ಶ್ರೀನಿವಾಸಪುರ : ಗ್ರಾಮೀಣ ಮಕ್ಕಳ 9 ದಿನಗಳ ಬೇಸಿಗೆ ಶಿಬಿರಕ್ಕೆ ಗ್ರಂಥಾಲಯ ಮೇಲ್ವಿಚಾರಕ ಎನ್.ನಾಗೇಂದ್ರ ಇವರಿಂದ ಚಾಲನೆ

ಶ್ರೀನಿವಾಸಪುರ 1 : ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ನಾಯಕತ್ವ , ನೈತಿಕತೆ , ಸಹಾನುಭೂತಿ, ಜವಾಬ್ದಾರಿ ನಿರ್ವಹಣೆ, ತಂಡ ನಿರ್ವಹಣೆ, ಸಾಮಾಜಿಕ ಹೊಂದಾಣಿಕೆ ಮತ್ತು ನಾಗರಿಕೆ ಪ್ರಜ್ಞೆ ವಿಷಯವಾಗಿ ವಿವಿಧ ಚಟುವಟಿಕೆಗಳನ್ನು ನಡೆಸುವುದೇ ಈ ಶಿಬಿರದ ಆಶಯವಾಗಿರುತ್ತದೆ ಎಂದು ಗ್ರಂಥಾಲಯ ಮೇಲ್ವಿಚಾರಕ ಎನ್.ನಾಗೇಂದ್ರ ಹೇಳಿದರು.
ತಾಲೂಕಿನ ಲಕ್ಷ್ಮೀಪುರ ಗ್ರಂಥಾಲಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಗ್ರಾಮಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಶುಕ್ರವಾರ ಗ್ರಾಮೀಣ ಮಕ್ಕಳ 9 ದಿನಗಳ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳು ತಮ್ಮ ಬೇಸಿಗೆ ರಜೆಯನ್ನು ಮನರಂಜನೀಯವಾಗಿ ಹಾಗೂ ಪರಿಣಾಮಕಾರಿಯಾಗಿ ಬಳಿಸಿಕೊಳ್ಳಲು ಬೇಸಿಗೆ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಓದುವ , ಬರೆಯುವ , ಅಂಕಿಸಂಖ್ಯೆ, ವಿಜ್ಞಾನ ವಿಷಯಗಳು,ನಾಯಕತ್ವ ಮತ್ತು ಸಂವಹನ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಲಾಗಿದೆ. ಪರಿಸರ ಕಾಳಜಿ, ಸಾಮಾಜಿಕ ಕಾಳಜಿ ಬೆಳಸುವುದು ಮತ್ತು ಸ್ಥಳೀಯ ಸಂಸ್ಕøತಿ, ಜೀವನ ಶೈಲಿ, ಇತಿಹಾಸ ಅಂಶಗಳನ್ನು ತಿಳಿಯುವಂತೆ ಮಾಡುವುದು ಹಾಗೂ ಮಕ್ಕಳಲ್ಲಿರುವ ಸೃಜನಾತ್ಮಕ ಸಾಮಥ್ರ್ಯವನ್ನು ಅಭಿವೃದ್ಧಿಪಡಿಸುವುದು ಬೇಸಿಗೆ ಶಿಬಿರದ ಆಶಯವಾಗಿರುತ್ತದೆ. ತನ್ಮೂಲಕ ಗ್ರಾಮಪಂಚಾಯಿತಿ ಗ್ರಂಥಾಲಯಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಬಳಸಲು ಮಕ್ಕಳನ್ನು ಪ್ರೇರೇಪಿಸುವುದು.
ಮಕ್ಕಳಲ್ಲಿ ಸೃಜನಾತ್ಮಕತೆಗೆ ಸಹಾಯಕವಾಗಿ ಮಕ್ಕಳ ಪುಸ್ತಕ , ದಿನಪತ್ರಿಕೆ , ನಿಯತಕಾಲಿಕೆಗಳನ್ನು ಓದುವುದು, ಚಿತ್ರ ಓದುವಿಕೆ, ಕಥೆ ಕಟ್ಟುವಿಕೆ , ನಿಧಿ ಶೋಧ, ಗಟ್ಟಿ ಓದು ಮತ್ತು ಪತ್ರ ಬರವಣಿಗೆಗೆ ಸಂಬಂಧಿಸಿದಂತೆ ವಿವಿಧ ಚಟುವಟಿಕೆಗಳನ್ನು ಶಿಬಿರದ ಅವಧಿಯಲ್ಲಿ ಆಯೋಜಿಸಲಾಗುವುದು ಹಾಗೂ ಮಕ್ಕಳ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ದೈನಂದಿನ ಬದುಕಿನಲ್ಲಿ ಕಾಣುವ ಚಟಿವಟಿಕೆಗಳನ್ನು ಅರಿಯಲು , ಶೋಧನಾ ಪ್ರವೃತ್ತಿ ಪ್ರೋತ್ಸಾಹಿಸಲು ಮತ್ತು ಕಲಿತದ್ದನ್ನು ವರದಿ ಮಾಡಲು ಯೋಜನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಶಿಬಿರದಲ್ಲಿ ಪಾಲ್ಗುಳ್ಳುವಂತೆ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
19 ರಿಂದ 27 ದಿನಾಂಕದವರೆಗೂ 9 ದಿನಗಳ ಬೇಸಿಗೆ ಶಿಬಿರವು ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1;30ರ ವರಗೆ ನಡೆಯಲಿದ್ದು, ಈ ಸಮಯದಲ್ಲಿ ಹೊಸ ಹೊಸ ವಿನೂತನ ಚಟುವಟಿಕೆಗಳನ್ನು ಮಾಡಿಸಿ ಮಕ್ಕಳನ್ನು ಗ್ರಂಥಾಲಯದ ಕಡೆ ಸಳೆಯುವ ಪ್ರಯತ್ನವನ್ನು ಮಾಡಲಾಗುವುದು.
ಮಕ್ಕಳಿಗೆ ಪಠ್ಯ, ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿನ ಕೌಶಲ್ಯವನ್ನು ಪತ್ತೆ ಹಚ್ಚಿ ಮುಂದಿನ ದಿನಗಳಲ್ಲಿ ವೇದಿಕೆ ನಿರ್ಮಿಸಿ ಕೊಡುವುದೇ ಈ ಶಬಿರದ ಉದ್ದೇಶ ಎಂದು ತಿಳಿಸುತ್ತಾ ಈ ಬೇಸಿಗೆ ಶಿಬಿರವನ್ನು ಮಕ್ಕಳು ಸದಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಈ ಗ್ರಂಥಾಲಯವು ಡಿಜಟಲೀಕರಣವಾಗಿರುವುದರಿಂದ ಮಕ್ಕಳು ಇಂಟರ್ ನೆಟ್ ಬಳಸಿಕೊಂಡು ತಮ್ಮಗೆ ಆಸಕ್ತಿ ಇರುವಂತೆ ಪುಸ್ತಕಗಳನ್ನು ಓದಬಹುದು ಎಂದರು.
ಗ್ರಾ.ಪಂ. ಬಿಲ್ ಕಲೆಕ್ಟರ್ ಶಿವಣ್ಣ, ಗ್ರಾ.ಪಂ. ಸಿಬ್ಬಂದಿಗಳಾದ ಚಿಕ್ಕವೆಂಕಟರಮಣ, ವೆಂಕಟೇಶ್, ವಿದ್ಯಾರ್ಥಿಗಳು ಹಾಗು ಮಹಿಳಾ ಸಂಘಗಳ ಸದಸ್ಯರು ಭಾಗವಹಿಸಿದ್ದರು.

