ಯಲ್ದೂರು ಗ್ರಾಮದ ಬೇಟಮ್ಮ (80) ಬುಧವಾರ ತಮ್ಮ ನಿವಾಸದಲ್ಲಿ ನಿಧನ

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದ ಬೇಟಮ್ಮ (80) ಬುಧವಾರ ತಮ್ಮ ನಿವಾಸದಲ್ಲಿ ನಿಧನರಾದರು. ಎಸ್‍ಬಿಎಂ ಉದ್ಯೋಗಿಯಾಗಿ ನಿವೃತ್ತರಾಗಿದ್ದ ಅವರು ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲಿದ್ದರು.
ಮೃತರಿಗೆ ನಾಲ್ವರು ಪುತ್ರರು ಹಾಗೂ ನಾಲ್ವರು ಪುತ್ರಿಯರು ಇದ್ದಾರೆ.
ಗ್ರಾಮದ ಹೊರವಲಯದ ಸ್ಮಶಾನದಲ್ಲಿ ಮೃತರ ಅಂತ್ಯ ಸಂಸ್ಕಾರ ನಡೆಸಲಾಯಿತು.

ಬಗರ್ ಹುಕುಂ ಅರಣ್ಯ ಭೂಮಿ ಸಾಗುವಳಿದಾರರ ಭೂಮಿ ಹಕ್ಕಿಗೆ ಮಾರಕವಾದ ಅರಣ್ಯ ಕಲಾಖೆ ಸಚಿವರ ಟಿಪ್ಪಣಿ ರದ್ದುಪಡಿಸುವಂತೆ ಸರ್ಕಾರಕ್ಕೆ ಒತ್ತಾಯ

ಶ್ರೀನಿವಾಸಪುರ: ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಬುಧವಾರ, ಬಡವರ, ದಲಿತರ, ಅಧಿವಾಸಿಗಳ, ಹಿಂದುಳಿದ ವರ್ಗಗಳ ಬಗರ್ ಹುಕುಂ ಸಾಗುವಳಿದಾರ ಮತ್ತು ಅರಣ್ಯ ಭೂಮಿ ಸಾಗುವಳಿದಾರರ ಭೂಮಿ ಹಕ್ಕಿಗೆ ಮಾರಕವಾಗಿರುವ ಅರಣ್ಯ ಕಲಾಖೆ ಸಚಿವರ ಟಿಪ್ಪಣಿ ರದ್ದುಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಮಾತನಾಡಿ, ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ರಾಜ್ಯದಲ್ಲಿ ಎಲ್ಲ ರೀತಿಯ ಒತ್ತುವರಿ ತೆರವುಗೊಳಿಸುವಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಟಿಪ್ಪಣಿ ಕಳಿಸಿರುವುದು ಅತ್ಯಂತ ಆಘಾತಕಾರಿ ವಿಷಯವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಅರಣ್ಯ ಇಲಾಖೆ ಭೂ ಕಬಳಿಕೆ ಕಾಯ್ದೆಯಡಿ ರೈತರ ಮೇಲೆ ಪ್ರಕರಣ ದಾಖಲಿಸಿದೆ. ಸರ್ಕಾರ ಇಂಥ ಪ್ರಕರಣಗಳನ್ನು ರದ್ದುಪಡಿಸಬೇಕು. ಕಾನೂನು ಬಾಹಿರವಾಗಿ ರೈತರ ಮೇಲೆ ಕೇಸು ದಾಖಲಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಹಶೀಲ್ದಾರ್‍ಗೆ ನೀಡಲಾಯಿತು.
ಕೆಪಿಆರ್‍ಎಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್, ತಾಲ್ಲೂಕು ಕಾರ್ಯದರ್ಶಿ ಬಿ.ಎ.ಸೈಯದ್ ಫಾರೂಕ್, ಉಪಾಧ್ಯಕ್ಷರಾದ ಆರ್.ವೆಂಕಟೇಶ್, ಎಂ.ಎಸ್.ನಾಗರಾಜ್, ಸಹ ಕಾರ್ಯದರ್ಶಿಗಳಾದ ಶಿವಾರೆಡ್ಡಿ, ವೆಂಕಟಲಕ್ಷ್ಮಮ್ಮ, ಶಿವರಾಜ್ ಕುಮಾರ್, ಮಂಜುಳ, ಶ್ರೀನಾಥ್, ವಿ.ಚಲಪತಿ, ಅಲ್ಲಾಬಕಷ್ ಇದ್ದರು.

ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ-ದಿಂಬಾಲ ಅಶೋಕ್

ಶ್ರೀನಿವಾಸಪುರ: ಕೋಲಾರದಲ್ಲಿ ಅ.3 ರಂದು ಏರ್ಪಡಿಸಿದ್ದ ಬಿಜೆಪಿ ಪ್ರತಿಭಟನಾ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ ಎಂದು ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಹೇಳಿದರು.
ಪಟ್ಟಣದ ಪಿಎಲ್‍ಡಿ ಬ್ಯಾಂಕ್ ಸಭಾಂಗಣದಲ್ಲಿ ಕಾಂಗ್ರೆಸ್ ಮುಖಂಡರು ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್.ರವಿಕುಮಾರ್ ಮಾತಿನ ಭರದಲ್ಲಿ ರಮೇಶ್ ಕುಮಾರ್ ಅವರ ಜಮೀನು ಕುರಿತು ಪ್ರಸ್ತಾಪಿಸಿ ‘ರಮೇಶ್ ಕುಮಾರ್ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದರೂ ಜಿಲ್ಲಾ ಅರಣ್ಯಾಧಿಕಾರಿ ಚಕಾರ ಎತ್ತುತ್ತಿಲ್ಲ. ರಮೇಶ್ ಕುಮಾಮಾರ್ ಅವರೇನು ಸತ್ಯ ಹರಿಶ್ಚಂದ್ರನೇ ಎಂದು ಮಾತನಾಡಿರುವುದು ಸರಿಯಲ್ಲ ಎಂದು ಹೇಳಿದರು.
ತಾಲ್ಲೂಕಿನಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ವಿಷಯದಲ್ಲಿ ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ತಟಸ್ಥ ನಿಲುವು ತಳೆದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಕಾಲಿಗೆ ಗೆಜ್ಜೆ ಕಟ್ಟಿಸಿಕೊಂಡವರು ಕುಣಿಯಬೇಕು. ಕ್ಷೇತ್ರದ ಮತದಾರರು ಚುನಾವಣೆಯಲ್ಲಿ ಜಿ.ಕೆ.ವೆಂಕಟಶಿವಾರೆಡ್ಡಿ ಅವರ ಕಾಲಿಗೆ ಗೆಜ್ಜೆ ಕಟ್ಟಿದ್ದಾರೆ. ಹಾಗಾಗಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ರೈತರ ಪರವಾಗಿ ಧ್ವನಿಯೆತ್ತಬೇಕು. ಆದರೆ ಅವರು ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸ್ವಾಗತಿಸಿದ್ದಾರೆ. ಮತದಾರರು ಕುಣಿಯಲು ಭಾರದ ವ್ಯಕ್ತಿಯ ಕಾಲಿಗೆ ಗೆಜ್ಜೆ ಕಟ್ಟಿದಂತಾಗಿದೆ ಎಂದು ಹೇಳಿದರು.
ಈಗ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಎರಡೂ ಪಕ್ಷಗಳು ರೈತರ ಪರವಾಗಿ ಹೋರಾಟ ಮಾಡಬೇಕು. ಆದರೆ ಇಲ್ಲಿ ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು ಎಂಬಂತಾಗಿದೆ. ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಅವರು, ಪಕ್ಷದ ಮುಖಂಡರೊಂದಿಗೆ ರೈತರ ಪರವಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.
ಒತ್ತುವರಿ ತೆರವುಗೊಳಿಸಲಾಗಿದ್ದ ಜಮೀನು ಉಳುಮೆ ಮಾಡಿದ ಆಪಾದನೆ ಮೇಲೆ ತಾಲ್ಲೂಕಿನ ಕೇತಗಾನಹಳ್ಳಿ ಗ್ರಾಮದ ರೈತ ನಾಗರಾಜ್ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿರುವುದು ಸರಿಯಲ್ಲ. ಏನೇ ಆದರೂ ರೈತರು ಕಾನೂನು ಕೈಗೆ ತೆಗೆದುಕೊಳ್ಳಬಾರದು. ಸಮಸ್ಯೆ ನಿವಾರಣೆಗೆ ಸಾಂಘಿಕ ಪ್ರಯತ್ನ ಮಾಡಬೇಕು. ಪಕ್ಷಾತೀತವಾಗಿ ಹೋರಾಡಬೇಕು ಎಂದು ಹೇಳಿದರು.
ಮುಖಂಡರಾದ ಮುನಿವೆಂಕಟಪ್ಪ, ವೆಂಕಟರೆಡ್ಡಿ, ಗುರಪ್ಪ, ಎನ್.ತಿಮ್ಮಯ್ಯ, ಅಯ್ಯಪ್ಪ, ರಾಮಾಂಜಮ್ಮ ಇದ್ದರು.

