ಶಿಕ್ಷಕರಿಗೆ ಸೇವಾದಳ ಪುನಶ್ಚೇತನ ಕಾರ್ಯಾಗಾರ ; ರಾಷ್ಟ್ರಧ್ವಜ, ರಾಷ್ಟ್ರಗೀತೆ ಭಾರತದ ಸಾರ್ವಭೌಮತೆಯ ಸಂಕೇತ – ಸಿಎಂಆರ್ ಶ್ರೀನಾಥ್

ಕೋಲಾರ:- ತಮ್ಮದೇ ರಾಷ್ಟ್ರದ ಚಿಹ್ನೆ, ಧ್ವಜದ ಅಡಿಯಲ್ಲಿ ಹೋರಾಟಗಳನ್ನು ನಡೆಸುವ ಮೂಲಕ ಭಾರತೀಯರ ಸಾರ್ವಭೌಮತೆ, ಐಕ್ಯತೆ, ಘನತೆ ಗೌರವದ ಸಂಕೇತವಾಗಿ ಗಣರಾಜ್ಯೋತ್ಸವ ಸ್ವಾತಂತ್ರ್ಯದಿನ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಭಾರತ ಸೇವಾದಳ ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಸಿಎಂಆರ್ ಶ್ರೀನಾಥ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆ ಹಾಗೂ ಭಾರತ ಸೇವಾದಳ ಜಿಲ್ಲಾ ಸಮಿತಿಯಿಂದ ಆಯೋಜಿಸಲಾಗಿದ್ದ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಪುನಶ್ಚೇತನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರಧ್ವಜ ಕುರಿತಂತೆ ಪ್ರತಿ ಮಕ್ಕಳಿಗೂ ಅರಿವು ಮೂಡಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ರಾಷ್ಟ್ರಧ್ವಜ ಕುರಿತಂತೆ ಪ್ರತಿಯೊಂದು ಮಾಹಿತಿಯನ್ನು ಹೊಂದುವುದು ಶಿಕ್ಷಕರ ಕರ್ತವ್ಯವಾಗಿದೆ, ಆ ಮಾಹಿತಿಯನ್ನು ಭಾರತ ಸೇವಾದಳವು ನೀಡುತ್ತದೆ ಎಂದು ತಿಳಿಸಿದರು.
ದೇಶದ ಗಣ್ಯ ವ್ಯಕ್ತಿಗಳು ರಾಷ್ಟ್ರಪತಿ, ಪ್ರಧಾನಿ ಮಂತ್ರಿ ಇತರರು ಹೊರದೇಶಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಥಳಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ, ಗೌರವ ಸೂಚಿಸುತ್ತಾರೆ. ಕ್ರೀಡಾಪಟುಗಳು ಜಯಶಾಲಿಯಾದಾಗ ಭಾರತ ಧ್ವಜದೊಂದಿಗೆ ಭಾರತದ ಹಿರಿಮೆಯನ್ನು ಹೆಚ್ಚಿಸುತ್ತಾರೆ. ಆ ಘನತೆ ರಾಷ್ಟ್ರದ ಧ್ವಜದಿಂದ ದೊರಕುತ್ತದೆ ಎಂದರು.
ಪ್ರತಿ ಶಾಲೆಗೆ ರಾಷ್ಟ್ರಧ್ವಜಸಂಹಿತೆ ಕುರಿತಂತೆ ಭಾರತ ಸೇವಾದಳ ಪ್ರಕಟಿಸಿರುವ ಪುಸ್ತಕಗಳನ್ನು ತಪ್ಪದೇ ವಿತರಿಸಲಾಗುವುದು ಎಂದು ನುಡಿದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಸ್ವಾತಂತ್ರ ದಿನ ಪ್ರತಿ ಶಾಲೆಯಲ್ಲಿ ರಾಷ್ಟ್ರಧ್ವಜವನ್ನು ವ್ಯವಸ್ಥಿತವಾಗಿ ಹಾರಿಸಬೇಕು. ಸರಿಯಾದ ವ್ಯವಸ್ಥೆಯಲ್ಲಿ ಬಾವುಟ ಹಾರಿಸದಿದ್ದರೆ ಸೇವೆಯಿಂದ ಅಮಾನತು ಆಗುವುದು ಖಚಿತ. ಪ್ರತಿನಿತ್ಯ ಪಾಠ ಮಾಡಿ ವಿದ್ಯಾರ್ಥಿಗಳ ಜ್ಞಾನವನ್ನು ವೃದ್ಧಿಸುವ, ಬುದ್ದಿ ಹೇಳುವ ಶಿಕ್ಷಕರು ಧ್ವಜಕ್ಕೆ ನೀಡುವ ಗೌರವವನ್ನು ಅರಿಯಬೇಕು. ದಿನನಿತ್ಯ ನಿಮ್ಮ ಕೆಲಸದ ಜಂಜಾಟದಲ್ಲಿ ಮರೆಯುವ ಪಾಠವನ್ನು ಭಾರತ ಸೇವಾದಳದಿಂದ ನಿಮಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.