IMJ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆ, ಮೂಡ್ಲಕಟ್ಟೆ- ಮಂಗಳೂರು ವಿಶ್ವವಿದ್ಯಾನಿಲಯದ ಅಂತರ ವಲಯ ಥ್ರೋಬಾಲ್ ಪಂದ್ಯಾವಳಿ- ಆಳ್ವಾಸ್ ಮೂಡುಬಿದಿರೆ ಚಾಂಪಿಯನ್

ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆ ಮೂಡ್ಲಕಟ್ಟೆ ಕುಂದಾಪುರ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳೆಯರಿಗಾಗಿ ನಡೆದ ಅಂತರ ವಲಯ ಥ್ರೋಬಾಲ್ ಪಂದ್ಯಾವಳಿಯಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜು ಮೂಡುಬಿದಿರೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು 2-0 ನೇರ ಸೆಟ್‌ಗಳಿಂದ ಸೋಲಿಸಿ ಆಳ್ವಾಸ್ ಚಾಂಪಿಯನ್ ಆಯಿತು. ಈ ಅಂತರ ವಲಯ ಪಂದ್ಯಾವಳಿಗೂ ಮುನ್ನ ಇದೇ ಮೈದಾನದಲ್ಲಿ ಮೇ 17ರಂದು ನಡೆದ ಉಡುಪಿ ವಲಯ ಥ್ರೋಬಾಲ್ ಪಂದ್ಯಾವಳಿಯಲ್ಲಿ ಇದೇ ಹೆಬ್ರಿ ತಂಡವನ್ನು ಸೋಲಿಸಿ ಆಳ್ವಾಸ್ ಕಾಲೇಜು ಚಾಂಪಿಯನ್ ಆಗಿತ್ತು. ಇಂಟರ್‌ಜೋನ್ ಪಂದ್ಯಾವಳಿಯಲ್ಲಿ ಪಧುವ ಕಾಲೇಜು ಮಂಗಳೂರು ತೃತೀಯ ಮತ್ತು ಎಂಎಸ್‌ಆರ್‌ಎಸ್ ಕಾಲೇಜು ಶಿರ್ವ ನಾಲ್ಕನೇ ಸ್ಥಾನ ಪಡೆದುಕೊಂಡಿತು. ಉಡುಪಿ ವಲಯದ ಪಂದ್ಯಾವಳಿಯಲ್ಲಿ ಎಸ್.ಎಂ.ಸಿ ಶಿರ್ವ ತೃತೀಯ ಹಾಗೂ ಎಂ.ಎಸ್.ಆರ್.ಎಸ್ ಶಿರ್ವ ನಾಲ್ಕನೇ ಸ್ಥಾನ ಪಡೆದರು.

