ಕಥೊಲಿಕ ಶಿಕ್ಷಣ ಮಂಡಳಿ ಶಿಕ್ಷಕರಿಗೆ 5 ದಿನಗಳ ಕಮ್ಯುನಿಕೇಟಿವ್‍ ಇಂಗ್ಲಿಷ್ ಕೋರ್ಸ್ ಪ್ರಾರಂಭ

ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ಆಧೀನದ ಕಥೊಲಿಕ್ ಶಿಕ್ಷಣ ಮಂಡಳಿ (ಸಿಬಿಇ) ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳಲ್ಲಿ ಭೋಧಿಸುವ ಶಿಕ್ಷಕರಿಗಾಗಿ 5 ದಿನಗಳ ಕಮ್ಯುನಿಕೇಟಿವ್ ಇಂಗ್ಲಿಷ್ ಕೋರ್ಸ್‍ನ್ನು ಏಪ್ರಿಲ್ 17, 2023 ರಂದು ಮಂಗಳೂರಿನ ಪಾದುವಾ ಕಾಲೇಜಿನಲ್ಲಿ ಪ್ರಾರಂಭಿಸಲಾಯಿತು.
ಕಥೊಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂದನೀಯ ಫಾದರ್ ಆ್ಯಂಟನಿ ಸೆರಾ ಅವರು ಮಾತಾನಾಡುತ್ತಾ, “ಇಂಗ್ಲಿμï ಮಾಧ್ಯಮ ಶಿಕ್ಷಕರಲ್ಲಿ ಸಂವಹನ ಕೌಶಲ್ಯವನ್ನು ಹೆಚ್ಚಿಸುವುದು, ಮತ್ತು ವಿದ್ಯಾರ್ಥಿಗಳೊಂದಿಗೆ ಮತ್ತು ಅವರ ಪೋಷಕರೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಲು ಅನುಕೂಲವಾಗುವಂತಹ ತರಬೇತಿ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.” ಎಂದು ಹೇಳಿದರು.
“ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ, ಶಿಕ್ಷಕರು ಇಂಗ್ಲಿಷ್ ನಲ್ಲಿ ಮುಕ್ತ ಸಂವಹನವು ಮಾಡುವುದರಿಂದ ಕಷ್ಟಕರವಾದ ತರಗತಿಯ ವಾತಾವರಣವನ್ನು ಧನಾತ್ಮಕವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.” ಎಂದು ಫಾದರ್ ಸೆರಾ ಹೇಳಿದರು.
ಬೆಂದೂರು ಚರ್ಚ್‍ನ ಧರ್ಮಗುರು ಮತ್ತು ಪಾದುವ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕರು ವಂದನೀಯ ಫಾದರ್ ವಿನ್ಸೆಂಟ್ ಮೊಂತೇರೊ, ಪಾದುವ ಕಾಲೇಜಿನ ಪ್ರಾಂಶುಪಾಲ ವಂದನೀಯ ಫಾದರ್ ಅರುಣ್ ಲೋಬೊ ಮತ್ತುಪಾದುವ ಪಿಯುಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಗ್ಲಾಡಿಸ್ ಅಲೋಶಿಯಸ್ ಮತ್ತು ಸಂಪನ್ಮೂಲ ತಂಡದ ಮುಖ್ಯಸ್ಥ, ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ), ಮಂಗಳೂರು ಇದರ ಇಂಗ್ಲಿಷ್ ವಿಭಾಗದ ಡಾ.ಅನುಪ್ ಡೆನ್ಜಿಲ್ ವೇಗಸ್ ಉಪಸ್ಥಿತರಿದ್ದರು
ಮೊದಲ ಬ್ಯಾಚ್‍ಗೆ ಜಿಲ್ಲೆಯ 200ಕ್ಕೂ ಹೆಚ್ಚು ಆಂಗ್ಲ ಮಾಧ್ಯಮ ಶಿಕ್ಷಕರು ಉಪಸ್ಥಿತರಿದ್ದರು.
ಡಾ.ಅನುಪ್‍ಡೆನ್ಜಿಲ್ ವೇಗಾಸ್ ಮಾತನಾಡಿ, “ತರಗತಿಯಲ್ಲಿ ಸಂವಹನವು ಮುಖ್ಯಕೀಲಿಯಾಗಿದೆ. 50% ಜ್ಞಾನ ಮತ್ತು 50% ಸಂವಹನ ಕೌಶಲ್ಯಗಳು ಪ್ರಭಾವಶಾಲಿ ಮತ್ತು ಪರಿಣಾಮಕಾರಿ ಬೋಧನೆಯನ್ನು ಪ್ರಸ್ತುತಪಡಿಸಲು ಸಾಕಷ್ಟು ಸಹಕಾರಿಯಾಗಿವೆ. ಒಬ್ಬ ಶಿಕ್ಷಕನು ಕೇಳುವ, ಓದುವ, ಮಾತನಾಡುವ ಮತ್ತು ಬರೆಯುವ ನಾಲ್ಕು ಸಂವಹನ ವಿಧಾನಗಳಲ್ಲಿ ಪ್ರವೀಣನಾಗಿರಬೇಕು ಮತ್ತು ಶಾಲೆಯ ಪರಿಸರದಲ್ಲಿ ಈ ಪ್ರಾವೀಣ್ಯತೆಯನ್ನು ಪರಿಣಾಮಕಾರಿಯಾಗಿ ಅನ್ವಯಿಸಲು ಉತ್ಸುಕನಾಗಿರಬೇಕು.
“ಇಂದು, ಹೆಚ್ಚಿನ ಪೋಷಕರು ಪದವೀಧರರು ಅಥವಾ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ನಾವು, ಶಿಕ್ಷಕರಾಗಿ, ಆವಿದ್ಯಾವಂತ ಪೋಷಕರೊಂದಿಗೆ ಮತ್ತು ಅವರ ಮಕ್ಕಳೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸುವಲ್ಲಿ ವಿಫಲರಾಗಿದ್ದೇವೆ” ಎಂದು ಡಾ.ಅನುಪ್‍ ಹೇಳಿದರು.