ರಾಷ್ಟ್ರಧ್ವಜವೆಂದರೆ ರಾಷ್ಟ್ರಪತಿಗಳಿಗಿಂತಲೂ ದೊಡ್ಡದು ಎಂಬ ಭಾವನೆ ನಮ್ಮೆಲ್ಲರದ್ದು. ರಾಷ್ಟ್ರಕ್ಕೆ ನೀಡುವ ಗೌರವವನ್ನು ಧ್ವಜಕ್ಕೆ ನೀಡಲೇಬೇಕು. ಆದ್ದರಿಂದಲೇ ರಾಷ್ಟ್ರಧ್ವಜ ಸಮಿತಿ ನಿರ್ಮಿಸಿ ನೀತಿ, ನಿಯಮ ಉಲ್ಲಂಘನೆ ಆಗದಂತೆ ಧ್ವಜವನ್ನು ಹಾರಿಸಿ, ಇಳಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಅಮೃತ ಮಹೋತ್ಸವ ಆಚರಣೆ ಸಮಯದಲ್ಲಿ ಮನೆಮನೆಯ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಿದರು, ಆದರೆ ಕೆಲವು ಕಡೆ ಅಗೌರವ ಘಟನೆಗಳು ಸಹ ನಡೆಯಿತು. ಆ ರೀತಿ ಆಗದಂತೆ ಪ್ರತಿ ಭಾರತೀಯರು ಹೆಚ್ಚಿನ ಘನತೆ ಗೌರವದಿಂದ ಧ್ವಜವನ್ನು ಸಮಯಕ್ಕೆ ಸರಿಯಾಗಿ ಹಾರಿಸಬೇಕು ಮತ್ತು ಇಳಿಸಬೇಕು ಎಂದು ವಿವರಿಸಿದರು.
ಇಡೀ ಭಾರತಕ್ಕೆ ಖಾದಿ ಬಟ್ಟೆಯಲ್ಲಿ ರಾಷ್ಟ್ರಧ್ವಜವನ್ನು ನೆಯ್ದು ನೀಡುತ್ತಿರುವ ರಾಷ್ಟ್ರಧ್ವಜ ನಿರ್ಮಾಣದ 50 ಸಂಘಟನೆಗಳು ಕರ್ನಾಟಕ ರಾಜ್ಯದ ಧಾರವಾಡ, ಹುಬ್ಬಳ್ಳಿಯಲ್ಲಿದೆ. ಅವರಿಗೆ ಜೀವನ ನಡೆಸಲು ಕಷ್ಟವಾಗಿದೆ, ಸರಿಯಾದ ಸಬ್ಸಿಡಿ, ಕಚ್ಚಾ ಸಾಮಗ್ರಿಗಳ ಪೂರೈಕೆ ಇಲ್ಲದೆ. ಇಡೀ ರಾಷ್ಟ್ರಕ್ಕೆ ಧ್ವಜಗಳನ್ನು ಪೂರೈಸಲು ಆಗುತ್ತಿಲ್ಲವೆಂದು ತಿಳಿಸಿದರು.
ಪ್ರತಿ ತಾಲೂಕಿನಲ್ಲಿ ಭಾರತ ಸೇವಾದಳ ಘಟಕಗಳಿದೆ. ಪ್ರತಿ ಶಾಲೆಯಲ್ಲಿ 33 ಜನ ತಂಡ ಮಾಡಿ, ರಾಷ್ಟ್ರ ಹಬ್ಬಗಳನ್ನು ಆಚರಿಸುವ ಸಮಯದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಗೌರವ ನೀಡುವ ಹಾಗೂ ಬ್ಯಾಂಡ್ ಸೆಟ್ ತರಬೇತಿಯನ್ನು ಸೇವಾದಳ ನೀಡುತ್ತದೆ ಎಂದರು.
ಭಾರತ ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಇಂದಿನ ಪೀಳಿಗೆ ಮಕ್ಕಳಿಗೆ ಸ್ವಾತಂತ್ರ್ಯ ಪಡೆಯಲು ಹೋರಾಡಿದ ಹೋರಾಟಗಾರರ, ಬಲಿದಾನಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ರಾಷ್ಟ್ರಕ್ಕೆ ರಾಷ್ಟ್ರಧ್ವಜಕ್ಕೆ ನೀಡುವ ಗೌರವವನ್ನು ಮಕ್ಕಳಿಗೆ ತಿಳಿಸಬೇಕು ಆಚರಿಸಲು ಸೂಚಿಸಬೇಕು. ಭಾರತ ಸೇವಾದಳವು ಪ್ರತಿ ಶಾಲೆಯಲ್ಲಿ ಮಕ್ಕಳಿಗೆ ಮಾಹಿತಿ ನೀಡುವ ಕಾರ್ಯವನ್ನು ಪೂರೈಸಿಕೊಂಡು ಬರುತ್ತಿದೆ ಎಂದರು.
ಭಾರತ ಸೇವಾದಳ ರಾಜ್ಯ ಕಾರ್ಯದರ್ಶಿ ಮಹೇಶ್ ಗೌಡ ಹಾಗೂ ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್ ರಾಷ್ಟ್ರಧ್ವಜ ಕಟ್ಟುವ, ಮಡಚುವ, ಹಾರಿಸುವ ಸಮಯದಲ್ಲಿ ಯಾವಗೀತೆ ಹಾಡಬೇಕು ಹಾಗೂ ಇಳಿಸುವ ಸಮಯದಲ್ಲಿ ಯಾವ ಗೀತೆ ಹಾಡಬೇಕು ಎಂಬ ವಿಧಾನಗಳ ಕುರಿತು ಪ್ರತ್ಯಕ್ಷಿಕೆ ನೀಡಿದರು.
ಈ ಸಂದರ್ಭದಲ್ಲಿ ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಎಸ್.ಸುಧಾಕರ್, ತಾಲೂಕು ಅಧ್ಯಕ್ಷ ಶ್ರೀರಾಮ್, ಗೌರವಾಧ್ಯಕ್ಷ ಅಪ್ಪಿ ನಾರಾಯಣಸ್ವಾಮಿ, ಬಹದ್ದೂರ್ ಸಾಬ್, ಚಾಮುಂಡೇಶ್ವರಿ, ಸರಸ್ವತಮ್ಮ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ದಾನೇಶ್ ನಿರೂಪಿಸಿ, ಶ್ರೀರಾಮ್ ಸ್ವಾಗತಿಸಿ, ಶ್ರೀನಿವಾಸಮೂರ್ತಿ ವಂದಿಸಿದರು.

