ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ ಸಿಗದ ಹೊರತು ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವನ್ನು ಬುಡಮೇಲು ಮಾಡುವ ಶಕ್ತಿಗಳು ಇವೆ. ಆ ಶಕ್ತಿಗಳು ಸಂವಿಧಾನದ ಮೂಲ ಆಶಯಗಳಿಗೆ ತಿಲಾಂಜಲಿ ನೀಡಲು ಹವಣಿಸುತ್ತಿವೆ. ಹಾಗೇನಾದರೂ ಮಾಡಿದರೆ ಅದು ದೇಶ ದ್ರೋಹವಾಗುತ್ತದೆ ಎಂದು ಹೇಳಿದರು. ದೇಶದ ಅಭಿವೃದ್ಧಿಯಲ್ಲಿ ಸೈನಿಕರು, ಪೊಲೀಸರು, ರೈತರು ಹಾಗೂ ಆರೋಗ್ಯ ಸಿಬ್ಬಂದಿಯ ಪಾತ್ರ ಹಿರಿದು. ದೇಶದ ರಕ್ಷಣೆ ಹಾಗೂ ಪ್ರಗತಿಗಾಗಿ ಶ್ರಮಿಸುತ್ತಿರುವ ಸಮುದಾಯಗಳನ್ನು ಅತ್ಯಂತ ಗೌರವದಿಂದ ಕಾಣಬೇಕು. ಅವರು ತಮ್ಮ ಜೀವದ ಹಂಗು ತೊರೆದು ದೇಶವಾಸಿಗಳ ಪ್ರಾಣ ರಕ್ಷಣೆ ಮಾಡುತ್ತಿದ್ದಾರೆ ಎಂದು ಹೇಳಿದರು. ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಮಾತನಾಡಿ, ನಮ್ಮ ಹಿರಿಯರ ತ್ಯಾಗ, ಬಲಿದಾನದಿಂದ ಗಳಿಸಿರುವ ಸ್ಯಾತಂತ್ರ್ಯವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಚೇತನಗಳನ್ನು ಸ್ಮರಿಸಬೇಕು. ಅವರ ತ್ಯಾಗದ ಫಲವಾದ ಸ್ವಾತಂತ್ರ್ಯ ನಮ್ಮೆಲ್ಲರ ಉಸಿರಾಗಬೇಕು ಎಂದು ಹೇಳಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶ್ರೀನಿವಾಸಮೂರ್ತಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಧನಂಜಯ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಮೇಗೌಡ, ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಎನ್.ಎಂ.ಶ್ರೀನಿವಾಸಯ್ಯ, ಅಧ್ಯಕ್ಷ ಎಂ.ನಾಗರಾಜ್ ಇದ್ದರು.