

ಡಾ| ರಂಜಿತ್ ಕುಮಾರ್ ಶೆಟ್ಟಿಯವರ ಬರವಣಿಗೆ ಇಷ್ಟವಾಗಲು ಅವರು ಜೀವನದಲ್ಲಿ ಪಡೆದ ಅನುಭವವನ್ನೇ ಸ್ವಾರಸ್ಯಕರ ಶೈಲಿಯಲ್ಲಿ ಬರೆಯುವುದು. ಹಾಗಾಗಿ ಅವರ ನೆನಪಿನಾಳದಲ್ಲಿ, 20 ಕಥೆಗಳು, ಜಯಂತಣ್ಣನಿಗಾಗಿ ಕಾದಂಬರಿ ಓದುಗರಿಗೆ ಇಷ್ಟವಾಯಿತು. ಆದರೆ ಹೊಸತನದ ಕಥೆಯೊಂದಿಗೆ ಹೀಗೂ ಕಾದಂಬರಿ ಬರೆಯಬಹುದು ಎಂದು “Jolly ಮತ್ತು ಅಪ್ಪು” ಕೃತಿಯಿಂದ ತೋರಿಸಿ ಕೊಟ್ಟಿದ್ದಾರೆ. ಕೊನೆಯ ಸಾಲುಗಳನ್ನು ಓದಿ ಮುಗಿಸುವಾಗ ಎದೆ ಭಾರವಾಗುತ್ತದೆ. ಅವರು ಕೃತಿ ರಚನೆ ನನ್ನ ಮತ್ತು ಸಹಪಾಠಿಗಳ ಪ್ರೇರಣೆ ಇತ್ತು ಎಂದು ಹೇಳುವುದು ಅವರ ವ್ಯಕ್ತಿತ್ವದ ದೊಡ್ಡತನ” ಎಂದು ಖ್ಯಾತ ಪ್ರಸೂತಿ ತಜ್ಞ ಮಣಿಪಾಲದ ಸೋನಿಯಾ ಆಸ್ಪತ್ರೆಯ ಡಾ| ಗಿರಿಜಾ ರಾವ್ ಹೇಳಿದರು.
ಡಾ| ರಂಜಿತ್ ಕುಮಾರ್ ಶೆಟ್ಟಿಯವರ ““Jolly ಮತ್ತು ಅಪ್ಪು” ಕಾದಂಬರಿಯನ್ನು ಬಿಡುಗಡೆಗೊಳಿಸುತ್ತಾ ಅವರು ಮಾತನಾಡಿದರು.
ಭಂಡಾರ್ಕಾರ್ಸ್ ಕಾಲೇಜಿನ ಆರ್. ಎನ್. ಶೆಟ್ಟಿ ಸಭಾಂಗಣದಲ್ಲಿ ನಡೆದ ಡಾ| ರಂಜಿತ್ ಕುಮಾರ್ ಶೆಟ್ಟಿಯವರ ಮೂರು ಕೃತಿಗಳ ಬಿಡುಗಡೆ ಸಮಾರಂಭವನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಸಂವಹನದ ಕೊರತೆ ಮತ್ತು ಪರಸ್ಪರ ಅಪನಂಬಿಕೆ ಡಾಕ್ಟರು ಮತ್ತು ರೋಗಿಗಳ ಸಂಬಂಧ ಕೆಡಲು ಕಾರಣ. ಜನರು ವೈದ್ಯರ ಮೇಲೆ ವಿಶ್ವಾಸವಿಡಬೇಕು. ಗೌರವದ ನಡವಳಿಕೆ ಇರಬೇಕು. ವೈದ್ಯರ ಸೇವೆಯ ವಿಷಯದಲ್ಲಿ ಎಂದೂ ಅಪ್ರಾಮಾಣಿಕರಾಗಿರಬಾರದು. ವೈದ್ಯಕೀಯ ಸೇವೆಯ ಒತ್ತಡದಲ್ಲಿ ರೋಗಿಗಳ ಪೋಷಕರಿಂದ ಬೆಂಬಲವನ್ನು ಪ್ರಾಮಾಣಿಕ ವೈದ್ಯರು ನಿರೀಕ್ಷಿಸುತ್ತಾರೆ.” ಎಂದು ಅವರು ಹೇಳಿ ಡಾ| ರಂಜಿತರ ಕೃತಿಗಳು ವೈದ್ಯಲೋಕದ ಚಿತ್ರಣ ತೆರೆದಿಟ್ಟಿದೆ ಎಂದರು.
ಡಾ| ರಂಜಿತ್ ಕುಮಾರ್ ಅವರ ಜನಪ್ರಿಯ ಕಥೆಗಳ ಗುಚ್ಚ 10+10=20 ಕಥೆಗಳು ಕೃತಿಯನ್ನು ಓಕವುಡ್ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕರಾದ ಶ್ರೀಮತಿ ನೀತಾ ಎ. ಶೆಟ್ಟಿ ಬಿಡುಗಡೆ ಮಾಡಿದರು.
