ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಸಹಕಾರಿ ಸಂಸ್ಥೆಗಳ ಮೂಲಕ ಗೃಹೋಪಯೋಗಿ ವಸ್ತುಗಳ ಮಾರಾಟ
ಬಡ್ಡಿರಹಿತ ಕಂತಿನಲ್ಲಿ ತಲುಪಿಸುವ ಪ್ರಯತ್ನ-ಬ್ಯಾಲಹಳ್ಳಿ ಗೋವಿಂದಗೌಡ
ಕೋಲಾರ:- ಸಹಕಾರ ಸಂಸ್ಥೆಗಳ ಮೂಲಕ ಗೃಹೋಪಯೋಗಿ ವಸ್ತುಗಳನ್ನು ಬಡ್ಡಿರಹಿತ ಕಂತಿನಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಪ್ರಯತ್ನವನ್ನು ಡಿಸಿಸಿ ಬ್ಯಾಂಕ್‍ವತಿಯಿಂದ ಸಹಕಾರ ಸಂಘಗಳ ಮೂಲಕ ಕಾರ್ಯಗತಗೊಳಿಸಲು ಮೂಂದಾಗಿರುವುದಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ತಾಲ್ಲೂಕಿನ ಅಣ್ಣಿಹಳ್ಳಿ ರೇಷ್ಮೇ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ಮತ್ತು ಗೀಮ್ ವೇ ಗ್ರಾಮೀಣಾ ಇಸ್ಪ್ರಾ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸೂಸೈಟಿಗಳ ಅಧ್ಯಕ್ಷರ ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ದಿವಂಗತ ಪ್ರಧಾನಿ ನೆಹರು ಅವರ ಹುಟ್ಟು ಹಬ್ಬದ ಕೊಡುಗೆಯಾಗಿ 66ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಡಿಸಿಸಿ ಬ್ಯಾಂಕ್ ನೇತ್ರತ್ವದಲ್ಲಿ ಶೂನ್ಯ ಬಡ್ಡಿ ದರ ಮತ್ತು ರಿಯಾಯಿತಿ ಬೆಲೆಯಲ್ಲಿ ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ಡಿಸಿಸಿ ಬ್ಯಾಂಕ್ ವ್ಯಾಪ್ತಿಗೆ ಸೇರಿದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡು ಜಿಲ್ಲೆಯ ಸುಮಾರು 200 ಸಂಘಗಳಲ್ಲಿ ಹಂತ ಹಂತವಾಗಿ ಆರಂಭಿಸುವುದಾಗಿ ತಿಳಿಸಿದರು.
ಗ್ರಾಮೀಣ ಭಾಗದ ಮಹಿಳೆಯರು ಅನೇಕ ಗೃಹೋಪಯೋಗಿ ವಸ್ತುಗಳಿಂದ ವಂಚಿತರಾಗಿ ಒಂದೇ ಬಾರಿಗೆ ದುಬಾರಿ ವಸ್ತುಗಳನ್ನು ಖರೀದಿಸಲಾಗದೇ ಅರ್ಥಿಕ ಸಂಕಷ್ಟಕ್ಕೆ ಒಳಗಾಗುವುದನ್ನು ಕಂಡಿದ್ದು, ಅವರ ಮನೆ ಬಾಗಿಲಿಗೆ ಬಡ್ಡಿರಹಿತ ಮತ್ತು ಕಂಪನಿಗಳ ದರಕ್ಕೆ ಸೌಲಭ್ಯವನ್ನು ಕಲ್ಪಿಸುವ ಚಿಂತನೆ ಇದಾಗಿದೆ ಎಂದರು.
ಗುಣಮಟ್ಟದ ಐಎಸ್‍ಐ. ಅನುಮೋದಿಸಲ್ಪಟ್ಟ ಎಲ್,ಜಿ, ಸೋನಿ, ವೊರ್ಲ್‍ಪುಲ್, ಸ್ಯಾಮ್‍ಸ್ಯಾಂಗ್, ಉಷಾ, ಹೈರ್, ಪ್ರಿಸ್ಟೇಜ್ ವಿವಿಧ ಕಂಪನಿಗಳ ಉತ್ಪಾದನಾ ವಸ್ತುಗಳಾದ ಟಿ.ವಿ. ಫ್ರಿಡ್ಜ್, ವಾಷಿಂಗ್ ಮಿಷನ್, ರುಬ್ಬುವ ಯಂತ್ರ, ಮಿಕ್ಸಿ, ಹೊಲಿಗೆ ಯಂತ್ರ, ವಾಟರ್ ಫಿಲ್ಟರ್, ಕುಕ್ಕರ್, ಸ್ಟೊವ್, ಸೋಲಾರ್ ದೀಪಗಳು ಸೇರಿದಂತೆ ಅನೇಕ ವಸ್ತುಗಳನ್ನು ಮಾರಾಟ ಮಾಡಲಾಗುವುದು ಎಂದು ತಿಳಿಸಿದರು.
ಗೃಹಪಯೋಗಿ ವಸ್ತುಗಳಿಗೆ ಗ್ಯಾರೆಂಟಿ ಮತ್ತು ವಾರೆಂಟಿಗಳು ಇರುತ್ತದೆ. ಖರೀದಿಸುವ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಿ ಅಳವಡಿಸಿ ಕೊಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.