IMJ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಕಾಮರ್ಸ್ ಈ ಪಂದ್ಯಾವಳಿಯನ್ನು ತಮ್ಮ ಆರಂಭದ ವರ್ಷದಲ್ಲಿಯೇ ಆಯೋಜಿಸಿದೆ. ಮೇ 17 ರಂದು ಉಡುಪಿ ವಲಯ ಪಂದ್ಯಾವಳಿ ಮತ್ತು ಮೇ 19 ರಂದು ಇಂಟರ್ಜೋನ್ ಪಂದ್ಯಾವಳಿ ನಡೆಯಿತು. ಮೇ 19 ರಂದು ಇಂಟರ್‌ಜೋನ್ ಪಂದ್ಯಾವಳಿಯ ಸಮಾರೋಪ ಸಮಾರಂಭ ನಡೆಯಿತು.
 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯವರಾದ ಆಡಳಿತ ನಿರ್ದೇಶಕರು, ಸೃಷ್ಟಿ ಇನ್ಫೋಟಿಕ್  ಕುಂದಾಪುರದ ಶ್ರೀಯುತ ಹರ್ಷವರ್ಧನ್ ಶೆಟ್ಟಿ ಯವರು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮುಖ್ಯವಾಗಿ ಮೂರು E ಗಳಾದ ಎಜುಕೇಶನ್, ಎನ್ವಿರಾನ್ಮೆಂಟ್, ಎಕ್ಸ್ಪೋಜರ್ ಗಳನ್ನ ಬೆಳೆಸಿಕೊಳ್ಳಬೇಕು. ಅವಾಗ ಜೀವನದಲ್ಲಿ ಸದೃಢತೆಯನ್ನು ಸಾಧಿಸಲು ಸಾಧ್ಯ ಎಂದರು. ಗೌರವ ಅತಿಥಿಯರಾದ ದೈಹಿಕ ನಿರ್ದೇಶಕರು ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಜೆರಾಲ್ಡ್ ಸಂತೋಷ್ ಡಿಸೋಜರವರು ವಿದ್ಯಾರ್ಥಿಗಳು ತಮ್ಮ ಸಮಯದ ಪರಿಪಾಲನೆಯನ್ನು ಪಾಲಿಸಿಕೊಂಡು ಬಂದು ಕ್ರೀಡೆಯಲ್ಲಿ ಯಥೇಚ್ಛವಾಗಿ ತಮ್ಮನ್ನು ತಾವು ತೊಡಗಿಸಿ ಕೊಂಡಾಗ ನಿಮ್ಮ ದೇಹದಾಢ್ಯವನ್ನು ಸದೃಢಗೊಳಿಸಲು ಸಾಧ್ಯ, ಮೊಬೈಲ್ ನೋಡುವುದರಲ್ಲಿ ಹೆಚ್ಚಿನ ಸಮಯವನ್ನು ಕಳೆಯದೆ ಆ ಸಮಯವನ್ನು ಕ್ರೀಡೆಗೆ ಬಳಸಿಕೊಳ್ಳುವುದರ ಮೂಲಕ ನೀವು ಜೀವನದಲ್ಲಿ ಇನ್ನೂ ಹೆಚ್ಚಿನ ಧೃಡತ್ವವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
 ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಟೇಲ್ ರವರು ಅಧ್ಯಕ್ಷೀಯ ಮಾತುಗಳಲ್ಲಿ, ಸೋಲು ಎಂಬುದು ಇವತ್ತಿಗೆ ಕೊನೆಯಲ್ಲ. ಮುಂದಿನ ಸಂದರ್ಭದಲ್ಲಿ ಆ ಸೋಲನ್ನು ಗೆಲುವಾಗಿ  ಪರಿಗಣಿಸುವ ಛಲವನ್ನು ಹೊಂದಿ ಅದಕ್ಕೆ ತಕ್ಕನಾದ ಪರಿಶ್ರಮವಹಿಸಿ ನಮ್ಮ ದಾಖಲೆಯನ್ನು ನಾವೇ ಮುರಿಯುವಂತಹ ಸಾಮರ್ಥ್ಯವನ್ನು ಪಡೆದುಕೊಳ್ಳಬೇಕು ಎಂದರು.
 ಕಾರ್ಯಕ್ರಮದಲ್ಲಿ ಸಹ ನಿರ್ದೇಶಕರು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಡಾ| ಹರಿದಾಸ ಕೂಳೂರು, ಭಂಡಾರ್ಕರ್ಸ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜು ಕುಂದಾಪುರದ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀಯುತ ಶಂಕರ್ ನಾರಾಯಣ, ಐಎಂಜೆ ವಿದ್ಯಾ ಸಂಸ್ಥೆಗಳ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗಡೆ, ಉಪ ಪ್ರಾಂಶುಪಾಲರಾದ ಪ್ರೊ| ಜಯಶೀಲ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀಯುತ ಪ್ರವೀಣ್ ಖಾರ್ವಿ, ವಿವಿಧ ವಿದ್ಯಾ ಸಂಸ್ಥೆಗಳ ಕ್ರೀಡಾಪಟುಗಳು ಹಾಗೂ ದೈಹಿಕ ಶಿಕ್ಷಕರು, ತೀರ್ಮಾನಗಾರರು, ಕಾಲೇಜಿನ ಬೋಧಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಥಮ ಸ್ಥಾನ ಆಳ್ವಾಸ್ ಕಾಲೇಜು ಮೂಡಬಿದಿರೆ, ದ್ವಿತೀಯ ಸ್ಥಾನ ಗೌರ್ನಮೆಂಟ್ ಫಸ್ಟ್ ಗ್ರೇಡ್ ಕಾಲೇಜು ಹೆಬ್ರಿ, ತೃತೀಯ ಸ್ಥಾನ  ಪದ್ವ ಕಾಲೇಜು ಮಂಗಳೂರು, ಚತುರ್ಥ ಸ್ಥಾನ ಎಂ ಎಸ್ ಆರ್ ಎಸ್ ಕಾಲೇಜು ಶಿರ್ವ.
ಕಾರ್ಯಕ್ರಮವನ್ನು ಕನ್ನಡ ವಿಭಾಗದ ಪ್ರೊ| ಸುಮನರವರು ನಿರೂಪಿಸಿದರು.  ಆಂಗ್ಲ ವಿಭಾಗದ ಪ್ರೊ| ಪಾವನ ರವರು ಸ್ವಾಗತಿಸಿದರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀಯುತ ಪ್ರವೀಣ್ ಖಾರ್ವಿ,  ವಂದಿಸಿದರು. ವಿಜೇತರ ಪಟ್ಟಿಯನ್ನು ಬಿಸಿಎ  ವಿಭಾಗದ ಮುಖ್ಯಸ್ಥರಾದ ಪ್ರೊ ಅಹಮದ್ ಖಲೀಲ್ ರವರು ಓದಿದರು.

ಸಿದ್ದರಾಮಯ್ಯಮುಖ್ಯಮಂತ್ರಿಯಾಗಿಎರಡನೇ ಭಾರಿ, ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಜೊತೆಗೆ ಎಂಟು ಸಚಿವರ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ಹದಿನಾರನೇ ವಿಧಾನಸಭೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅವರು ರಾಜ್ಯದ ಎರಡನೇ ಭಾರಿ ಮುಖ್ಯಮಂತ್ರಿಯಾಗಿ ಇಲ್ಲಿ ಇಂದು ಪ್ರಮಾಣವಚನ ಸ್ವೀಕರಿಸಿದರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿ ಇಲ್ಲಿ ಇಂದು ಪ್ರಮಾಣವಚನ ಸ್ವೀಕರಿಸಿದರು. ಜೊತೆಗೆ ಎಂಟು ಶಾಸಕರು ಸಚಿವ ಸ್ಥಾನ ಪಡೆದವರು ಕಿಕ್ಕಿರಿದ ಜನರ ಮುಂದೆ ಪ್ರಮಾಣವಚನ ಸ್ವೀಕರಿಸಿದರು

ಇಲ್ಲಿನ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ  ಜನಸಾಗರದ ಹರ್ಷೋದ್ಗಾರಗಳ ನಡುವೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಧಿಕಾರ ಪದ ಮತ್ತು ಗೋಪ್ಯತಾ ಪ್ರಮಾಣ ವಚನವನ್ನು ಬೋಧಿಸಿದರು.