3 ಕೋಟಿ ವೆಚ್ಚದಲ್ಲಿ ಜಿಲ್ಲಾ ನೌಕರರ ಭವನ ನಿರ್ಮಾಣ ಆಗಸ್ಟ್ ಕೊನೆ ವಾರ ಗುದ್ದಲಿ ಪೂಜೆ ನಡೆಸಲು ತೀರ್ಮಾನ-ಸುರೇಶ್‍ಬಾಬು

ಕೋಲಾರ:- ಅಂದಾಜು ಸುಮಾರು 3 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೂರು ಮಹಡಿಗಳ ಸರ್ಕಾರಿ ನೌಕರರ ಸಂಘದ ನೂತನ ಕಟ್ಟಡದ ಗುದ್ದಲಿ ಪೂಜೆ ಆಗಸ್ಟ್ ಕೊನೆ ವಾರ ಹಮ್ಮಿಕೊಂಡಿರುವುದಾಗಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ತಿಳಿಸುತ್ತಿದ್ದಂತೆ ಕಾರ್ಯಕಾರಿ ಸಮಿತಿ ಅನುಮೋದನೆ ನೀಡಿತು.
ನಗರದ ರೋಟರಿ ಭವನದಲ್ಲಿ ಜಿಲ್ಲಾ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆಗೆ ಚಾಲನೆ ನೀಡಿ, ಕಳೆದ ತಿಂಗಳು ನಿವೃತ್ತರಾದ ಗ್ರಾ.ಪಂ ಪಿಡಿಒ ನಾಗರಾಜ್, ಜಿಪಂನ ಚೆನ್ನಪ್ಪ, ತೋಟಗಾರಿಕಾ ಇಲಾಖೆಯ ಕದಿರಪ್ಪ ಅವರನ್ನು ಸಂಘದಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟು ಅವರು ಮಾತನಾಡುತ್ತಿದ್ದರು.
ಸುಂದರ ನೌಕರರ ಭವನ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲು ಹಲವಾರು ದಾನಿಗಳು ಮುಂದೆ ಬಂದಿದ್ದಾರೆ ಜತೆಗೆ ಜಿಲ್ಲೆಯ ಅನೇಕ ನೌಕರರು ಆರ್ಥಿಕ ನೆರವು ಒದಗಿಸಲು ಒಪ್ಪಿದ್ದಾರೆ ಎಂದು ಸಭೆಗೆ ತಿಳಿಸಿದ ಸುರೇಶ್‍ಬಾಬು, ನಿವೃತ್ತ ನೌಕರರೂ ಸಹಾ ಕಟ್ಟಡ ಕಾಮಗಾರಿಗೆ 2 ಲಕ್ಷ ನೆರವು ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಸೆ.3ನೇ ವಾರವೇ ಪ್ರತಿಭಾ ಪುರಸ್ಕಾರ


