್ಪ ವಾಲ್ಮೀಕಿ ಜೀವನ ಸಾಧನೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿದ್ದ ಸಮುದಾಯದ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಮುತ್ತಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಬಿಇಒ ಭಾಗ್ಯಲಕ್ಷ್ಮಿ, ಎಸ್.ರಾಜೇಶ್, ಜಯಾನಂದ್, ಮುಖಂಡರಾದ ರಾಮ್ಮೋಹನ್, ಕೊರ್ನಹಳ್ಳಿ ಆಂಜನಪ್ಪ, ನರಸಿಂಹಮೂರ್ತಿ, ಡಾ.ರಮಾನಂದ್, ಆರ್.ನಾರಾಯಣಸ್ವಾಮಿ, ಕೃಷ್ಣಪ್ಪ, ಮುನಿಸ್ವಾಮಿ ನಾಯಕ್, ನಿತಿನ್ ಕುಮಾರ್, ಹರೀಶ್ ನಾಯಕ್, ರಾಮಚಂದ್ರ, ವೆಂಕಟರವಣಪ್ಪ, ರಾಮಸುಬ್ಬು, ಆಂಜಪ್ಪ, ಬಾಬು ಇದ್ದರು.
ಮೆರವಣಿಗೆ: ಪಟ್ಟಣದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಏರ್ಪಡಿಸಲಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕುದುರೆ ಸಾರೋಟು ಗಮನ ಸೆಳೆಯಿತು. ತಾಲ್ಲೂಕಿನ ಬೇರೆ ಬೇರೆ ಕಡೆಗಳಿಂದ ವಾಲ್ಮೀಕಿ ಭಾವ ಚಿತ್ರದೊಂದಿಗೆ ಬಂದಿದ್ದ ಹತ್ತಾರು ಪಲ್ಲಕಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಸಮುದಾಯದ ಮುಖಂಡರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.