ಹತ್ತು ವರ್ಷಗಳ ನಂತರ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ ಅವರು ಈ ಹಿಂದೆ ಇದೇ ವೇದಿಕೆಯಲ್ಲಿಯೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.  ಈ ಇಬ್ಬರು ನಾಯಕರೂ ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

     ಸಿದ್ದರಾಮಯ್ಯ ಅವರು ಈ ಸಲ ದೇವರ ಹೆಸರಿನಲ್ಲಿ ಹಾಗೂ ಡಿ.ಕೋಟೆ ಶಿವಕುಮಾರ್ ಅವರು ನೊಣವಿನಕೆರೆಯ ಗಂಗಾಧರ ಅಜ್ಜಯ್ಯ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ನೂತನ ಶಾಸಕರಾಗಿ ಆಯ್ಕೆಯಾಗಿರುವ ಡಾ.ಜಿ.ಪರಮೇಶ್ವರ್, ಕೆ. ಹೆಚ್.ಮುನಿಯಪ್ಪ, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ ಹಾಗೂ  ಜಮೀರ್ ಅಹ್ಮದ್ ಖಾನ್ ಅವರೂ ಕೂಡಾ ಇದೇ ಸಂದರ್ಭದಲ್ಲಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇಂದು ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಚಾಲನೆಯಲ್ಲಿ ಬರುತ್ತದೆ – ಸಂಪುಟದ ಸಂಭಾವ್ಯ ಸಚಿವರ ಪಟ್ಟಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಕುವು ಸಾಧಿಸಿದ್ದು, ಕಾಂಗ್ರೆಸ್ಸ್ ಸರಕಾರದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದು ಹಾಗೇ ಡಿ.ಕೆ ಶಿವಕುಮಾರ್ ಡಿಸಿಎಂ ಆಗಿ ಆಯ್ಕೆ ಆಗಿದ್ದಾರೆ. ಇವರಿಬ್ಬರೂ ಇಂದು ಮೇ 20ರಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆಯುವ ಸಮಾರಂಭದಲ್ಲಿ ಪದಗ್ರಹಣ ಸ್ವೀಕರಿಸಲಿದ್ದಾರೆ. ಇವರೊಂದಿಗೆ ಸುಮಾರು 28 ಮಂದಿ ಶಾಸಕರು ಸಚಿವರಾಗಿ ಪದಗ್ರಹಣ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಸಂಭಾವ್ಯರ ಪಟ್ಟಿ ಮತ್ತು ಹುದ್ದೆಗಳು ಈ ರೀತಿ ಇವೆ


ಶ್ರೀ ಸಿದ್ದರಾಮಯ್ಯ -ಮುಖ್ಯಮಂತ್ರಿ,ಹಣಕಾಸು ಮಂತ್ರಿ ಹಾಗೂ ಸಿಬ್ಬಂದಿ ಆಡಳಿತ ಸುಧಾರಣೆ
ಶ್ರೀ ಡಿ.ಕೆ.ಶಿವಕುಮಾರ್ – ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರು
ಆರ್.ವಿ.ದೇಶಪಾಂಡೆ – ವಿಧಾನಸಭಾ ಸ್ಪೀಕರ್
ಡಾ.ಹೆಚ್.ಸಿ.ಮಹದೇವಪ್ಪ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಸತೀಶ್ ಜಾರಕಿಹೋಳಿ – ಸಮಾಜ ಕಲ್ಯಾಣ
ಕೃಷ್ಣಭೈರೇಗೌಡ – ಕೃಷಿ ಮತ್ತು ತೋಟಗಾರಿಕೆ
ಲಕ್ಷ್ಮಿ ಹೆಬ್ಬಾಳ್ಕರ್ -ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಪುಟ್ಟರಂಗಶೆಟ್ಟಿ – ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಮುಜರಾಯಿ ಮತ್ತು ಜವಳಿ
ಚೆಲುವನಾರಯಣಸ್ವಾಮಿ – ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ
ದಿನೇಶ್ ಗುಂಡುರಾವ್ – ನಗರಾಭಿವೃದ್ಧಿ (ಬೆಂಗಳೂರು ನಗರ ಒಳಗೊಂಡಂತೆ)
ರಾಮಲಿಂಗಾರೆಡ್ಡಿ -ಲೋಕೋಪಯೋಗಿ ಮತ್ತು ಒಳನಾಡು ಜಲಸಾರಿಗೆ
ಕೆ.ಜೆ.ಜಾರ್ಜ್- ಬೃಹತ್ ಮತ್ತು ಮಧ್ಯಮ ಕೈಗಾರಿಕೆ
ಎಚ್.ಕೆ.ಪಾಟೀಲ್ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಕೆ.ಎಂ.ಶಿವಲಿಂಗೇಗೌಡ – ಗಣಿ ಮತ್ತು ಭೂವಿಜ್ಞಾನ ಹಾಗೂ ಮುಜರಾಯಿ
ಶಿವಾನಂದ ಪಾಟೀಲ್- ಕನ್ನಡ ಮತ್ತು ಸಂಸ್ಕೃತಿ
ಕೆ.ವೆಂಕಟೇಶ್ -ಅರಣ್ಯ ಮತ್ತು ಪರಿಸರ
ಪ್ರಿಯಾಂಕ್ ಖರ್ಗೆ – ಐಟಿಬಿಟಿ ಮತ್ತು ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ
ಬಿ.ಕೆ.ಹರಿಪ್ರಸಾದ್ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಾಕ್ಷರತ
ಆರ್.ಬಿ.ತಿಮ್ಮಾಪುರ – ರೇಷ್ಮೆ ಮತ್ತು ಪಶುಸಂಗೋಪನಾ
ಎಂ.ಬಿ.ಪಾಟೀಲ್ -ಗೃಹ ಮತ್ತು ಒಳಾಡಳಿತ
ಸತೀಶ್ ಸೈಲ್ – ಮೀನುಗಾರಿಕೆ ಮತ್ತು ಬಂದರು
ಕೆ.ಹೆಚ್.ಮುನಿಯಪ್ಪ – ಕಂದಾಯ
ಯು.ಟಿ.ಖಾದರ್ – ಸಾರಿಗೆ
ಮಂಕಳ ವೈದ್ಯ -ಯೋಜನೆ ಮತ್ತು ಸಾಂಖ್ಯಿಕ
ಶಿವರಾಜ್ ತಂಗಡಗಿ – ಯುವಜನ ಮತ್ತು ಕ್ರೀಡೆ
ಭೈರತಿ ಸುರೇಶ್ -ಸಣ್ಣ ಕೈಗಾರಿಕೆ ಹಾಗೂ ಮುನಿಸಿಪಲ್ ಆಡಳಿತ
ಬಿ.ಜೆಡ್.ಜಮೀರ್ ಅಹ್ಮದ್ ಖಾನ್ – ಪ್ರವಾಸೋದ್ಯಮ ಹಾಗೂ ವಕ್ಫ್
ಮಾಗಡಿ ಬಾಲಕೃಷ್ಣ- ಅಬಕಾರಿ
ಟಿ.ಬಿ.ಜಯಚಂದ್ರ- ಕಾನೂನು ಮತ್ತು ಸಂಸದೀಯ ವ್ಯವಹಾರ
ಸಂಡೂರು ತುಕಾರಂ – ಕಾರ್ಮಿಕ
ಲಕ್ಷ್ಮಣ್ ಸವದಿ – ಸಹಕಾರ ಮತ್ತು ಸಕ್ಕರೆ
ಎಂ.ಕೃಷ್ಣಪ್ಪ – ವಸತಿ
ಡಾ.ಜಿ.ಪರಮೇಶ್ವರ್ – ಇಂಧನ
ಡಾ.ಶರಣ್ ಪ್ರಕಾಶ್ ಪಾಟೀಲ್ – ವೈದ್ಯಕೀಯ ಶಿಕ್ಷಣ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ -ಬಸವರಾಜ ಶಿವಣ್ಣನವರ್
ಡಿ.ಸುಧಾಕರ್ -ಸಂಸದೀಯ ಕಾರ್ಯದರ್ಶಿ
ವಿಧಾನಸಭೆ ಮುಖ್ಯ ಸಚೇತಕ – ಅಜಯ್ ಸಿಂಗ್
ವಿಧಾನಸಭಾ ಉಪ ಸ್ಪೀಕರ್ – ತನ್ವೀರ್ ಸೇಠ್