ಜಿಲ್ಲಾ ನೌಕರರ ಸಂಘದಿಂದ ಸೆಪ್ಟೆಂಬರ್ ಮೂರನೇ ವಾರ ನೌಕರರ ಸಾಧಕ ಮಕ್ಕಳ ಪ್ರತಿಭಾ ಪುರಸ್ಕಾರ ಮತ್ತು ಸಂಘದ ವಾರ್ಷಿಕ ಮಹಾಸಭೆ ನಡೆಸಲು ಇದೇ ಸಂದರ್ಭದಲ್ಲಿ ಸಭೆ ಅನುಮೋದನೆ ನೀಡಿತು.
ವಿಧಾನಸಭಾ ಚುನಾವಣೆ ಮತ್ತಿತರ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟವನ್ನು ತುಮಕೂರಿನಲ್ಲಿ ನಡೆಸಲು ನಿರ್ಧರಿಸಿದ್ದು, ಕ್ರೀಡಾಕೂಟದ ಉದ್ಘಾಟನೆಗೆ ಮುಖ್ಯಮಂತ್ರಿಗಳು ದಿನಾಂಕ ನಿಗಧಿ ಮಾಡಿದ ಕೂಡಲೇ ಚಾಲನೆ ಸಿಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷ ಅಪ್ಪೇಗೌಡ ತಾಲ್ಲೂಕು ಸಂಘಗಳ ಲೆಕ್ಕಪರಿಶೋಧನೆಗೆ ಸಂಬಂಧಿಸಿದಂತೆ ದಾಖಲೆ,ವಹಿಗಳನ್ನು ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಹಾಲಿ ಖಜಾಂಚಿ ವಿಜಯ್ ಮತ್ತವರ ತಂಡ ಪಡೆದುಕೊಂಡಿದ್ದು ವಾಪಸ್ಸು ನೀಡಿಲ್ಲ ಎಂದು ಆರೋಪಿಸಿದಾಗ ಅಧ್ಯಕ್ಷರು ಉತ್ತರಿಸಿ ಸಂಘಕ್ಕೆ ವರದಿಯನ್ನೂ ನೀಡಿಲ್ಲ ಮತ್ತು ಕಡತಗಳನ್ನು ಹಿಂತಿರುಗಿಸಿಲ್ಲ ಕೂಡಲೇ ಕಡತ ಹಿಂತಿರುಗಿಸಲು ಸಭೆಯಲ್ಲಿ ಇದ್ದ ಅವರಿಗೆ ಸೂಚಿಸಲಾಯಿತು.
ಇದೇ ಸಂದರ್ಭದಲ್ಲಿ ನೂತನ ಜಿಲ್ಲಾ ಕಾರ್ಯದರ್ಶಿ ಅಜಯ್‍ಕುಮಾರ್ ಅವರಿಗೆ ಸಂಘದ ಕಡತಗಳೊಂದಿಗೆ ಜವಾಬ್ದಾರಿ ಹಸ್ತಂತರಿಸುವಂತೆ ಚೌಡಪ್ಪ ಅವರಿಗೆ ಸಭೆಯಲ್ಲಿ ಸೂಚಿಸಲಾಯಿತು. ಸಂಘದ ಕೆಲವು ಪದಾಧಿಕಾರಿಗಳು, ಕಾರ್ಯಕಾರಿ ಸದಸ್ಯರು ಸಂಘ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದು, ಅಂತಹವರ ವಿರುದ್ದ ಕಠಿಣ ಕ್ರಮಕ್ಕೆ ರಾಜ್ಯಾಧ್ಯಕ್ಷರಿಗೆ ಪತ್ರ ಬರೆಯಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ಹಾಲಿ ಖಜಾಂಚಿ ವಿಜಯ್ ಅವರು ಸಂಘದ ಕೆಲಸಗಳ ನಿರ್ವಹಣೆಗೆ ಸ್ಪಂದಿಸದಿರುವ ಕುರಿತು ಸಭೆಯ ಗಮನಕ್ಕೆ ತರಲಾಯಿತು.

ಒಗ್ಗಟ್ಟಾಗಿ ಸಾಗಲು ಕೆಎನ್‍ಎಂ ಮನವಿ


ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ.ಎನ್.ಮಂಜುನಾಥ್ ಮಾತನಾಡಿ, ಎಲ್ಲರೂ ಒಗ್ಗಟ್ಟಾಗಿ ಹೋಗಬೇಕಾಗಿದೆ, ಸಂಘಟನೆ ಬಲಗೊಳಿಸುವ ಕೆಲಸ ಆಗಬೇಕು, ಹಿಂದೆ ಚೌಡಪ್ಪ ಅವರು ಪ್ರಧಾನ ಕಾರ್ಯದರ್ಶಿ ಹುದ್ದೆ ನಿರ್ವಹಣೆಯಲ್ಲಿ ಸ್ಪಂದನೆ ನೀಡದ ಕಾರಣವೇ ಅಜಯ್ ನೇಮಕವಾಗಿದೆ ಹಾಗೆಯೇ ಈಗ ಖಜಾಂಚಿ ವಿಜಯ್ ಸಹಾ ಸಹಕಾರ ನೀಡದಿರುವುದು ನಿಜ ಎಂದರು.
ಸಂಘವನ್ನು ಒಟ್ಟಾಗಿ ಮುನ್ನಡೆಸೋಣ ಎಲ್ಲಾ ಸದಸ್ಯರು ಕೈಜೋಡಿಸಿ ಎಂದ ಅವರು, ನೂತನ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಎಲ್ಲಾ ನೌಕರರ ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ, ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಅಜಯ್‍ಕುಮಾರ್,ರಾಜ್ಯಪರಿಷತ್ ಸದಸ್ಯ ಗೌತಮ್,ಗೌರವಾಧ್ಯಕ್ಷ ರವಿಚಂದ್ರ,ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಖಜಾಂಚಿ ವಿಜಯ್,ನಿಕಟಪೂರ್ವ ಅಧ್ಯಕ್ಷ ಕೆ.ಬಿ.ಅಶೋಕ್, ಉಪಾಧ್ಯಕ್ಷರಾದ ಪುರುಷೋತ್ತಮ್,ನಂದೀಶ್, ಕೆಜಿಎಫ್ ತಾಲ್ಲೂಕು ಅಧ್ಯಕ್ಷ ನರಸಿಂಹಮೂರ್ತಿ, ಖಜಾಂಚಿ ಕೃಷ್ಣಮೂರ್ತಿ,ಶ್ರೀನಿವಾಸ್, ಬಂಗಾರಪೇಟೆ ಅಧ್ಯಕ್ಷ ಅಪ್ಪೇಗೌಡ, ಜಿಲ್ಲಾ ಪದಾಧಿಕಾರಿಗಳಾದ ಶಿವಕುಮಾರ್, ಖಜಾನೆ ಶಂಕರ್, ವಿಜಯಮ್ಮ, ಪ್ರೇಮ, ಅನಿಲ್, ರವಿ,ಶ್ರೀರಾಮ್, ಚೌಡಪ್ಪ,ರತ್ನಪ್ಪ, ನಾಗಮಣಿ, ಎನ್.ಎಸ್.ಭಾಗ್ಯ,ಕಲಾವತಿ,ಮಂಜುಳಾ, ಯೂನಿಸ್ ಖಾನ್,ಹರ್ಷಿತ್‍ಗಾಂಧಿ, ಶಿಕ್ಷಕ ಬಳಗದ ವೆಂಕಟಾಚಲಪತಿ,ಚಿಕ್ಕಣ್ಣ,ಸದಾಶಿವರೆಡ್ಡಿ,ಮಲ್ಲಿಕಾರ್ಜುನ್, ಸುಬ್ರಮಣಿ,ಕೋರ್ಟ್‍ನ ನಾಗರಾಜ್,ಮುನಿಸ್ವಾಮಿ, ಬಸವೇಗೌಡ,ನಟರಾಜ್ ಮತ್ತಿತರರಿದ್ದರು.