“ಕಥೊಲಿಕ್ ಶಿಕ್ಷಣ ಮಂಡಳಿಯು ನೋಂದಾಯಿತ ಶಿಕ್ಷಣ ಸಂಸ್ಥೆಯಾಗಿದ್ದು, ಸತತ 90 ವರ್ಷಗಳ ಫಲಪ್ರದ ಸೇವೆಯನ್ನು ಪೂರ್ಣಗೊಳಿಸುತ್ತದೆ. ಇದು ದಕ್ಷಿಣಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು 1932 ರಲ್ಲಿ ಪ್ರಾರಂಭವಾಯಿತು. ಇತ್ತೀಚೆಗೆ, ಉಡುಪಿ ಜಿಲ್ಲೆಯ ಶಿಕ್ಷಣ ಸಂಸ್ಥೆಗಳನ್ನು ವಿಭಜಿಸಿ ಪ್ರತ್ಯೇಕವಾಗಿ ನಿರ್ವಹಿಸಲಾಗಿದೆ” ಎಂದು ಫಾದರ್ ಆ್ಯಂಟನಿ ಸೆರಾ ತಿಳಿಸಿದರು.
ಮಂಗಳೂರಿನ ಸೇಂಟ್ ಆಗ್ನೆಸ್ ಪಿಯು ಕಾಲೇಜಿನ ಇಂಗ್ಲಿಷ್ ಉಪನ್ಯಾಸಕಿ ಶ್ರೀಮತಿ ಜೋನ್ ಶೀತಲ್ ಮತ್ತು ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕಿ ಪ್ರಮೀಳಾ ಡಿಸೋಜಾ ಸಂಪನ್ಮೂಲ ತಂಡದಲ್ಲಿದ್ದರು.

ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿ ಹೊರ ಹಾಕಿದರೂ ಹೆದರುವುದಿಲ್ಲ ಮತ್ತೆ ಮತ್ತೆ ಕೇಳುತ್ತೇನೆ ಪ್ರಧಾನಿ ಮತ್ತು ಆದಾನಿ ಬೇನಾಮಿ ಕಂಪನಿಗಳಲ್ಲಿ 20ಸಾವಿರ ಕೋಟಿ ಎಲ್ಲಿಯದು:ರಾಹುಲ್

ಕೋಲಾರ:ನನ್ನನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿ ಹೊರ ಹಾಕಿದರೂ ಹೆದರುವುದಿಲ್ಲ ನಾನು ಮತ್ತೆ ಮತ್ತೆ ಕೇಳುತ್ತೇನೆ ಪ್ರಧಾನಿ ಮತ್ತು ಆದಾನಿ ಬೇನಾಮಿ ಕಂಪನಿಗಳಲ್ಲಿ 20ಸಾವಿರ ಕೋಟಿ ಎಲ್ಲಿಯದು’ ಎಂದು, ಉತ್ತರ ಸಿಗುವವರೆವಿಗೂ ಹೋರಾಟ ಮುಂದುವರೆಸುತ್ತೇನೆ ಅನರ್ಹಗೊಳಿಸಿ, ಜೈಲಿನಲ್ಲಿಡಿ ಹೆದರುವುದಿಲ್ಲ’ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆಕ್ರೋಷ ವ್ಯಕ್ತಪಡಿಸಿದರು.
ನಗರದಲ್ಲಿ ನಡೆದ ಕಾಂಗ್ರೆಸ್‍ನ ಜೈಭಾರತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 21 ನೇ ಶತಮಾನದಲ್ಲಿ ಕೇವಲ ಒಬ್ಬ ಮನುಷ್ಯನ ಕೈಯಲ್ಲಿ ಭಾರತದ ಮೂಲ ಸೌಕರ್ಯ ಇರುವಂತಾಗಿದೆ, ಸಾವಿರಾರು ಕೋಟಿ ರೂ ಮಂತ್ರಜಾಲದ ರೀತಿಯಲ್ಲಿ ಅವರ ಖಾತೆಗೆ ಬರುತ್ತಿದೆ, ರಕ್ಷಣಾ ಇಲಾಖೆಯಲ್ಲಿ ಚೈನಾದ ನಿರ್ದೇಶಕ ಇದ್ದಾರೆ, ಯಾವುದೇ ತನಿಖೆ ಆಗುತ್ತಿಲ್ಲ, ಆದಾನಿ ರಕ್ಷಣಾ ಇಲಾಖೆಯಲ್ಲಿ ಚೈನಾದ ನಿರ್ದೇಶಕರ ನೇಮಕಮಾಡಿದ್ದನ್ನು ಯಾರೂ ಪ್ರಶ್ನಿಸುತ್ತಿಲ್ಲ, ಅದಕ್ಕೆ ಸರ್ಕಾರ ಉತ್ತರವೂ ನೀಡುತ್ತಿಲ್ಲ ಎಂದರು.
ನಾನೀ ಪ್ರಶ್ನೆ ಕೇಳುತ್ತಿದ್ದಂತೆ ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಹಿಂದುಳಿದ ವರ್ಗದವರ ಕುರಿತು ಮಾತನಾಡುತ್ತಾರೆ, ನಾನು ಹಿಂದುಳಿದವರಿಗೆ ಅಪಮಾನಮಾಡಿದೆನೆಂದು ಹೇಳುತ್ತಾರೆ, ಆದರೆ ದಲಿತ,ಹಿಂದುಳಿದವರ ಕುರಿತು ಪ್ರಧಾನಿಗೆ ಕಾಳಜಿ ಇದ್ದರೆ ಕೂಡಲೇ ಯುಪಿಎ ಮಾಡಿದ್ದ ಜಾತಿವಾರು ಗಣತಿ ವರದಿ ಬಹಿರಂಗಗೊಳಿಸಿ ದೇಶದಲ್ಲಿ ದಲಿತರು, ಹಿಂದುಳಿದವರು, ಆದಿವಾಸಿಗಳು ಎಷ್ಟಿದ್ದಾರೆನ್ನುವುದು ಬಹಿರಂಗಗೊಳಿಸಿ ಎಲ್ಲರನ್ನು ದೇಶದ ಪ್ರಗತಿಯಲ್ಲಿ ಭಾಗಿಯಾಗಿಸಿ ಎಂದು ಒತ್ತಾಯಿಸಿದರು.
ದಲಿತ, ಹಿಂದುಳಿದವರ ಇಲಾಖಾ ಕಾರ್ಯದರ್ಶಿಗಳು, ಅಧಿಕಾರಿ ವರ್ಗ ಕೇವಲ ಶೇ.7 ಭಾಗದಷ್ಟಿದೆ, ದೇಶದಲ್ಲಿ ದಲಿತ, ಹಿಂದುಳಿದ, ಆದಿವಾಸಿ ಜನಸಂಖ್ಯೆ ಎಷ್ಟಾಗಿದೆ ಎಂದು ತಿಳಿಸಿ, ನೀವು ಜಾತಿ ಜನಸಂಖ್ಯೆ ಗಣತಿ ಬಹಿರಂಗಗೊಳಿಸದಿದ್ದರೆ ಹಿಂದುಳಿದವರಿಗೆ ಮಾಡಿದ ಅಪಮಾನ ಎಂದು ಪರಿಗಣಿಸಬೇಕಾಗುತ್ತದೆ, ಎಸ್‍ಸಿ ಎಸ್‍ಟಿ ಕೋಟಾಗೆ ಜನಸಂಖ್ಯೆ ಅನುಗುಣವಾಗಿ ಅವಕಾಶ ನೀಡಿ, ಮೀಸಲಾತಿಯಲ್ಲಿ ಶೇ.50 ಮಿತಿಯನ್ನು ತೆಗೆದುಬಿಡಿ ಎಂದು ಒತ್ತಾಯಿಸಿದರು.