ತಾಲ್ಲೂಕಿನಲ್ಲಿ ಹಾದುಹೋಗುವ ರೈಲು ರಸ್ತೆ ಕೆಳಗೆ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಅಂಡರ್ ಪಾಸ್‍ಗಳಿಂದಾಗಿ ಮಳೆಗಾಲದಲ್ಲಿ ನಾಗರಿಕ ಸಂಚಾರಕ್ಕೆ ತೊಂದರೆ : ಜೆಡಿಎಸ್ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಹಾದುಹೋಗುವ ರೈಲು ರಸ್ತೆ ಕೆಳಗೆ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಅಂಡರ್ ಪಾಸ್‍ಗಳಿಂದಾಗಿ ಮಳೆಗಾಲದಲ್ಲಿ ನಾಗರಿಕ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಜೆಡಿಎಸ್ ವಿಜೇತ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ದೊಡಮಲದೊಡ್ಡಿ ಗ್ರಾಮದ ಸಮೀಪ ಹಾಳಾಗಿರುವ ರೈಲ್ವೆ ಅಂಡರ್ ಪಾಸ್‍ಗೆ ಶುಕ್ರವಾರ ರೈಲ್ವೆ ಎಂಜಿನಿಯರ್‍ಗಳೊಂದಿಗೆ ಭೇಟಿಯಾಗಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ನಾಗರಿಕರಿಗೆ ಅನುಕೂಲವಾಗಲೆಂದು ರೈಲ್ವೆ ಅಂಡರ್ ಪಾಸ್ ನಿರ್ಮಿಸಲಾಗಿದೆ. ಆದರೆ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ. ಆರೇಳು ಅಡಿ ನೀರು ನಿಲ್ಲುತ್ತದೆ. ಅಂಥ ಸಂದರ್ಭದಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುತ್ತದೆ. ಗ್ರಾಮೀಣ ಪ್ರದೇಶದ ಜನರು ಹತ್ತಾರು ಕಿ.ಮೀ ಬಳಸಿಕೊಂಡು ಗ್ರಾಮ ಸೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಇತ್ತೀಚೆಗೆ ಪಂಪ್‍ಸೆಟ್ ನೆರವಿನಿಂದ ಅಂಡರ್ ಪಾಸ್ ಕೆಳಗಿನ ನೀರು ಹೊರಹಾಕುವ ಯೋಜನೆ ಜಾರಿಗೆ ತರಲಾಗಿದೆ. ಆದರೆ ಅದು ಸುಲಭದ ಕೆಲಸವಾಗಿಲ್ಲ. ಎಲ್ಲ ಅಂಡರ್ ಪಾಸ್‍ಗಳಲ್ಲೂ ನೀರು ತುಂಬಿಕೊಂಡರೆ, ತ್ವರಿತಗತಿಯಲ್ಲಿ ಕೆಲಸ ನಡೆಯುವುದಿಲ್ಲ. ನಾಗರಿಕರಿಗೆ ಉಂಟಾಗುತ್ತಿರುವ ತೊಂದರೆ ತಪ್ಪಿಸಲು ರೈಲ್ವೆ ಇಲಾಖೆ ವಿಶೇಷ ಕಾಳಜಿ ವಹಿಸಬೇಕು ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಪೂಲ ಶಿವಾರೆಡ್ಡಿ, ವೇಣುಗೋಪಾಲ್, ಮಂಜುನಾಥರೆಡ್ಡಿ ಇದ್ದರು.

ಶ್ರೀಮತಿ ವಿಜಯಾ ಪಿ. ಕಾಮತ್ ನಿಧನ


ಕುಂದಾಪುರದ ಪ್ರಸಿದ್ಧ ವ್ಯಾಪಾರಸ್ಥ ದಿ. ಕೆ. ಪದ್ಮನಾಭ ಕಾಮತ್ ಅವರ ಧರ್ಮಪತ್ನಿ,
ಮೆ| ಕೆ. ಪಿ. ಕಾಮತ್ ಸಂಸ್ಥೆಯ ಕೆ. ರಾಮಚಂದ್ರ ಕಾಮತ್ ಅವರ ತಾಯಿ ಶ್ರೀಮತಿ ವಿಜಯಾ ಪಿ. ಕಾಮತ್ (94) ದಿನಾಂಕ ಮೇ 19 ರಂದು ನಿಧನರಾದರು.
ಇವರು ಓರ್ವ ಪುತ್ರ, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ

ಮೇ 20,21 ಕೋಲಾರ ಜಿಲ್ಲೆಯ 15 ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ : 6384 ವಿದ್ಯಾರ್ಥಿಗಳ ನೋಂದಣಿ-ಸುಗಮ ಪರೀಕ್ಷೆಗೆ ಕ್ರಮ-ಡಿಸಿ ವೆಂಕಟ್‍ರಾಜಾ