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ‘ ಆಝಾದಿ ಕಾ ಅಮೃತ್ ಮಹೋತ್ಸವ್’ ದ ಅಂಗವಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಆಶ್ರಯದಲ್ಲಿ  ‘ಹರ್ ಘರ್ ಧ್ಯಾನ್’

ಯುವಜನರನ್ನು ಮಾನಸಿಕ ಆರೋಗ್ಯ ಶಿಕ್ಷಣದಲ್ಲಿ ತೊಡಗಿಸಿಕೊಳ್ಳಲು ಮತ್ತು ಧ್ಯಾನವನ್ನು ನಿಯಮಿತ ಅಭ್ಯಾಸವಾಗಿ ತೆಗೆದುಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ‘ ಹರ್ ಘರ್ ಧ್ಯಾನ್ ‘ ಕಾರ್ಯಕ್ರಮವನ್ನು ಸಂಸ್ಕೃತಿ ಸಚಿವಾಲಯ‌ದ ಸಹಯೋಗದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಆಶ್ರಯದಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಯಿತು. ಆರ್ಟ್ ಆಪ್ ಲಿವಿಂಗ್ ನ ಉಡುಪಿ ಘಟಕದ ಸದಸ್ಯರಾದ  ಶ್ರೀಮತಿ ಶೈಲಜಾ ಇವರು ಸುಧಾರಿತ ಆರೋಗ್ಯ ಮತ್ತು ಕ್ಷೇಮಕ್ಕಾಗಿ ಧಾನ್ಯ- ಸಂಬಂಧಿ ಕೆಲವು ಆಸನಗಳ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಆರ್ಟ್ ಆಫ್ ಲಿವಿಂಗ್ ನ ಕುಂದಾಪುರ ಘಟಕದ ಸದಸ್ಯೆ ಶ್ರೀಮತಿ ಮಂಜುಶ್ರೀ ಇವರು ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ವಿವಿಧ ಆಸನಗಳ ಪ್ರಾತ್ಯಕ್ಷಿಕೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಜೆಸಿಐ ಕುಂದಾಪುರ ಸಿಟಿ ಯ ವತಿಯಿಂದ ‘ನ್ಯಾಷನಲ್ ಲೆವೆಲ್ ಟ್ಯಾಲೆಂಟ್ ಸರ್ಚ್’  ಪರೀಕ್ಷೆ‌

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಜೆ.ಸಿ.ಐ ಕುಂದಾಪುರ ಸಿ ಟಿ ಯ ವತಿಯಿಂದ ‘ ನ್ಯಾಷನಲ್ ಲೆವೆಲ್  ಟ್ಯಾಲೆಂಟ್ ಸರ್ಚ್ ‘ ಯೋಜನೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಪರೀಕ್ಷಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.  ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿ, ಜೆಸಿ.ಐ ಕುಂದಾಪುರ ಸಿಟಿ ಯ ಅಧ್ಯಕ್ಷರಾದ ಜೆಸಿ ಡಾ. ಸೋನಿ ಡಿಕೊಸ್ಟಾ, ಸ್ಥಾಪಕ ಅಧ್ಯಕ್ಷರಾದ ಜೆಸಿ ಹುಸೇನ್ ಹೈಕಾಡಿ, ಜೆಸಿ ರಾಜೇಶ್ ಹೆಬ್ಬಾರ್, ಮಹಿಳಾ ಜೆಸಿ ಸಂಯೋಜಕಿ ಜೆಸಿ ಪ್ರೇಮಾ ಡಿ ಕುನ್ಹಾ, ಜೆಸಿ ಅನಿತಾ ಡಿಸೋಜಾ ರವರು ಉಪಸ್ಥಿತರಿದ್ದರು. 