ಶೀಘ್ರದಲ್ಲೇ ಕೋಲಾರದ ಕಾರ್ಯನಿರತ ಪತ್ರಕರ್ತರ ವಿವಿದೋಧ್ದೇಶ ಸಹಕಾರ ಸಂಘದಲ್ಲಿ ಮಾರಾಟದ ಪ್ರದರ್ಶನ ಮೇಳವನ್ನು ಆಯೋಜಿಸಲಾಗುವುದು ಎಂದರು.
ವಸ್ತುಗಳನ್ನು ಖರೀದಿಸಲು ಸಹಕಾರ ಸಂಘದ ಸದಸ್ಯರು ಆಗಿರಬೇಕು. ಸಾಲ ಕಟ್ಟದೇ ಸುಸ್ತಿಯಾಗಿರಬಾರದು, ಆಧಾರ್ ಕಾರ್ಡ್, ರೇಷನ್ ಕಾರ್ಡ್ ದಾಖಲಾತಿ ಪಡೆದು ಉಪಕರಣ ನೀಡುವುದರಿಂದ ಸಹಕಾರಿ ಸಂಘಗಳ ಸದಸ್ಯತ್ವವೂಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟರು.
ನಾವು ಯಾವೂದೇ ಲಾಭದ ಉದ್ದೇಶದಿಂದ ಈ ಯೋಜನೆಯನ್ನು ಮಾಡುತ್ತಿಲ್ಲ. ಬಡವರ ಮತ್ತು ಮಾಧ್ಯಮವರ್ಗದವರ ಅನುಕೂಲಕ್ಕಾಗಿ ಈ ಯೋಜನೆಗೆ ಮುಂದಾಗಿದ್ದೇವೆ. ಕಂಪನಿಯ ಉತ್ಪಾದನ ವೆಚ್ಚದ ದರದಲ್ಲಿ ವಸ್ತುಗಳನ್ನು ನೇರವಾಗಿ ನೀಡುವುದರಿಂದ ಗ್ರಾಹಕರಿಗೆ ಹೆಚ್ಚು ಲಾಭವಾಗಲಿದೆ ಮತ್ತು ಖರೀಧಿ ಹಣವನ್ನು 6 ಕಂತುಗಳಲ್ಲಿ ಗರಿಷ್ಟ 2 ಸಾವಿರ ರೂ ಮೊದಲ ಕಂತು ಪಾವತಿಸಿ ಯಾವೂದೇ ವಸ್ತುಗಳನ್ನು ಪಡೆಯಬಹುದಾಗಿದೆ ಎಂದರು.
ವಿವಿಧ ಕಂಪನಿಯ ಮಾರಾಟದ ಸಂಪನ್ಮೂಲ ವ್ಯಕ್ತಿಗಳಾದ ಸುರೇಶ್ ನಾಯಕ್, ರಾಮಮೋಹನ್ ಮುಂತಾದವರು ತಮ್ಮ ಕಂಪನಿಯ ಮಾರಾಟದ ಯೋಜನೆಗಳ ಕುರಿತು ಮಾಹಿತಿ ನೀಡಿ, ಮಾರುಕಟ್ಟೆಯಲ್ಲಿ ಆನ್ ಲೈನ್ ದರದಲ್ಲಿ ನಿಮಗೆ ಕಂತುಗಳನ್ನು ಶೂನ್ಯ ಬಡ್ಡಿ ದರದಲ್ಲಿ ನೀಡುವುದಿಲ್ಲ. ಅಲ್ಲದೆ ಅಂಚೆ,ಕೊರಿಯರ್ ವೆಚ್ಚ,ವಿಮೆ, ಇತ್ಯಾದಿ ರೂಪದಲ್ಲಿ ಹೆಚ್ಚಿನ ಹಣವನ್ನು ಗ್ರಾಹಕರಿಂದ ವಸೂಲಿ ಮಾಡುತ್ತಾರೆಂದು ವಿವರಿಸಿಮ ಸಹಕಾರಿ ಸಂಘಗಳಲ್ಲಿ ಇದ್ಯಾವುದರ ಗೊಡವೆ ಇಲ್ಲ ಎಂದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ನಿರ್ದೇಶಕರಾದ ನಾಗನಾಳ ಸೋಮಣ್ಣ, ದಯಾನಂದ್, ಅನಿಲ್ ಕುಮಾರ್, ಹನುಮಂತರೆಡ್ಡಿ, ನಾಗಿರೆಡ್ಡಿ, ಮೋಹನ್ ರೆಡ್ಡಿ, ಗೋವಿಂದರಾಜು, ಚನ್ನರಾಯಪ್ಪ, ಬ್ಯಾಂಕಿನ ವ್ಯವಸ್ಥಾಪಕ ನಿದೇರ್ಶಕ ರವಿ ಮತ್ತಿತರರಿದ್ದರು.
ಚಿತ್ರಶೀರ್ಷಿಕೆ:(ಫೋಟೊ-14ಕೋಲಾರ2):ಕೋಲಾರ ತಾಲ್ಲೂಕಿನ ಅಣ್ಣಿಹಳ್ಳಿ ರೇಷ್ಮೇ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ಮತ್ತು ಗೀಮ್ ವೇ ಗ್ರಾಮೀಣಾ ಇಸ್ಪ್ರಾ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಗೃಹೋಪಯೋಗಿ ಉಪಕರಣಗಳ ಬಡ್ಡಿರಹಿತ ಕಂತುಗಳ ಮಾರಾಟಕ್ಕೆ ಬಂದಿರುವ ಉಪಕರಣಗಳನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷರು,ನಿರ್ದೇಶಕರು ವೀಕ್ಷಿಸಿದರು.