ಕೋಲಾರ:- ಜಿಲ್ಲೆಯ 15 ಕೇಂದ್ರಗಳಲ್ಲಿ ಮೇ.20 ಹಾಗೂ 21 ರಂದು ಎರಡು ದಿನಗಳ ಕಾಲ ನಡೆಯುತ್ತಿರುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ 6384 ವಿದ್ಯಾರ್ಥಿಗಳು ನೋದಾಯಿಸಿದ್ದು, ಯಾವುದೇ ಗೊಂದಲಕ್ಕೆಡೆಯಿಲ್ಲದಂತೆ ಅಗತ್ಯಕ್ರಮವಹಿಸುವಂತೆ ಜಿಲ್ಲಾಧಿಕಾರಿ ವೆಂಕಟ್‍ರಾಜಾ ಸೂಚಿಸಿದರು.
ತಮ್ಮ ಕಚೇರಿಯಲ್ಲಿ ನಡೆದ ಸಿಇಟಿ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋಲಾರ ನಗರದ 13 ಹಾಗೂ ಕೆಜಿಎಫ್ ನಗರದ 2 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಅಗತ್ಯ ಸಿದ್ದತೆಗಳನ್ನು ನಡೆಸಲಾಗಿದ ಎಂದು ತಿಳಿಸಿದರು.
ಪರೀಕ್ಷಾ ಕೊಠಡಿಗಳಲ್ಲಿ ಉತ್ತಮ ಗಾಳಿ,ಬೆಳಕು ಇರುವಂತೆ ನೋಡಿಕೊಳ್ಳಿ, ಶುದ್ದ ಕುಡಿಯುವ ನೀರು, ಶೌಚಾಲಯ ಸ್ವಚ್ಚತೆಗೆ ಗಮನ ನೀಡಲು ಸೂಚಿಸಿ, ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲು ಸೂಚಿಸಿದರು.
ಪರೀಕ್ಷಾ ಕೇಂದ್ರದಲ್ಲಿ ಪ್ರಕ್ರಿಯೆಗಳನ್ನು ವಿಡಿಯೋ ಚಿತ್ರೀಕರಣ ಮಾಡಿ ಒಂದು ಪೆನ್ ಡ್ರೈನಲ್ಲಿ ಸ್ಟೋರ್ ಮಾಡಿ ಸೂಕ್ತ ಓಚರ್ ಗಳೊಂದಿಗೆ ಪ್ರಾಧಿಕಾರಕ್ಕೆ ಸಲ್ಲಿಸಲು ಸೂಚಿಸಲಾಗಿದೆ, ಪರೀಕ್ಷಾ ಕರ್ತವ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳು ಗುರುತಿನ ಚೀಟಿಗಳನ್ನು ಹೊಂದಿರಬೇಕು ಎಂದು ಸೂಚಿಸಿದರು.
ಪರೀಕ್ಷಾ ಕೇಂದ್ರಗಳ ಮಾರ್ಗಾಧಿಕಾರಿಗಳು ಪರೀಕ್ಷಾ ದಿನಗಳಂದು ಖಜಾನೆಯಿಂದ ಸೀಲ್ ಮಾಡಲ್ಪಟ್ಟಿರುವ ಪ್ರಶ್ನೆ ಪತ್ರಿಕೆ ಹಾಗೂ ಓಎಂಆರ್ ಶೀಟುಗಳ ಬಂಡಲ್ ಗಳನ್ನು ನಿಗಧಿತ ಸಮಯಕ್ಕೆ ಸರಿಯಾಗಿ ತ್ರಿಸದಸ್ಯ ಸಮಿತಿಯ ಅಧಿಕಾರಿಗಳಿಂದ ಪಡೆದು ನಿಯಮಾನುಸಾರ ಪರೀಕ್ಷಾ ಕೇಂದ್ರಗಳಿಗೆ ಪೋಲಿಸ್ ರಕ್ಷಣೆಯಲ್ಲಿ ಬೆಳಿಗ್ಗೆ 10.00 ಗಂಟೆಗೆ ಮುನ್ನ ಹಾಗೂ ಮದ್ಯಾಹ್ನ 2.00 ಗಂಟೆಗೆ ಮುನ್ನ ತಲುಪಿಸುವುದು ಹಾಗೂ ಪರೀಕ್ಷಾ ಅವಧಿ ಮುಗಿದ ನಂತರ ಓಎಂಆರ್ ಶೀಟುಗಳ ಬಂಡಲ್ ಗಳನ್ನು ವಾಪಾಸ್ ಖಜಾನೆಗೆ ತಲುಪಿಸಬೇಕು ಎಂದರು.
ಕೇಂದ್ರಗಳ ಸುತ್ತ
ನಿಷೇಧಾಜ್ಞೆ ಜಾರಿ
ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡುವ ಬಗ್ಗೆ ಹಾಗೂ ಪರೀಕ್ಷಾ ಕೇಂದ್ರದಿಂದ 200 ಅಡಿಗಳ ಅಂತರದೊಳಗಿರುವ ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚುವ ಬಗ್ಗೆ ಕ್ರಮವಹಿಸಲಾಗಿದೆ ಎಂದು ಡಿಸಿಯವರು ತಿಳಿಸಿದರು.
ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೋಲೀಸ್ ರಕ್ಷಣೆ ನೀಡುವ ಬಗ್ಗೆ ಸಂಬಂಧಿಸಿದ ಪರೀಕಾ ಕೇಂದ್ರಗಳ ಉಪ ಮುಖ್ಯ ಅಧೀಕ್ಷಕರುಗಳು ಆಯಾ ಕೇಂದ್ರಗಳಿಗೆ ಸಂಬಂಧಿಸಿದ ಪೋಲೀಸ್ ಠಾಣೆಗಳಲ್ಲಿ ರಕ್ಷಣೆ ಕೋರುವುದು ಹಾಗೂ ಠಾಣೆಯ / ಅಧಿಕಾರಿಯ ದೂರವಾಣಿ/ಮೊಬೈಲ್ ಸಂಖ್ಯೆಯನ್ನು ಹೊಂದಿರುವುದು ಎಂದರು.
ಸುಗಮ ಪರೀಕ್ಷೆಗೆ
ಜಾಗೃತದಳ ನೇಮಕ