ರಾಜೀವ್‌ ಗಾಂಧಿ ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿ ಅರ್ಪಿತಾ ಡಿಸೋಜಾಅವರಿಗೆ ಮನೋವಿಜ್ಞಾನ ಮತ್ತು ಸಮಾಜಶಾಸ್ತ್ರದಲ್ಲಿ ನಾಲ್ಕನೇ ರೇಂಕ್

ಮಂಗಳೂರು, ಆಗಸ್ಟ್‌ 8, 2023: ಅರ್ಪಿತ ಡಿಸೊಜಾ, ಮಂಗಳೂರಿನ ಸಿಟಿ ಕಾಲೇಜ್‌ ಆಫ್‌ ಫಿಜಿಯೊಥೆರಪಿ
ಕಾಲೇಜಿನ ವಿದ್ಯಾರ್ಥಿಯಾಗಿರುವ ಇವರು ಪ್ರತಿಷ್ಠಿತ ರಾಜೀವ್‌ ಗಾಂಧಿ ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿ
ಮನೋವಿಜ್ಞಾನ ಮತ್ತು ಸಮಾಜಶಾಸ್ತ್ರ ವಿಷಯಗಳಲ್ಲಿ ನಾಲ್ಕನೇ ರ್ಯಾಂಕ್‌ ಪಡೆದಿದ್ದಾರೆ. ಇವರು ಡೊಡ್ಡ ಮೂಲೆ ಹೌಸ್‌, ಕಯ್ಯಾರ್‌, ಕಾಸರಗೋಡು ನಿವಾಸಿಗಳಾದ ಅಲ್ಬರ್ಟ್‌ ಡಿಸೊಜಾ ಮತ್ತು ಸೆಲೀನ್‌ ಮಚಾದೊವರ ಮಗಳಾಗಿದ್ದಾರೆ.

ಹಿರಿಯ ಸಹಕಾರಿ ಧುರೀಣ – ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲ ಪೂಜಾರಿ ಇನ್ನಿಲ್ಲ

ಕುಂದಾಪುರ: ಹಿರಿಯ ಸಹಕಾರಿ ಧುರೀಣ, ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರು, ಬಸ್ರೂರು ಕೋಟಿ ಚೆನ್ನಯ್ಯ ಗರಡಿಯ ಮುಖ್ಯಸ್ಥರಾದ ಗೋಪಾಲ ಪೂಜಾರಿ (68 ವ) ಆ.8ರಂದು ಹೃದಯಘಾತದಿಂದ ನಿಧನರಾದರು.

ಸಹಕಾರ ಕ್ಷೇತ್ರದಲ್ಲಿ ಸುದೀರ್ಫ ಅವಧಿಯಿಂದ ಗುರುತಿಸಿಕೊಂಡಿದ್ದ ಅವರು ಕಳೆದ 25 ವರ್ಷಗಳಿಗೂ ಹೆಚ್ಚು ಕಾಲ ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದ್ದರು. ಬಸ್ರೂರು ಗರಡಿಯ ಪಾತ್ರಿಗಳಾಗಿ, ಗರಡಿಯ ಅಭಿವೃದ್ಧಿಯಲ್ಲಿ
ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಬಸ್ರೂರು ಪರಿಸರದ ಧಾರ್ಮಿಕ, ಸಹಕಾರ, ಸಾಮಾಜಿಕ ಕ್ಷೇತ್ರಗಳಲ್ಲಿ ಸತ್ರೀಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಮೃತರು ಪತ್ನಿ, ಸಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮತ್ತು ಬಿಆರ್‌ಎಸ್ ಅವಿಶ್ವಾಸ ನಿರ್ಣಯ ಮಂಡನೆ

ನವದೆಹಲಿ:ಆ.೮: ಮಣಿಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದ ವಿಚಾರವಾಗಿ ಪ್ರತಿಪಕ್ಷಗಳು ಮೋದಿ  ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿವೆ. ಕಾಂಗ್ರೆಸ್  ಸಂಸದ ಗೌರವ್ ಗೊಗೊಯ್ ಅವರು ಲೋಕಸಭೆಯಲ್ಲಿ ಬುಧವಾರ ಅವಿಶ್ವಾಸ ನಿರ್ಣಯದ ಕುರಿತು ನೋಟಿಸ್ ನೀಡಿದರು. ಕಾಂಗ್ರೆಸ್ ಮಾತ್ರವಲ್ಲದೆ ತೆಲಂಗಾಣದ ಆಡಳಿತ ಪಕ್ಷ ಬಿಆರ್‌ಎಸ್ ಕೂಡ ಪ್ರತ್ಯೇಕ ಅವಿಶ್ವಾಸ ನಿರ್ಣಯ ಮಂಡಿಸಿದೆ.

      ಸಭಾಪತಿ ಓಂಬಿರ್ಲಾ ಅವಿಶ್ವಾಸ ನಿರ್ಣಯ ನೋಟಿಸ್‌ ಸ್ವೀಕರಿಸಿದ್ದು, ಶೀಘ್ರದಲ್ಲಿ ಚರ್ಚೆಗೆ ದಿನಾಂಕ ನಿಗದಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಮಣಿಪುರದ ಬಗ್ಗೆ ಮೌನ ತಾಳಿರುವ ಪ್ರಧಾನಿಯಿಂದ ಹೇಳಿಕೆಗಳು ಬರಬೇಕು ಎಂದು ನಿರ್ಧರಿಸಿರುವ ವಿಪಕ್ಷಗಳು ಕಡೆಯ ಅಸ್ತ್ರ ಎನ್ನುವಂತೆ ಅವಿಶ್ವಾಸ ನಿರ್ಣಯ ಮಂಡಿಸಿವೆ. ಆದರೆ ಇದಕ್ಕೆ ಪ್ರತ್ಯುತ್ತರ ನೀಡಲು ಸರ್ಕಾರವೂ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದೆ ಹೇಳಲಾಗುತ್ತದೆ.     