ಅಧಿಕಾರಕ್ಕೆ ಬಂದದಿನವೇ ಪ್ರಣಾಳಿಕೆ ಜಾರಿ


ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನವೇ ನೀಡಿರುವ ಭರವಸೆ ಈಡೇರಿಸುತ್ತೇವೆ, ಜನತೆಗೆ ನಾಲ್ಕು ಭರವಸೆ ನೀಡಿದ್ದೇವೆ, ಗೃಹಜ್ಯೋತಿಯಲ್ಲಿ 200 ಯೂನಿಟ್ ವಿದ್ಯುತ್, ಗೃಹಲಕ್ಷ್ಮಿ ಪ್ರತಿ ಮನೆ ಮಹಿಳೆಗೆ 2 ಸಾವಿರ ರೂ, ಅನ್ನಭಾಗ್ಯ 10 ಕೆಜಿ ಅಕ್ಕಿ ಹಾಗೂ ಯುವಕರಿಗೆ 3 ಸಾವಿರ ರೂ ಪ್ರತಿ ತಿಂಗಳು ಪದವೀಧರರಿಗೆ ಹಾಗೂ 1500 ಡಿಪ್ಲೊಮಾ ಪದವೀಧರರಿಗೆ ನೀಡುವುದು ಮೊದಲ ಅಧಿವೇಶನದಲ್ಲಿಯೇ ಈಡೇರಿಸಬೇಕು ಎಂದು ಕರ್ನಾಟಕದ ಕಾಂಗ್ರೆಸ್ ಮುಖಂಡರಿಗೆ ಸೂಚಿಸಿದ್ದೇನೆ ಎಂದರು.
ಕಾಂಗ್ರೆಸ್ ಪಕ್ಷವು ಕರ್ನಾಟಕ ಹಾಗೂ ದೇಶದ ಜನತೆಗೆ ನೇರವಾದ ಸಂದೇಶ ಕೊಡಬೇಕಾಗಿದೆ, ಪ್ರಧಾನ ಮಂತ್ರಿಗೂ ಸಂದೇಶ ನೀಡಬೇಕಾಗಿದೆ, ನೀವು ಸಾವಿರಾರು ಕೋಟಿ ರೂಪಾಯಿಗಳನ್ನು ಆದಾನಿ ಕಂಪನಿಗಳಿಗೆ ನೀಡುತ್ತೀದ್ದೀರಿ, ನಾವು ಯುವಕರು, ಬಡವರು, ಮಹಿಳೆಯರಿಗೆ ಕಾರ್ಯಕ್ರಮ ಕೊಡುತ್ತೇವೆ, ನೀವು ಹೃದಯ ತುಂಬಿ ಆದಾನಿ ಸೇವೆ ಮಾಡುತ್ತೀರಿ ನಾವು ಕಾಂಗ್ರೆಸ್ಸಿಗರು ಮನಪೂರ್ವಕವಾಗಿ ಬಡವರು, ಮಹಿಳೆಯರಿಗೆ ಸೇವೆ ಮಾಡುತ್ತೇವೆ ಎಂದರು.
ನಾನು ಆದಾನಿಗೆ ಸಂಬಂಧಪಟ್ಟಂತೆ ಸಂಸತ್ತಿನಲ್ಲಿ ಪ್ರಶ್ನೆ ಕೇಳಿದೆ, ಪ್ರಶ್ನೆ ಕೇಳುವ ಮೊದಲೇ ಮೈಕ್ ಆಪ್ ಮಾಡಿದರು. ಆದಾನಿಗೂ ನಿಮಗೂ ಏನು ಸಂಬಂಧ ಎಂದು ಕೇಳಿದ್ದೆ, ಒಂದು ಫೋಟೋ ತೋರಿಸಿ ವಿಮಾನದಲ್ಲಿ ಪ್ರಧಾನಿ ಆದಾನಿ ಕುಳಿತಿದ್ದರು, ವಿಮಾನ ನಿಲ್ದಾಣಗಳನ್ನು ಆದಾನಿಗೆ ಮಾರಾಟ ಮಾಡಲು ಕಾನೂನು ಬದಲಾವಣೆ ಮಾಡಿದರು ಏಕೆ ಮಾಡಿದರು. ಏರ್ಪೊರ್ಟ್ ನಡೆಸಲು ಅನುಭವ ಅಗತ್ಯ, ಆದರೆ ಅದಾನಿಗೆ ಮುಂಬೈ ನಿಲ್ದಾಣ ಅವರ ಕೈವಶವಾಯಿತು. ನಿರ್ಮಾಣ ಮಾಡಿದವರನ್ನು ಐಟಿ ಇಡಿ ಹೆದರಿಸಿ ಕಸಿದುಕೊಳ್ಳಲಾಯಿತು.
ಎಸ್‍ಬಿಐ ಬ್ಯಾಂಕನ್ನು ಸಾವಿರಾರು ಕೋಟಿ ಸಾಲವನ್ನು ಆದಾನಿಗೆ ನೀಡಿತು, ಶ್ರೀಲಂಕಾದ ಬಂದರಿನ ಚೇರಮನ್ ಹೇಳುತ್ತಾರೆ, ಆದಾನಿಗೆ ಕೊಡಲು ಒತ್ತಡ ಹಾಕಿದ್ದಾರೆಂದು. ಪ್ರಧಾನಿ ಬಾಂಗ್ಲಾ ದೇಶಕ್ಕೆಹೋಗುತ್ತಾರೆ ಅಲ್ಲಿನ ಗುತ್ತಿಗೆ ಆದಾನಿಗೆ ಸಿಗುತ್ತದೆ, ಇಸ್ರೇಲ್‍ಗೆ ಹೋದರೆ ಅಲ್ಲಿನ ರಕ್ಷಣಾ ಇಲಾಖೆ ಗುತ್ತಿಗೆ ಆದಾನಿಗೆ ಸಿಗುತ್ತದೆ. ಈ ಪ್ರಶ್ನೆಯನ್ನೇ ನಾನು ಕೇಳಿದ್ದು ಎಂದರು.
ಸ್ಪೀಕರ್ ಅಧಿಕಾರ ಚಲಾಯಿಸಲು ಮುಂದಾಗಲಿಲ್ಲ, ಇದಾದ ನಂತರ ಆದಾನಿ ವಿಚಾರ ಮಾತನಾಡಬಾರದು ಎಂದು ನಿರೀಕ್ಷಿಸಿದರು, ನನ್ನ ಮಾತಿಗೆ ಭಯ ಬೀಳುತ್ತಾರೆ ಎಂದು ಟೀಕಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ


ಕರ್ನಾಟಕ ಕಾಂಗ್ರೆಸ್‍ಸರಕಾರ ರೈತರ, ಕಾರ್ಮಿಕರ, ಸಣ್ಣ ಉದ್ದಿಮೆದಾರರ, ಮಹಿಳೆಯರ ಸರಕಾರವಾಗಲಿದೆ, ಕಾಂಗ್ರೆಸ್ ಸಂಘಟಿತವಾಗಿ ಹೋರಾಟ ಮಾಡುತ್ತಿದೆ, ಪೂರ್ಣ ಬಹುಮತದ ಸರಕಾರ ಆಯ್ಕೆ ಮಾಡಿ ಎಂದು ಮನವಿ ಮಾಡಿದರು.
ಕರ್ನಾಟಕದಲ್ಲಿ ಬಿಜೆಪಿ ಏನು ಮಾಡಿದೆ, 40 ಪರ್ಸೆಂಟ್ ಕಮೀಷನ್ ಸರಕಾರ, ಕರ್ನಾಟಕದಲ್ಲಿ ಬಡವರ,ಯುವಕರ ಮಹಿಳೆಯರ ಹಣವನ್ನು ಕಳ್ಳತನ ಮಾಡಿದೆ, ಏನೇ ಮಾಡಿದರೂ 40 ಪರ್ಸೆಂಟ್ ಲಂಚ ಹೊಡೆದಿದ್ದಾರೆ, ಇದನ್ನು ನಾನು ಹೇಳುತ್ತಿಲ್ಲ, ಗುತ್ತಿಗೆದಾರರ ಸಂಘ ಪ್ರಧಾನಿಗೆ ಪತ್ರ ಬರೆದು ಹೇಳಿರುವುದು, ಪ್ರಧಾನಿ ಇದುವರೆವಿಗೂ ಈ ಪತ್ರಕ್ಕೆ ಉತ್ತರ ನೀಡಿಲ್ಲ, ಉತ್ತರ ನೀಡುತ್ತಿಲ್ಲ ಎಂದರೆ ಪ್ರಧಾನಿಗೆ 40 ಪರ್ಸೆಂಟ್ ಭ್ರಷ್ಟಾಚಾರದಲ್ಲಿ ಭಾಗಿ ಎನ್ನುವುದಾಗಿದೆ, ಹಗರಣದ ಸರಮಾಲೆ, ಶಿಕ್ಷಕರು, ಪೊಲೀಸ್ ನೇಮಕಾತಿಯಲ್ಲಿ, ಅಸಿಸ್ಟೆಂಟ್ ಪ್ರೋಫೆಸರ್, ಇಂಜಿನಿಯರ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ವ ಪ್ರಯತ್ನ ಮಾಡಿ, 40 ಪರ್ಸೆಂಟ್ ಹಣದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸರಕಾರ ಬೀಳಿಸಲು ಪ್ರಯತ್ನಿಸುತ್ತದೆ, ಆದ್ದರಿಂದ ಕಾಂಗ್ರೆಸ್‍ಗೆ 150 ಸೀಟುಗಳನ್ನು ಗೆಲ್ಲಿಸಿ ಬಿಜೆಪಿಗೆ ಭ್ರಷ್ಟಾಚಾರ ಮಾಡಲು ಅವಕಾಶ ನೀಡಬೇಡಿ ಎಂದು ಮನವಿ ಮಾಡಿದರು.
ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಉಸ್ತುವಾರಿ ಸುರ್ಜೇವಾಲಾ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖಂಡರಾದ ರಮೇಶ್‍ಕುಮಾರ್, ಕೃಷ್ಣಬೈರೇಗೌಡ, ಸಲೀಂ ಅಹಮದ್, ಶಾಸಕರಾದ ಕೆ.ವೈ.ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ, ರೂಪಕಲಾ ಶಶಿಧರ್, ಡಿಸಿಸಿ ಅಧ್ಯಕ್ಷ ಲಕ್ಷ್ಮೀನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