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ ಸಭೆಗೆ ಮಾಹಿತಿ ನೀಡಿ, ಸುಗಮ ಪರೀಕ್ಷೆ ಹಾಗೂ ಯಾವುದೇ ಅವ್ಯವಹಾರಗಳಿಗೆ ಅವಕಾಶವಿಲ್ಲದಂತೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ, ಪ್ರತಿಕೇಂದ್ರಕ್ಕೂ ಕೇಂದ್ರ ಕಚೇರಿಯ ಜಾಗೃತದಳ, ಜಿಲ್ಲಾಧಿಕಾರಿಗಳ ನೇತೃತ್ವದ ಒಂದು ಜಾಗೃತದಳ, ತಮ್ಮ ನೇತೃತ್ವದ ಒಂದು ಜಾಗೃತದಳ, ಹಾಗೂ ಪರೀಕ್ಷಾ ಕೇಂದ್ರವಾರು ದ್ವಿಸದಸ್ಯ ಜಾಗೃತದಳಗಳು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಯಾವುದೇ ರೀತಿಯ ಕೈಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವಂತಿಲ್ಲ. ಪರೀಕ್ಷೆಗೆ ಸಂಬಂಧಪಡದ ಯಾವುದೇ ವ್ಯಕ್ತಿಗಳಾಗಲಿ, ಆಡಳಿತ ಮಂಡಳಿಯವರಾಗಲಿ ಕೇಂದ್ರದ ಒಳಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ವಿದ್ಯಾರ್ಥಿಗಳು ಕ್ಯಾಲುಕುಲೇಟರ್ಸ್, ಸ್ಲೇಡ್‍ರೂಲ್ಸ್, ಲಾಗ್ ಟೇಬಲ್ಸ್, ಮಾರ್ಕರ್ಸ್ ಬಳಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು, ಕೊಠಡಿ ಮೇಲ್ಚಿಚಾರಕರು ಮೊಬೈಲ್ ತರಬಾರದು ಎಂದು ತಿಳಿಸಿದ ಅವರು, ಪರೀಕ್ಷಾ ಕೇಂದ್ರದ ಕೊಠಡಿಯೊಳಗೆ ಫೋಟೋಗ್ರಾಫರ್, ವಿಡೀಯೋಗ್ರಾಫರ್, ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಕೋಲಾರ ಜಿಲ್ಲೆ
ಕೇಂದ್ರಗಳ ವಿವರ
ಕೋಲಾರ ನಗರದ ಅಲ್‍ಅಮೀನ್ ಪಿಯು ಕಾಲೇಜಿನಲ್ಲಿ 408 ವಿದ್ಯಾರ್ಥಿಗಳು, ಗೋಕುಲ ಸ್ವತಂತ್ರ್ಯ ಪಿಯು ಕಾಲೇಜಿನಲ್ಲಿ 480, ಮಹಿಳಾ ಸಮಾಜ ಪಿಯು ಕಾಲೇಜಿನ ಕೇಂದ್ರದಲ್ಲಿ 614, ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ 552, ನೂತನ ಪದವಿ ಪೂರ್ವ
ಕಾಲೇಜು ಕೇಂದ್ರದಲ್ಲಿ 336, ಆದರ್ಶ ಪಿಯು ಕಾಲೇಜಿನಲ್ಲಿ 240 ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ.
ಸಹ್ಯಾದ್ರಿ ಪಿಯು ಕಾಲೇಜು ಕೇಂದ್ರದಲ್ಲಿ 528, ಎಸ್‍ಡಿಸಿ ಪಿಯು ಕಾಲೇಜಿನಲ್ಲಿ 336, ಎನ್.ಎಂ.ಜೆ ಪಿಯು ಕಾಲೇಜಿನಲ್ಲಿ 384, ಎಸ್‍ಎಫ್‍ಎಸ್ ಪಿಯು ಕಾಲೇಜಿನಲ್ಲಿ 528 ಮಂದಿ, ಎಕ್ಸಲೆಂಟ್ ಪಿಯು ಕಾಲೇಜು ಕೇಂದ್ರದಲ್ಲಿ 288, ಬಸವಶ್ರೀ ಪಿಯು ಕಾಲೇಜಿನಲ್ಲಿ 312, ಬಾಲಕರ ಸರ್ಕಾರಿ ಪಿಯು ಕಾಲೇಜಿನಲ್ಲಿ 552 ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ.
ಉಳಿದಂತೆ ಕೆಜಿಎಫ್‍ನಲ್ಲಿ ಎರಡು ಕ್ಷೇತ್ರಗಳಿದ್ದು, ಅಲ್ಲಿನ ಉರಿಗಾಂ ಸರ್ಕಾರಿ ಪಿಯು ಕಾಲೇಜಿನಲ್ಲಿ 547 ಹಾಗೂ ಬಾಲಕಿಯರ ಸರ್ಕಾರಿ ಪಿಯುಕಾಲೇಜಿನ ಕೇಂದ್ರದಲ್ಲಿ 240 ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಮಾರ್ಗಾಧಿಕಾರಿಗಳು ವಿವಿಧ ಕಾಲೇಜುಗಳ ಪ್ರಾಂಶುಪಾಲರಾದ ಟಿ.ಜಯರಾಂ, ಎಂ.ಬಾಲಕೃಷ್ಣ, ಪರುಶುರಾಂ ಉಲ್ಕಿ, ನರಸಿಂಹಮೂರ್ತಿ, ಕೆಜಿಎಫ್‍ನಕೇಶವ ಮೂರ್ತಿ, ಮುನಿರತ್ನಂ ಉಪಸ್ಥಿತರಿದ್ದರು.