ಭಂಡಾರ್ಕಾರ್ಸ್ ಕಾಲೇಜಿನ ಯೂಥ್ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ ಪ್ರಥಮ ಚಿಕಿತ್ಸೆ ಕುರಿತು ತರಬೇತಿ ಕಾರ್ಯಕ್ರಮ

ಕುಂದಾಪುರ: ಅಕ್ಟೋಬರ್ 4ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಯೂಥ್ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ ಪ್ರಥಮ ಚಿಕಿತ್ಸೆ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕುಂದಾಪುರದ ಆಯುಷ್ ಧಾಮ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸೋನಿ ಡಿಕೋಸ್ತಾ ಅವರು ವ್ಯಕ್ತಿಯನ್ನು ಬದುಕಿಸುವುದು ಸಮಾಜದ ಋಣವನ್ನು ತೀರಿಸುವುದಕ್ಕೆ ಒಂದು ಅವಕಾಶ ಸಿಕ್ಕಂತಾಗುತ್ತದೆ. ಅಂತಹ ಅವಕಾಶಗಳಲ್ಲಿ ಪ್ರಥಮ ಚಿಕಿತ್ಸೆಯೂ ಒಂದು. ಅವಘಡಗಳು ಅಪಘಾತವಾದಲ್ಲಿ ನಿಮ್ಮ ಪ್ರಥಮ ಚಿಕಿತ್ಸೆ ಜ್ಞಾನವನ್ನು ಬಳಸಿ ನಿಮ್ಮ ಜವಾಬ್ದಾರಿ ನಿಭಾಯಿಸಬೇಕು. ಜೀವವನ್ನು ಉಳಿಸುವ ಕೆಲಸ ಪುಣ್ಯದ ಕೆಲಸ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ವಹಿಸಿದ್ದರು.
ವೇದಿಕೆಯಲ್ಲಿ ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕದ ಅಧ್ಯಕ್ಷ ಜಯಕರ ಶೆಟ್ಟಿ, ಸದಸ್ಯರಾದ ಶಿವರಾಮ ಶೆಟ್ಟಿ, ಗಣೇಶ್ ಆಚಾರ್ಯ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ, ಕಾರ್ಯಕ್ರಮ ಅಧಿಕಾರಿಣಿ ವಿದ್ಯಾರಾಣಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಪ್ರಜ್ಞಾ ಆಚಾರ್ಯ ಕಾರ್ಯಕ್ರಮವನ್ನು ನಿರ್ವಹಿಸಿ, ಸಿಂಚನ ಆಚಾರ್ಯ ಸ್ವಾಗತಿಸಿ, ಅರ್ಪಿತಾ ವಂದಿಸಿದರು