    ತಮ್ಮ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ಉತ್ತರ ನೀಡಲಿದ್ದಾರೆ. ಇದರಲ್ಲಿ ಎರಡು ರೀತಿಯಲ್ಲಿ ಪ್ರತಿಪಕ್ಷಗಳನ್ನು ಟಾರ್ಗೆಟ್ ಮಾಡಬಹುದು ಎನ್ನಲಾಗುತ್ತಿದೆ. ಮೊದಲನೆಯದಾಗಿ ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಬಿಜೆಪಿಯೇತರ ರಾಜ್ಯಗಳ ಅಂಕಿ ಅಂಶಗಳು ಮತ್ತು ಘಟನೆಗಳನ್ನು ಉಲ್ಲೇಖಿಸಿ ಮತ್ತು ಎರಡನೆಯದಾಗಿ ಭ್ರಷ್ಟಾಚಾರದ ಪ್ರಕರಣಗಳಿಗೆ ಸಂಬಂಧಿಸಿದಂತೆ. ಮಣಿಪುರದ ಹಿಂಸಾಚಾರವನ್ನು ಪ್ರಸ್ತಾಪಿಸಿ ಅದಕ್ಕಿಂತ ಹೆಚ್ಚು, ಕಾಂಗ್ರೆಸ್ ಆಡಳಿತದಲ್ಲಿ ನಡೆದ ಪ್ರಮುಖ ಘಟನೆಗಳನ್ನು ಉಲ್ಲೇಖಿಸಬಹುದು ಎಂದು ಅನುಮಾನ ಪಡಲಾಗಿದೆ.

ಪಿಯುಸ್ ನಗರ ಚರ್ಚ್ – ’ತೋಮಸ್ ಡಿಮೆಲ್ಲೊ ಏಜ್ಯುಕೇರ್ ಚಾರಿಟೇಬಲ್ ಟ್ರಸ್ಟ್”  ಆಶ್ರಯದಲ್ಲಿ ಸ್ಕಾಲರ್ಶಿಪ್ ವಿತರಣೆ

ಕುಂದಾಪುರ, ಆ.8; ಪಿಯುಸ್ ನಗರ್ ಚರ್ಚಿನಲ್ಲಿ ದಿನಾಂಕ 5 ರಂದು ದಿವಂಗತ ತೋಮಸ್ ಡಿಮೆಲ್ಲೊ ಇವರ ಏಜ್ಯುಕೇರ್ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಪಿಯುಸ್  ನಗರ ಚರ್ಚಿನ ಕೆಥೊಲಿಕ್ ಸಭಾ ಹಾಗೂ ಸಂತ ವಿಶೆಂತ್ ಪಾವ್ಲ್ ಸಭಾ ಸಂಘಟನೆ ಜೊತೆಗೂಡಿ , ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಅಂಕ ಪಡೆದ 19 ಮಕ್ಕಳಿಗೆ ಸ್ಕಾಲರ್ಶಿಪ್ ವಿತರಿಸಲಾಯಿತು.

      ಪಿಯುಸ್  ನಗರ ಚರ್ಚಿನ ಸಭಾಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಪಿಯುಸ್ ನಗರ್ ಚರ್ಚಿನ ಧರ್ಮಗುರುಗಳಾದ ವಂ| ಆಲ್ಬರ್ಟ್ ಕ್ರಾಸ್ತಾ ಅಧ್ಯಕ್ಷತೆ ವಹಿಸಿ ’ಈ ರೀತಿಯ ಒಂದು ಕಾರ್ಯಕ್ರಮ ಅರ್ಥಪೂರ್ಣವಾದಂತದು, ಇದರಲ್ಲಿ ಸೇವೆಯ ಮನೋಭಾವನೆ ಇದೆ’ ಎಂದು ಸಂದೇಶ ನೀಡಿದರು ಏಜ್ಯುಕೇರ್ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಡಾ| ಕುಲ್ದೀಪ್ ಡಿಮೆಲ್ಲೊ ಮಾತನಾಡಿ ’ಈ ಒಂದು ಸ್ಕಾಲರ್ಶಿಪ್ ನೀಡುವ ಯೋಜನೆ ನಮ್ಮ ತಂದೆಯವರ ಕನಸಾಗಿತ್ತು. ಸಮುದಾಯದ ಮಕ್ಕಳು ಶಿಕ್ಷಣದಲ್ಲಿ ಮುಂದೆ ಬರಬೇಕು ಎಂಬದು ಅವರ ಆಸೆಯಾಗಿತ್ತು. ಆ ಆಸೆಗಳನ್ನು ನಾವು ಅವರ ಮಕ್ಕಳು ಈಡೇರಿಸುತ್ತಾ ಇದ್ದೇವೆ’ ಎಂದು ತಿಳಿಸಿದರು. ಪಾಲನ ಮಂಡಳಿ ಉಪಾಧ್ಯಕ್ಷರಾದ  ಜೇಮ್ಸ್ ಡಿಮೆಲ್ಲೊ ಹಿತನುಡಿಗಳನ್ನಾಡಿದರು. ವೇದಿಕೆಯಲ್ಲಿ ಅತಿಥಿಗಳಾದ ಡಾ| ಜಾನ್ಸನ್ ಡಿಲೀಮಾ, ಡಾ| ಮಧು ಡಿಲೀಮಾ, ಪಾಲನ ಮಂಡಳಿ  ಕಾರ್ಯದರ್ಶಿ ರೇಶ್ಮಾ ಡಿಸೋಜ, ಚರ್ಚ್ ಆಯೋಗಗಳ ಸಂಯೋಜಕಿ ಲೀನಾ ತಾವ್ರೊ ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ಗಣ್ಯರು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಿಸಿದರು. ಕಥೊಲಿಕ್ ಸಭಾ ಕಾರ್ಯದರ್ಶಿ ಪ್ರಮೀಳಾ ಡೆಸಾ ಸ್ವಾಗತಿಸಿದರು.  ಕಥೊಲಿಕ್ ಸಭಾದ ಅಧ್ಯಕ್ಷರಾದ ಅಲೆಕ್ಸಾಂಡರ್ ಲೂವಿಸ್ ಲೂವಿಸ್ ಧನ್ಯವಾದಗಳನ್ನು ಸಲ್ಲಿಸಿದರು. ಕಾರ್ಯಕ್ರಮವನ್ನು ನ್ಯಾನ್ಸಿ ವಾಜ್ ನಿರೂಪಿಸಿದರು.