ಸರ್ಕಾರಿ ಪ್ರೌಢಶಾಲೆಗಳಲ್ಲೂ ದಾನಿಗಳ ನೆರವಿಂದ ಹೈಟೆಕ್ ಸೌಲಭ್ಯ : ಕೀಳಿರಿಮೆ ತೊರೆದು ಮಕ್ಕಳನ್ನು ದಾಖಲಿಸಿ-ಪ್ರದೀಪ್‍ಕುಮಾರ್ ಮನವಿ

ಕೋಲಾರ:- ಖಾಸಗಿ ಶಾಲೆಗಳಿಗಿಂತ ಉತ್ತಮ ಸುಸಜ್ಜಿತ ಸೌಲಭ್ಯಗಳುಳ್ಳ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿ ಅವರ ಭವಿಷ್ಯ ಉತ್ತಮ ಪಡಿಸಿ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‍ಕುಮಾರ್ ಮನವಿ ಮಾಡಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯ ಸುತ್ತಮುತ್ತಲ ನಾಗಲಾಪುರ, ಚುಂಚುದೇನಹಳ್ಳಿ, ಚೆಲುವನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಶುಕ್ರವಾರ ದಾಖಲಾತಿ ಆಂದೋಲನದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಸರ್ಕಾರಿ ಶಾಲೆಗಳೆಂದರೆ ಪೋಷಕರಲ್ಲಿ ಇರುವ ಕೀಳಿರಿಮೆ ತೊಡೆದು ಹಾಕುವ ಅಗತ್ಯವಿದೆ ಎಂದ ಅವರು, ನೀವು ಭಾವಿಸಿರುವಂತೆ ಇಂದು ಸರ್ಕಾರಿ ಶಾಲೆಗಳಿಲ್ಲ, ಅಲ್ಲಿ ಸುಸಜ್ಜಿತ ಸೌಲಭ್ಯಗಳು ನುರಿತ ಸಂಪನ್ಮೂಲ ವಿಷಯ ಶಿಕ್ಷಕರು ಇದ್ದಾರೆ, ಎಸ್ಸೆಸ್ಸೆಲ್ಸಿ ಫಲಿತಾಂಶವೂ ನಮ್ಮಲ್ಲಿ ಶೇ.100 ಬರುತ್ತಿದೆ ಎಂದು ಮಾಹಿತಿ ನೀಡಿ, ಶಾಲೆಯಲ್ಲಿನ ಸೌಲಭ್ಯ ಗಮನಿಸಲು ಒಮ್ಮೆ ಶಾಲೆಗೆಭೇಟಿ ನೀಡಿ ಎಂದರು.

ಸರ್ಕಾರಿ ಶಾಲೆಯಲ್ಲೂ ಆಂಗ್ಲ ಮಾಧ್ಯಮ


ನಮ್ಮ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮದಲ್ಲಿ 8,9 ಮತ್ತು 10ನೇ ತರಗತಿಯ ಶಿಕ್ಷಣವಿದೆ ಎಂದ ಅವರು, ಆಂಗ್ಲ ಮಾಧ್ಯಮದಲ್ಲಿ ನಿರಂತರ 6 ವರ್ಷಗಳಿಂದಲೂ ಶೇ.100 ಫಲಿತಾಂಶ ಬರುತ್ತಿದೆ ಎಂದು ತಿಳಿಸಿದರು.
ನಮ್ಮ ಶಾಲೆಯಲ್ಲಿ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ,ಸಮಾಜವಿಜ್ಞಾನ ಪ್ರಯೋಗಾಲಯವಿದೆ, 4 ಕೊಠಡಿಗಳಲ್ಲಿ ಸುಸಜ್ಜಿತ ಸ್ಮಾರ್ಟ್ ಕ್ಲಾಸ್ ಸೌಲಭ್ಯವನ್ನು ಒದಗಿಸಲಾಗಿದೆ ಎಂದ ಅವರು, ಅತ್ಯುತ್ತಮ ರೀತಿಯಲ್ಲಿ ಕಂಪ್ಯೂಟರ್ ಶಿಕ್ಷಣ ಒದಗಿಸಲು ಅನುವಾಗುವಂತೆ ಸುಂದರ ಕಂಪ್ಯೂಟರ್ ಲ್ಯಾಬ್‍ಅನ್ನು ಸರ್ಕಾರ ಹಾಗೂ ದಾನಿಗಳ ನೆರವಿನಿಂದ ಸಜ್ಜುಗೊಳಿಸಲಾಗಿದೆ ಎಂದರು.
ಸರ್ಕಾರಿ ಸಮವಸ್ತ್ರದ ಜತೆಗೆ ನಿರಂತರ 10 ವರ್ಷಗಳಿಂದ ದಾನಿಗಳ ನೆರವಿನಿಂದ ಮಕ್ಕಳಿಗೆ ಟ್ರ್ಯಾಕ್‍ಸೂಟ್ ಒದಗಿಸಲಾಗುತ್ತಿದೆ, ನಮ್ಮ ಶಾಲೆಗೆ ಬರುವ ಎಲ್ಲಾ ಮಕ್ಕಳಿಗೂ ಸರ್ಕಾರ ನೀಡುವ ಉಚಿತ ಪಠ್ಯ ಪುಸ್ತಕಗಳ ಜತೆಗೆ ಅವರಿಗೆ ದಾನಿಗಳಿಂದ ವರ್ಷಕ್ಕೆ ಅಗತ್ಯವಾದ ಉಚಿತ ನೊಟ್‍ಪುಸ್ತಕ ಒದಗಿಸಲು ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.
ಮಕ್ಕಳಿಗೆ ಶಿಕ್ಷಣದೊಂದಿಗೆ ಯೋಗ,ಧ್ಯಾನಕ್ಕೂ ಅವಕಾಶವಿದೆ, ಕ್ರೀಡಾಸೌಲಭ್ಯವಿದೆ, ಅತ್ಯಂತ ಸುಸಜ್ಜಿತ ಗ್ರಂಥಾಲಯವನ್ನು ದಾನಿಗಳ ನೆರವಿನಿಂದ ಸಜ್ಜುಗೊಳಿಸಲಾಗುತ್ತಿದೆ ಎಂದ ಅವರು, ಪೋಷಕರು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಲಕ್ಷಾಂತರ ರೂ ಹಣ ಪೋಲು ಮಾಡದೇ ಸರ್ಕಾರಿ ಶಾಲೆಗೆ ದಾಖಲಿಸಲು ಮನವಿ ಮಾಡಿದರು.
ದಾಖಲಾತಿ ಆಂದೋಲನದಲ್ಲಿ ಶಿಕ್ಷಕರಾದ ಸುಗುಣಾ, ಫರೀದಾ,ಶ್ರೀನಿವಾಸಲು,ಡಿ.ಚಂದ್ರಶೇಖರ್ ಹಾಗೂ ಮತ್ತೊಂದು ತಂಡದಲ್ಲಿ ಸಿದ್ದೇಶ್ವರಿ,ಗೋಪಾಲಕೃಷ್ಣ, ಭವಾನಿ, ಶ್ವೇತಾ,ವೆಂಕಟರೆಡ್ಡಿ ಭಾಗವಹಿಸಿದ್ದರು.