ಶ್ರೀನಿವಾಸಪುರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಗುರುವಾರ, ಸಾಹಿತಿ ಎನ್.ಶಂಕರೇಗೌಡ ಅವರ ಭಾವ ಬೆಸುಗೆ ಪುಸ್ತಕವನ್ನು ಪರಿಸರ ಮತ್ತು ವಿಜ್ಞಾನ ಲೇಖಕ ಎಚ್.ಎ.ಪುರುಷೋತ್ತಮರಾವ್ ಬಿಡುಗಡೆ ಮಾಡಿದರು.
ಪುಸ್ತಕ ನಿಜವಾದ ಜೀವನ ಸಂಗಾತಿ : ಎಚ್.ಎ.ಪುರಷೋತ್ತಮರಾವ್
ಶ್ರೀನಿವಾಸಪುರ: ವಿದ್ಯಾರ್ಥಿಗಳು ಜ್ಞಾನಾರ್ಜನೆ ಹಾಗೂ ವ್ಯಕ್ತಿತ್ವ ವಿಕಾಸಕ್ಕಾಗಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ವ್ಯಕ್ತಿ ಗೌರವ ಪಡೆದುಕೊಳ್ಳಲು ಪುಸ್ತಕ ಓದುವ ಸಂಸ್ಕøತಿಗೆ ಮರಳಬೇಕು ಎಂದು ಪರಿಸರ ಹಾಗೂ ವಿಜ್ಞಾನ ಲೇಖಕ ಎಚ್.ಎ.ಪುರುಷೋತ್ತಮರಾವ್ ಹೇಳಿದರು.
ಪಟ್ಟಣದ ಬಾಲಕಿಯರ ಪದರಿ ಪೂರ್ವ ಕಾಲೇಜು ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಉಪನ್ಯಾಸಕ ಹಾಗೂ ಸಾಹಿತಿ ಎನ್.ಶಂಕರೇಗೌಡ ಅವರ ಭಾವ ಬೆಸುಗೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಪುಸ್ತಕ ನಿಜವಾದ ಸಂಗಾತಿ. ಜೀವನ ಸ್ಫೂರ್ತಿಯ ಸಂಕೇತ. ಪುಸ್ತಕ ಭಂಡಾರ ಒಂದು ಪುಟ್ಟ ವಿಶ್ವ ವಿದ್ಯಾಲಯ ಇದ್ದಂತೆ ಎಂದು ಅಭಿಪ್ರಾಯಪಟ್ಟರು.
ಶಂಕರೇಗೌಡರ ಭಾವ ಬೆಸುಗೆ ಹೆಸರಿನ ಲಲಿತ ಪ್ರಬಂಧಗಳ ಸಂಕಲದಲ್ಲಿ ಭಾವ ಸ್ಪರ್ಶಿಸುವ, ನವಿರಾದ ಹಾಸ್ಯ ಹಾಗೂ ಜೀವನಾದರ್ಶ ಒಳಗೊಂಡ ಲೇಖನಗಳಿವೆ. ಪುಸ್ತಕ ಓದುಗರ ಓದುವ ಆಸಕ್ತಿಯನ್ನು ಕೆರಳಿಸುತ್ತದೆ. ಸಾಹಿತ್ಯಾಸಕ್ತರು ಪುಸ್ತಕವನ್ನು ಓದುವುದರ ಮೂಲಕ ಭಾವ ಸ್ಪರ್ಶ ಪಡೆಯಬಹುದಾಗಿದೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಂಕರೇಗೌಡ ಅವರ ಸಾಹಿತ್ಯ ಸಮಾಜ ಮುಖಿಯಾಗಿದ್ದು, ಬೋಧಪ್ರದವಾಗಿದೆ. ಸಮಾಜ ಸುಧಾರಣೆಗೆ ಪೂರಕವಾದ ಹಲವು ಅಂಶಗಳು ಪುಸ್ತಕದಲ್ಲಿವೆ. ಪ್ರತಿ ಲೇಖನವೂ ಮನೋಲ್ಲಾಸದ ಜತೆಗೆ, ಚಿಂತನೆಗೆ ಹಚ್ಚುತ್ತದೆ ಎಂದು ಹೇಳಿದರು.
ಸಾಹಿತಿ ಆರ್.ಚೌಡರೆಡ್ಡಿ ಮಾತನಾಡಿ, ಭಾವ ಬೆಸುಗೆ, ಮಾಹಿತಿ ಕಣಜವಾಗಿದೆ. ಲೇಖಕರು ಬೇರೆ ಬೇರೆ ಮೂಲಗಳಿಂದ ಹೆಕ್ಕಿ ತೆಗೆದ ಪೂರಕ ವಿಷಯಗಳನ್ನು ಪ್ರಬಂಧಗಳಲ್ಲಿ ಅಳವಡಿಸಿದ್ದಾರೆ. ಪುಸ್ತಕದ ಓದಿನಿಂದ ಓದುಗರ ಜ್ಞಾನ ವೃದ್ಧಿಯಾಗುತ್ತದೆ. ಮನಸ್ಸಿಗೆ ಹಿತಾನುಭವವಾಗುತ್ತದೆ ಎಂದು ಹೇಳಿದರು.
ಪುಸ್ತಕದ ಲೇಖಕ ಎನ್.ಶಂಕರೇಗೌಡ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಓದುವ ಹವ್ಯಾಸ ಬೆಳೆಸುವ ಉದ್ದೇಶದಿಂದ ಪುಸ್ತಕವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುವುದು. ಓದುಗರು ಅದರ ಪ್ರಯೋಜನ ಪಡೆದುಕೊಳ್ಳಬೇಕು. ಇನ್ನಷ್ಟು ಕೃತಿಗಳನ್ನು ಪ್ರಕಟಿಸಲು ಪ್ರೇರಣೆ ನೀಡಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಸಿ.ಆರ್.ಪ್ರಾಣೇಶ್, ಉಪನ್ಯಾಸಕರಾದ ಗೋಪಿ, ವಾಸು ಪುಸ್ತಕ ಕುರಿತು ಮಾತನಾಡಿದರು. ಗಾಯಕಿ ನವ್ಯಶ್ರೀ ಅವರಿಂದ ಭಾವ ಗೀತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಾಯಾ ಬಾಲಚಂದ್ರ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷೆ ಪಿ.ಎಸ್.ಮಂಜುಳ, ಗೌರವಾಧ್ಯಕ್ಷ ಶ್ರೀರಾಮೇಗೌಡ, ತಾಲ್ಲೂಕು ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಕೆ.ನಾರಾಯಣಸ್ವಾಮಿ, ಸಿಆರ್ಪಿ ಜಿ.ವಿ.ಚಂದ್ರಪ್ಪ ಇದ್ದರು.