ಸಂತ ಮೇರಿ ಮಹಾವಿದ್ಯಾಲಯ ಶಿರ್ವದಲ್ಲಿ ‘ ವಿಶ್ವ ಭೂಮಿಯ ದಿನಾಚರಣೆ’


ಶಿರ್ವ: ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಜಂಟಿಯಾಗಿ ವಿಶ್ವ ಭೂಮಿಯ ದಿನಾಚರಣೆಯನ್ನು ಆಚರಿಸಲಾಯಿತು.
ಭೂಮಿಯ ದಿನವು ಪರಿಸರ ಸಂರಕ್ಷಣೆಗೆ ಬೆಂಬಲವನ್ನು ಪ್ರದರ್ಶಿಸಲು ,ಹಸಿರು ಜೀವನ ಮತ್ತು ಹವಾಮಾನ ಬಿಕ್ಕಟ್ಟನ್ನು ಎದುರಿಸುವುದರ ಮೇಲೆ ಕೇಂದ್ರೀಕೃತವಾಗಿವೆ. ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ ಎಂದು ಮುಖ್ಯ ಅತಿಥಿಯಾಗಿ ಕಾಲೇಜಿನ ರೋವರ್ಸ್ ಸ್ಕೌಟ್ ಲೀಡರ್ ಶ್ರೀ ಪ್ರಕಾಶ್ ರವರು ಮಾತನಾಡಿದರು.

ಪರಿಸರ ಸಂರಕ್ಷಣೆಯು ಪರಿಸರದ ಗುಣಮಟ್ಟವನ್ನು ಸುಧಾರಿಸುವುದು, ರಕ್ಷಿಸುವುದು ಮತ್ತು ನಿರ್ವಹಿಸುವುದು. ಮರುಬಳಕೆ, ಹಸಿರು ಶಕ್ತಿ ಉತ್ಪಾದನೆ, ಹಸಿರು ಸಾರಿಗೆ ಅಭಿವೃದ್ಧಿ ಮತ್ತು ಪರಿಸರ ಸ್ನೇಹಿ ಕೈಗಾರಿಕೀಕರಣದಂತಹ ಕೆಲವು ವಿಧಾನವನ್ನು ಸಮರ್ಪಕವಾಗಿ ಪ್ರತಿಯೊಬ್ಬ ಪ್ರಜೆಯೂ ಕಡ್ಡಾಯವಾಗಿ ಪರಿಸರ ರಕ್ಷಣೆಯಲ್ಲಿ ಕೈಜೋಡಿಸಬೇಕು ಬೇಕೆಂದು ಕಾಲೇಜಿನ ಪ್ರಾಂಶುಪಾಲ ಡಾ!ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಮಾತನಾಡಿ, ಇಂತಹ ಒಂದು ಒಳ್ಳೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಕಾಲೇಜಿನ ಎನ್ ಸಿ ಸಿ ಘಟಕವನ್ನು ಶ್ಲಾಘಿಸಿದರು.
ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ರವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಕೆಡೆಟ್ ಪುಣ್ಯ ಎಚ್ ಆರ್ ಕಾರ್ಯಕ್ರಮದ ಮುಖ್ಯ ಉದ್ದೇಶ ಮತ್ತು ಪ್ರಾಮುಖ್ಯತೆಯನ್ನು ತಿಳಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ವಿವಿಧ ತರಬೇತಿಯಲ್ಲಿ ಭಾಗವಹಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ ಕೆಡೆಟ್ಗಳಾದ ಪೂಜಾ, ಲಾಯ್ ವಿನ್ಸ್ಟನ್ ಫರ್ನಾಂಡಿಸ್,ಅನುಪ್ ನಾಯಕ, ಅಲಿಸ್ಟಾರ್ ಸುಜಯ್ ಡಿಸೋಜಾ ರವರನ್ನು ಅಭಿನಂದಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಲ್ಲ್ಯಾನ್ಸ್ ಕಾರ್ಪೊರಲ್ ಅನೀಶ್ ಭಟ್, ಶೆಟ್ಟಿಗಾರ್ ಹೇಮಾಶ್ರೀ ಸುದರ್ಶನ್ ಮತ್ತು ಕೆಡೆಟ್ಗಳು ಉಪಸ್ಥಿತರಿದ್ದರು. ಕೆಡೆಟ್ ವಿಶಾಲ್ ಟೆರೆನ್ಸ್ ವಾಜ್ ಸಹಕರಿಸಿ, ಜಿಯಾ ಸಿ ಪೂಜಾರಿ ಸ್ವಾಗತಿಸಿದರು. ಕೆಡೆಟ್ ಸೋನಾಲಿ ಕುಲಾಲ್ ಕಾರ್ಯಕ್ರಮ ನಿರೂಪಿಸಿ,ಮನೀಶ್ ಕರ್ಕೇರ ಶಿವಾನಂದ ವಂದಿಸಿದರು.