ಡಾ| ರಂಜಿತ್ ಕುಮಾರ್ ಅವರ ಪ್ರತಿಯೊಂದು ಕಥೆಗಳು ಬೇರೆ ವಿದ್ಯಮಾನಗಳನ್ನು ವಿವರಿಸುವುದರಿಂದ ಅವರ ಎಲ್ಲ ಬರಹಗಳು ಇಷ್ಟವಾಗುತ್ತವೆ. ಅವರ ಜೀವನದ ಅನುಭವಗಳ ವಿಷಯವೇ ಓದುವುದರಿಂದ ನಮಗೆ ಸಮಾಜದ ಎಲ್ಲಾ ಮುಖಗಳ ಪರಿಚಯವಾಗುತ್ತದೆ. ಒಂದು ಶಿಕ್ಷಣ ಸಂಸ್ಥೆಯನ್ನು ನಡೆಸುವ ನಾವು ಪೋಷಕರಿಗೆ ಮಕ್ಕಳ ವ್ಯಕ್ತಿತ್ವ ವಿಕಸನವಾಗುವಂತಹ ಆಸಕ್ತಿಯನ್ನು ಮಕ್ಕಳಲ್ಲಿ ಬೆಳೆಸಿ ಎನ್ನುತ್ತೇವೆ” ಎಂದು ಅವರು ಡಾ| ರಂಜಿತ್ ಕುಮಾರ್ ಶೆಟ್ಟಿಯವರನ್ನು ಅಭಿನಂದಿಸಿದರು.
“ನೆನಪಿನಾಳದಿಂದ” ಕೃತಿಯನ್ನು ಹಿರಿಯ ಜ್ಯೋತಿಷಿ, ಸಾಮಾಜಿಕ ಧುರೀಣ, ಖ್ಯಾತ ಚಿತ್ರ ನಿರ್ದೇಶಕ ರಿಷಬ್ ಶೆಟ್ಟಿಯವರ ತಂದೆ ಭಾಸ್ಕರ ಶೆಟ್ಟಿ ಬಿಡುಗಡೆಗೊಳಿಸಿದರು.
ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ “ರೂಪಕಲಾ” ಮೂರು ಮುತ್ತು ಕಲಾವಿದರಾದ ಸತೀಶ ಪೈ ಮತ್ತು ಸಂತೋಷ ಪೈ ಅವರ ಪ್ರಹಸನ ಬಹಳ ಖುಷಿ ನೀಡಿತು.
ಲೇಖಕಿ ಶ್ರೀಮತಿ ಕಾತ್ಯಾಯಿನಿ ಕುಂಜಿಬೆಟ್ಟು ಮೂರು ಕೃತಿಗಳ ಬಗ್ಗೆ ಮಾತನಾಡಿ, “ಮೂರು ಕೃತಿಗಳು ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ” ಎಂದರು.
‘ಕುಂದಪ್ರಭ’ ಸಂಸ್ಥೆಯ ಅಧ್ಯಕ್ಷ ಯು. ಎಸ್. ಶೆಣೈ ಸ್ವಾಗತಿಸಿದರು. ಡಾ| ರಂಜಿತ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ‘ಬದುಕಿನಲ್ಲಿ ಅವರಿಗೆ ದೊರೆತ ಜೀವನಾನುಭವದ ಪಾಠ ವಿವರಿಸಿದರು.
ಡಾ| ರಂಜಿತ್ ಕುಮಾರ್ ಶೆಟ್ಟಿಯವರ ಐದು ದಶಕಗಳ ಹಿಂದಿನ ವೈದ್ಯ ಸಹಪಾಠಿಗಳು ಅವರನ್ನು ಸನ್ಮಾನಿಸಿ ಗೌರವಿಸಿದರು. ಡಾ| ಗಣೇಶ ಪೈ ಮಣಿಪಾಲ ಶುಭ ಹಾರೈಸಿದರು.
ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥರು, ಪ್ರಾಂಶುಪಾಲರು, ಕಾಲೇಜಿನ ಆಡಳಿತ ಮಂಡಳಿ ಸದಸ್ಯರೂ ಆಗಿರುವ ಡಾ| ರಂಜಿತ್ ಕುಮಾರ್ ಶೆಟ್ಟಿಯವರನ್ನು ಗೌರವಿಸಿದರು. ಕೆ. ಶಾಂತಾರಾಮ ಪ್ರಭು, ಪ್ರಕಾಶ ಸೋನ್ಸ್ ಕಾಲೇಜಿನ ಪರವಾಗಿ ಶುಭ ಹಾರೈಸಿದರು. ವೈದ್ಯರಾದ ಡಾ| ಪ್ರಕಾಶ ಕಾಮತ್, ಡಾ| ಸಂಧ್ಯಾ ಅಡಿಗ, ಡಾ| ವಿವೇಕ ಶೆಟ್ಟಿ, ಡಾ| ರಮೇಶ ಶೆಟ್ಟಿ ಹಾಗೂ ಕು| ಅನಿಕಾ, ಕು| ಶಿಪ್ರ ಚಾತ್ರ, ಶ್ರೀಮತಿ ಪಾರ್ವತಿ ಶುಶ್ರಾವ್ಯವಾದ ಗೀತೆಗಳನ್ನು ಹಾಡಿದರು. ಶ್ರೀಮತಿ ಜ್ಯೋತಿ ಸಾಲಿಗ್ರಾಮ ಹಾಗೂ ಶ್ರೀಮತಿ ರೋಹಿಣಿ ಶರಣ್ ಸಂವಹನ ಕಾರ್ಯಕ್ರಮ ನಡೆಸಿಕೊಟ್ಟರು.
ತೆಂಕ ನಿಡಿಯೂರು ಪ. ಪೂ. ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಬೀನಾ ರಂಜಿತ್ ಕುಮಾರ್ ಶೆಟ್ಟಿ ಧನ್ಯವಾದ ಅರ್ಪಿಸಿದರು.