ಪಟ್ಟಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ನಾಡಪ್ರಭು ಕೆಂಪೇಗೌಡ ಜಯಂತಿ ಅರ್ಥಪೂರ್ಣವಾಗಿ ಆಚರಿಸಬೇಕು:ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಪಟ್ಟಣದಲ್ಲಿ ಆ.15 ರಂದು ಸ್ವಾತಂತ್ರ್ಯ ದಿನಾಚರಣೆ ಹಾಗೂ ಆ.27 ರಂದು ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಕೆಂಪೇಗೌಡ ಜಯಂತಿ ಆಚರಿಸುವ ಕುರಿತು ಚರ್ಚಿಸಲು ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಯಾವುದೇ ಒಂದು ಸಮುದಾಯಕ್ಕೆ ಮೀಸಲಾಗದಂತೆ ಎಚ್ಚರಿಕೆ ವಹಿಸಬೇಕು. ಆಚರಣೆ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿರಬೇಕು. ಸಮುದಾಯ ಸಾಂಘಿಕವಾಗಿ ಜಯಂತಿ ಆಚರಿಸಬೇಕು. ಜಯಂತಿ ಸಮಾರಂಭದಲ್ಲಿ ಸಮಾಜದ ಎಲ್ಲ ವರ್ಗದ ಜನರೂ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಜಯಂತಿ ಆಚರಣೆಗೆ ಮೊದಲು ಸಮುದಾಯದ ಮುಖಂಡರು ಇನ್ನೊಂದು ಪೂರ್ವಭಾವಿ ಸಭೆ ನಡೆಸಿ, ಆಚರಣೆ ಬಗ್ಗೆ ರೂಪರೇಷೆ ರೂಪಿಸಬೇಕು ಎಂದು ಹೇಳಿದರು.
ಸ್ವಾತಂತ್ರ್ಯ ದಿನಾಚರಣೆಗೆ ಮೊದಲು ಪಟ್ಟಣದಲ್ಲಿ ಹದಗೆಟ್ಟಿರುವ ರಸ್ತೆಗಳಿಗೆ ಡಾಂಬರು ಹಾಕಬೇಕು. ಚಿಂತಾಮಣಿ ಸರ್ಕಲ್‍ನಿಂದ ಬಸ್ ನಿಲ್ದಾಣದ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಮುಗಿಸಬೇಕು. ಸ್ವಚ್ಛತೆ ಕಾಪಾಡಬೇಕು ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್ ಮಾತನಾಡಿ, ಆ.15 ರಂದು ಬೆಳಿಗ್ಗೆ 9 ಗಂಟೆಗೆ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಏರ್ಪಡಿಸಲಾಗಿದೆ. ತಾಲ್ಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮಾರಂಭದಲ್ಲಿ ಭಾಗವಹಿಸಬೇಕು. ಹಿಂದಿದ ದಿನ ರಾತ್ರಿ ಎಲ್ಲಾ ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ದೀಪಾಲಂದಾರ ಮಾಡಬೇಕು. ಕೆಂಪೇಗೌಡ ಜಯಂತಿ ಸಮಾರಂಭ ಆ.27ರಂದು ಮಧ್ಯಾಹ್ನ ಅದೇ ಮೈದಾನದಲ್ಲಿ ನಡೆಯಲಿದೆ. ನಿಯಮಾನುಸಾರ ಜಯಂತಿ ಆಚರಣೆಗೆ ಪೂರಕವಾದ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಮಾಜಿ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ, ಕಾರ್ಯದರ್ಶಿ ಮೀಸಗಾನಹಳ್ಳಿ ವೆಂಕಟರೆಡ್ಡಿ, ಭೈರವೇಶ್ವರ ವಿದ್ಯಾ ನಿಕೇತನದ ನಿರ್ದೇಶಕ ಎ.ವೆಂಕಟರೆಡ್ಡಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಲ್.ಗೊಪಾಲಕೃಷ್ಣ, ಲಕ್ಷ್ಮಣರೆಡ್ಡಿ ಮಾತನಾಡಿ ಆಚರಣೆ ಕುರಿತು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮಂಜುನಾಥ್, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ತೋಟಗಾರಿಕಾ ಇಲಾಖೆ
ಹಿರಿಯ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸ್, ಬೆಸ್ಕಾಂ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮತೀರ್ಥ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ನಾಗರಾಜು, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಆರ್.ದಯಾನಂದ್ ಮತ್ತಿತರರು ಇದ್ದರು.