ಕುಂದಾಪುರ ಭಂಡಾರ್ಕಾರ್ಸ್:ಮತದಾರರ ಅರಿವು ಕಾರ್ಯಕ್ರಮ ನಡೆಯಿತು

ಕುಂದಾಪುರ, 12: ಭಂಡಾರ್ ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ, ಇಲ್ಲಿನ ಐಕ್ಯೂಎಸಿ, ಚುನಾವಣಾ ಸಾಕ್ಷರತ ಕ್ಲಬ್, ಯೂತ್ ರೆಡ್ ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ,ಎನ್. ಸಿ. ಸಿ., ಮತ್ತು ಜಿಲ್ಲಾ ಸ್ವಿಪ್ ಸಮಿತಿಯ ಅವರ ಸಹಯೋಗದಲ್ಲಿ ಮತದಾರರ ಅರಿವು ಕಾರ್ಯಕ್ರಮ ನಡೆಯಿತು.
ಡಾ.ಸದಾನಂದ ಬೈಂದೂರು, ಎಸ್ ವಿಈಈಪಿ ತರಬೇತುದಾರರು, ಶಿಕ್ಷಕರು ಸರಕಾರಿ ಶಾಲೆ ಕುಂದಾಪುರ ಮತ್ತು ರಾಘವೇಂದ್ರ ಕಿಣಿ, ಎಲೆಕ್ಷನ್ ಸೆಕ್ಟರ್ ಆಫೀಸರ್, ಉಪನ್ಯಾಸಕರು ಸರಕಾರಿ ಪದವಿ ಪೂರ್ವ ಕಾಲೇಜು, ಬಿದ್ಕಲ್ ಕಟ್ಟೆ ಇವರು ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಮತದಾನ ಮತ್ತು ಮತದಾರರ ಕುರಿತು ಅರಿವು ಮೂಡಿಸಿದರು.
ಡಾ. ಎನ್.ಪಿ ನಾರಾಯಣ್ ಶೆಟ್ಟಿ ಪದವಿ ಪ್ರಾಂಶುಪಾಲರು ಭಂಡಾರಕಾರ್ಸ್ ಕಾಲೇಜು ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶಶಿಕಾಂತ್ ಹಾತ್ವಾರ್ ಉಪನ್ಯಾಸಕರು ಭೌತಶಾಸ್ತ್ರ ವಿಭಾಗ ಮತ್ತು ಅರುಣ್ ಎ.ಎಸ್, ಎನ್ಎಸ್ಎಸ್ ಯೋಜನಾಧಿಕಾರಿ, ಉಪಸ್ಥಿತರಿದ್ದರು.
ಡಾ.ಶುಭಕರ ಆಚಾರಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸ್ವಾಗತಸಿ,ಎನ್ ಎಸ್ ಎಸ್ ಯೋಜನಾಧಿಕಾರಿ ರಾಮಚಂದ್ರ ಆಚಾರ್ ನಿರೂಪಿಸಿ, ಮತ್ತು ರೆಡ್ ಕ್ರಾಸ್ ಯೋಜನಾಧಿಕಾರಿ ಸತ್ಯನಾರಾಯಣ ವಂದಿಸಿದರು
.

Infant Jesus shrine; Mangalore, celebrated feast of Divine Mercy / ಬಿಕರ್ನಕಟ್ಟೆ ಬಾಲ ಯೇಸು ದೇವಾಲಯದಲ್ಲಿ ದಿವ್ಯ ಕರುಣೆಯ ಹಬ್ಬವನ್ನು ಆಚರಿಸಲಾಯಿತು


ಮಂಗಳೂರು: ಬಿಕರ್ನಕಟ್ಟೆ ಬಾಲ ಯೇಸು ದೇವಾಲಯದಲ್ಲಿ ಏಪ್ರಿಲ್ 16 ರಂದು ದೈವಿಕ ಕರುಣೆಯ ಹಬ್ಬವನ್ನು ಆಚರಿಸಲಾಯಿತು. ಫಾ. ಅಲ್ವಿನ್ ಸಿಕ್ವೇರಾ, ಸಾಮೂಹಿಕ ಮುಖ್ಯ ಆಚರಣೆಯ ಪುರೋಹಿತರಾಗಿದ್ದರು. ಸ್ವಾಮಿ ಯೇಸು ಕೃಪೆಯ ಬಾವಿಯಿಂದ ಕುಡಿಯಲು ಅವರು ಕರೆ ನೀಡಿದರು. ಡಿವೈನ್ ಮರ್ಸಿ ಭಾನುವಾರ ವಿಶೇಷ ದಿನವಾಗಿದೆ, ಸ್ವಾಮಿ ಯೇಸುವಿನ ಆಶೀರ್ವಾದವನ್ನು ಪಡೆಯಲಾಗುತ್ತದೆ. ಫಾ. ಲ್ಯಾನ್ಸಿ ಲೂಯಿಸ್ ಮತ್ತು ಫಾ.. ಜೋಸೆಫ್ ಡಿಸೋಜ ಅವರು ಸಾಮೂಹಿಕವಾಗಿ ನೆರವೇರಿಸಿದರು. ದೈವಿಕ ಕರುಣೆಯ ಚಿತ್ರಗಳನ್ನು ಕೊಡುಗೆಯಾಗಿ ನೀಡಿದ ಶ್ರೀ ಆಲ್ಫ್ರೆಡ್ ರೆಬೆಲ್ಲೊ, ಡಿವೈನ್ ಮರ್ಸಿ ಶಾರ್ಜಾ ಮತ್ತು ಅವರ ಗುಂಪಿಗೆ ನಾವು ಧನ್ಯವಾದಗಳನ್ನು ಅರ್ಪಿಸಿಲಾಯಿತು. ಅಪಾರ ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ಸಾಮೂಹಿಕವಾಗಿ ಈ ಹಬ್ಬದಲ್ಲಿ ಪಾಲ್ಗೊಂಡಿದ್ದರು.

Infant Jesus shrine; Mangalore, celebrated feast of Divine Mercy on 16th of April. Fr. Alwin Secquiera, was the main celebrant of the mass. He called upon, to drink from the well of grace of the Lord Jesus. Divine Mercy Sunday is special day, where Lord Jesus’s blessings are received. Fr. lancy Luis and Fr. Joseph dsouza concelebrated the mass. We thanked Mr. Alfred Rebello, Divine Mercy Sharjah and their group for donating pictures of Divine mercy. Huge crowd of Christians attended the mass.

ಪಿಯುಸ್ ನಗರ ಚರ್ಚಿನ ಧರ್ಮಗುರು ಆಲ್ಬರ್ಟ್ ಕ್ರಾಸ್ತಾರವರ  ಗುರುದೀಕ್ಷೆಯ 26 ನೇ ವರ್ಷದ ಸಂಭ್ರಮ


ಕುಂದಾಪುರ, ಎ.18: ಪಿಯುಸ್ ನಗರ ಚರ್ಚಿನ ಧರ್ಮಗುರು ಆಲ್ಬರ್ಟ್ ಕ್ರಾಸ್ತಾರ ಗುರುದೀಕ್ಷೆಯ 26 ನೇ ವರ್ಷದ ಸಂಭ್ರಮವನ್ನು ಎ.17 ರಂದು ಪಿಯುಸ್ ನಗರ ಧರ್ಮಕೇಂದ್ರದವರು ಆಚರಿಸಿದರು.
ವಂ|ಆಲ್ಬರ್ಟ್ ಕ್ರಾಸ್ತಾ ಅವರು, ವಂ|ವಾಲ್ಟರ್ ಡಿಮೆಲ್ಲೊ ಇವರ ಸಹಭಾಗಿತ್ವದೊಂದಿಗೆ ಕ್ರತಜ್ಞತಾ ಪೂರ್ವಕ ಬಲಿದಾನವನ್ನು ಅರ್ಪಿಸಿದರು. ಧರ್ಮಕೇಂದ್ರದ ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಭಾಗಿಯಾಗಿ ಧರ್ಮಗುರುಗಳ ಒಳಿತಿಗಾಗಿ ಪ್ರಾರ್ಥಿಸಿ ಶುಭ ಹಾರೈಸಿದರು.
ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಧರ್ಮಗುರುಗಳು ಕೇಕ್ ಕತ್ತರಿಸಿ, ತಮ್ಮ ಸಂಭ್ರಮ ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಂಡರು. ಪಾಲನ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಜೆಮ್ಸ್ ಡಿಮೆಲ್ಲೊ ಎಲ್ಲರ ಪರವಾಗಿ ಶುಭ ಕೋರಿದರು ಹೂ ಗುಚ್ಚ ನೀಡಿ ಗೌರವಿಸಿದರು. ಚರ್ಚಿನ ಗಾಯನ ಮಂಡಳಿ ಸದಸ್ಯರು ಶುಭಾಶಯ ಗೀತೆಯನ್ನು ಹಾಡಿದರು.
ಧರ್ಮಗುರು ಆಲ್ಬರ್ಟ್ ಕ್ರಾಸ್ತಾ ಮಾತನಾಡಿ ತಮ್ಮ ಸಂತೋಷವನ್ನು ಮನದಾಳದ ಮಾತುಗಳಿಂದ ವ್ಯಕ್ತಪಡಿಸುತ್ತಾ, ‘ನನಗೊಂದು ಉತ್ತಮ ಧರ್ಮಕೇಂದ್ರ ಲಭಿಸಿದೆ, ಇಲ್ಲಿಯ ಜನರು ಪ್ರೀತಿ ವಿಶ್ವಾಸದಿಂದ ಕೂಡಿ, ನನಗೆ ಅತ್ಯಂತ ಆತ್ಮೀತೆಯಿಂದ ಸಹಕರಿಸುತ್ತಾರೆ. ಇಂದು ನನ್ನ ಗುರುದೀಕ್ಷೆಯ 26 ನೇ ವಾರ್ಷಿಕ ಶುಭ ದಿನವನ್ನು ಆಚರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದಕ್ಕಾಗಿ, ನನ್ನ ಹ್ರದಯ ಸಂತೋಷದಿಂದ ತುಂಬಿ ಬಂದಿದೆ. ನಿಮಗೆಲ್ಲರಿಗೂ ನನ್ನ ಹ್ರದಯಂತರಾಳದ ಕ್ರತ್ಞತೆಗಳು. ನನ್ನ ಮುಂದಿನ ಈ ಸೇವಾವಧಿಯಲ್ಲಿ ವಿಶ್ವಾಸದಿಂದ ಸೇವೆಯನ್ನು ಅರ್ಪಿಸಲು, ದೇವರು ನನಗೆ ಅನುಗ್ರಹಿಸುವಂತೆ, ನನಗಾಗಿ ಪ್ರಾರ್ಥಿಸಿರಿ’ ಎಂದು ಭಿನ್ನವಿಸಿಕೊಂಡರು.
ಈ ಸಂಭ್ರಮದಲ್ಲಿ ಸೈಂಟ್ ಆ್ಯನ್ಸ್ ಕಾನ್ವೆಂಟಿನ ಧರ್ಮಭಗಿನಿಯರು ಪಾಲ್ಗೊಂಡಿದ್ದು, ಭಕ್ತಾಧಿಗಳು ಹೂ ಗುಚ್ಚ ನೀಡಿ ಧರ್ಮಗುರುಗಳಿಗೆ ಶುಭಾಶಯಗಳನ್ನು ಅರ್ಪಿಸಿದರು. ಕಾರ್ಯದರ್ಶಿ ಶ್ರೀಮತಿ ರೇಶ್ಮಾ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು. 20 ಆಯೋಗಗಳ ಸಂಚಾಲಕಿ ಶ್ರೀಮತಿ ಲೀನಾ ತಾವ್ರೊ ಧನ್ಯವಾದಗಳನ್ನು ಅರ್ಪಿಸಿದರು.

ಗೆಳೆಯರ ಬಳಗ ಹಂಗ್ಳೂರು ಅಧ್ಯಕ್ಷ ವಿ. ಬಾಬು ಶೆಟ್ಟಿ ನಿಧನ


ತಮ್ಮ ಸಮಾಜ ಸೇವೆ, ಸಾಮಾಜಿಕ ಚಟುವಟಿಕೆಗಳಿಂದ ಖ್ಯಾತರಾದ “ಬಾಬಣ್ಣ” ಎಂದೇ ಕರೆಯಲ್ಪಡುತ್ತಿದ್ದ ಗೆಳೆಯರ ಬಳಗ ಹಂಗ್ಳೂರು ಸಂಸ್ಥೆಯ ಅಧ್ಯಕ್ಷ ವಿ. ಬಾಬು ಶೆಟ್ಟಿ (81) ಇವರು ಕೋಟೇಶ್ವರ ಅಂಕದಕಟ್ಟೆಯ ಸ್ವಗೃಹದಲ್ಲಿ ಸೋಮವಾರ ಎ. 17ರಂದು ನಿಧನರಾದರು.
ಗಳೆಯರ ಬಳಗ ಹಂಗ್ಳೂರು ಸಂಘ ಸ್ಥಾಪನೆಯಾದ 1965 ರಿಂದ ಸಂಘದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದ ಇವರು 58 ವರ್ಷಗಳಿಂದ ಸತತವಾಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಹಂಗ್ಳೂರು ವಿನಾಯಕ ಟಾಕೀಸ್ ಬಳಿ, ಸಂಘದ ಸ್ವಂತ ಕಟ್ಟಡದ ನಿರ್ಮಾಣಗೊಂಡ ನಂತರ ಶಿಕ್ಷಣ, ಸಂಗೀತ, ನಾಟಕ, ಸಾಹಿತ್ಯ ಎಲ್ಲಾ ಕ್ಷೇತ್ರಗಳಲ್ಲೂ ಚಟುವಟಿಕೆ ನಡೆಸುವ ಕೇಂದ್ರವನ್ನಾಗಿ ಗೆಳೆಯರ ಬಳಗವನ್ನು ರೂಪಿಸಿದವರು ಬಾಬು ಶೆಟ್ಟಿಯವರು.
ಸಂಗೀತ ಭಾರತಿ ಸಂಸ್ಥೆಗೆ 20 ವರ್ಷಗಳ ಕಾಲ ಸಂಗೀತ ಶಾಲೆ ನಡೆಸಲು ಅವಕಾಶ ನೀಡಿದ್ದರು. ಮಕ್ಕಳಿಗಾಗಿ ಬಾಲವಾಡಿ ನಡೆಸುತ್ತಿದ್ದರು. ಶಿಶು ಮಂದಿರ ಆರಂಭಿಸಿದರು. ಸಾಹಿತ್ಯಾಸಕ್ತರಿಗಾಗಿ ಗ್ರಂಥಾಲಯ ಮಾಡಿದ್ದರು. ಇವರ ನೇತೃತ್ವದಲ್ಲಿ ರಂಗ ಭೂಮಿ ಚಟುವಟಿಕೆಗೆ ಬಹಳ ಪ್ರೋತ್ಸಾಹ ದೊರೆತು, ಪ್ರತಿಭಾವಂತರು ಅಭಿನಯಿಸಿದ ನಾಟಕ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿತ್ತು.
ಗೆಳೆಯರ ಬಳಗದಲ್ಲಿ ಕೋಟ ಶಿವರಾಮ ಕಾರಂತರೂ ಸೇರಿ ಹಿರಿಯ ಸಾಹಿತಿಗಳು, ಸಂಗೀತಗಾರರು, ಕಲಾವಿದರು, ಸಾಧಕರನ್ನು ಕರೆದು ಗೌರವಿಸಿದರು. ಬಾಬು ಶೆಟ್ಟಿಯವರ ಸೇವೆಗೆ ಹಲವಾರು ಸಂಘಟನೆಗಳು ಸನ್ಮಾನಿಸಿ ಗೌರವಿಸಿವೆ. ರಾಜ್ಯೋತ್ಸವದ ದಿನ ಜಿಲ್ಲಾ ಪ್ರಶಸ್ತಿಯನ್ನು ಇವರಿಗೆ ಪ್ರದಾನ ಮಾಡಲಾಗಿದೆ.
ಬಾಬು ಶೆಟ್ಟಿಯವರು ಅವಿವಾಹಿತರಾಗಿದ್ದರೂ ಹಂಗ್ಳೂರು, ಕುಂದಾಪುರ, ಕೋಟೇಶ್ವರ ಪರಿಸರದ ನೂರಾರು ಮನೆಯವರಿಗೆ ಆತ್ಮೀಯರಾಗಿದ್ದು, ಎಲ್ಲಾ ಸಮಾರಂಭಗಳಲ್ಲೂ ಆಹ್ವಾನಿಸಲ್ಪಡುತ್ತಿದ್ದರು. ಇವರ ಅಗಲಿಕೆ ಸಾಮಾಜಿಕ, ಸಾಂಸ್ಕøತಿಕ ಲೋಕದ ಸಾಧಕರನ್ನು ಕಳೆದುಕೊಂಡಂತಾಗಿದೆ.
ಇವರು ಬರೆದು ಪ್ರಕಟಿಸಿದ ತಮ್ಮ ಆತ್ಮ ವೃತ್ತಾಂತ “ನಾನಾರೆಂಬುದು ನಾನಲ್ಲ” ಬಹಳ ಜನಪ್ರಿಯವಾಯಿತು. ಇವರ ನಿಧನಕ್ಕೆ ಹಲವು ಗಣ್ಯರು, ಸಂಘ-ಸಂಸ್ಥೆಗಳು ಸಂತಾಪ ವ್ಯಕ್ತಪಡಿಸಿವೆ.