ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ: ಕೊರೊನಾ ಲಾಕ್ಡೌನ್ ಸಮಯದಲ್ಲಿ ಸರ್ಕಾರ ಘೋಷಣೆ ಮಾಡಿದ್ದ ಹೂ ಹಾಗೂ ಮತ್ತಿತರರ ವಾಣಿಜ್ಯ ಬೆಳೆಗಳ ಪರಿಹಾರ ಹಣವನ್ನು ನೀಡುವಲ್ಲಿ ವಿಫಲವಾಗಿರುವ ಸರ್ಕಾರದ ವಿರುದ್ಧ ತೋಟಗಾರಿಕೆ ಇಲಾಖೆ ಮುಂದೆ ಬುಡ್ಡಿದೀಪಗಳೊಂದಿಗೆ ಅ.16ರ ಶುಕ್ರವಾರದಂದು ಅಹೋರಾತ್ರಿ ಹೋರಾಟ ನಡೆಸಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯ ನೇತೃತ್ವವಹಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ, ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ 20 ಲಕ್ಷಕೋಟಿ ವಿವಿಧ ಇಲಾಖೆಗಳಿಗೆ ಬಿಡುಗಡೆ ಮಾಡಿ ತಿಂಗಳಾನುಗಟ್ಟಲೇ ಕಳೆದರೂ ಇದುವರೆಗೂ ರಾಜ್ಯದ ಪಾಲು ನಯಾಪೈಸೆಯೂ ಬಂದಿಲ್ಲ. ರೈತಪರ ಸರ್ಕಾರ ಎಂದು ಕೊರೊನಾ ಸಂಕಷ್ಟದಲ್ಲಿ ಬೆಳೆ ಮಾಡಿದ್ದ ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆದಿದ್ದ ಹೂ, ಟೊಮೆಟೊ, ಕ್ಯಾಪ್ಸಿಕಂ ಸೇರಿದಂತೆ ವಾಣಿಜ್ಯ ಬೆಳೆಗಳನ್ನು ತೋಟಗಳಲ್ಲೇ ನಾಶಪಡಿಸಲಾಗಿತ್ತು.
ಬೆಳೆಗಳು ಉತ್ತಮವಾಗಿದ್ದರೂ ರೈತರು ಕೋಟ್ಯಂತರರೂಪಾಯಿ ನಷ್ಟವನ್ನು ಅನುಭವಿಸಿದ್ದ ಹಿನ್ನೆಲೆಯಲ್ಲಿ ಸರ್ಕಾರವು ಹೂ ಬೆಳೆ ಪ್ರತಿ ಹೆಕ್ಟೇರ್ಗೆ 25 ಸಾವಿರ, ಟೊಮೆಟೊ, ಕ್ಯಾಪ್ಸಿಕಂಗೆ 18 ಸಾವಿರ ಪರಿಹಾರ ಘೋಷಣೆ ಮಾಡಿ ತಿಂಗಳುಗಳೇ ಕಳೆದರೂ ರೈತರಿಗೆ ಪರಿಹಾರದ ಹಣ ಮರೀಚಿಕೆಯಾಗಿ ಪತ್ರಿಕಾ ಮಾದ್ಯಮಕ್ಕೆ ಸರ್ಕಾರ ಘೋಷಣೆ ಸೀಮಿತವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ತೋಟಗಾರಿಕೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕಷ್ಟಪಟ್ಟು ಬೆಳೆದಂತಹ ಬೆಳೆಗಳ ಸಮೀಕ್ಷೆ ಸಮರ್ಪಕವಾಗಿ ಸರ್ಕಾರಕ್ಕೆ ನೀಡದ ಹಿನ್ನೆಲೆಯಲ್ಲಿ ರಾಜಕೀಯ ಬಲ ಇರುವ ರೈತರಿಗೆ ಕಾಂಗ್ರೆಸ್ ಗಿಡ, ನೀಲಗಿರಿ ಮತ್ತಿತರ ಬೆಳೆಯಿಲ್ಲದ ರೈತರಿಗೆ ಪರಿಹಾರ ಸಿಕ್ಕಿದೆ.
ಆದರೆ ಯಾವುದೇ ರಾಜಕೀಯ ಬಲವಿಲ್ಲದ ಅಮಾಯಕ ರೈತರು ಕಷ್ಟಪಟ್ಟು ಬೆಳೆದಿರುವ ಹೂ ಮತ್ತು ಕ್ಯಾಪ್ಸಿಕಂ, ಟೊಮೆಟೊ ಬೆಳೆಗಳ ಸಮೀಕ್ಷೆ ಸಮರ್ಪಕವಾಗಿ ನಡೆಸದ ಅಧಿಕಾರಿಗಳ ವೈಫಲ್ಯದಿಂದ ಸರ್ಕಾರದಿಂದ ಬರುವ ಪರಿಹಾರ ಹಣ ತೆಗೆದುಕೊಳ್ಳಲು ಇಲಾಖೆಗಳಿಗೆ ಅಲೆದಾಡಬೇಕಾದ ಪರಿಸ್ಥಿತಿಯಿದೆ.
ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತೆ ಸರ್ಕಾರ ಘೋಷಣೆ ಮಾಡಿರುವ ಪರಿಹಾರ ಹಣ ರೈತರಿಗೆ ತಲುಪಿಸಬೇಕೆಂದು ಸರ್ಕಾರವನ್ನು ಒತ್ತಾಯಿ ಮೇಲ್ಕಂಡ ದಿನಾಂಕದಂದು ತೋಟಗಾರಿಕೆ ಇಲಾಖೆ ಮುಂದೆ ಬುಡ್ಡಿದೀಪಗಳೊಂದಿಗೆ ಅಹೋರಾತ್ರಿ ಧರಣಿ ಮಾಡಿ ನ್ಯಾಯ ಪಡೆದುಕೊಳ್ಳಬೇಕಾಗುತ್ತದೆ ಎಂದರು.
ಈ ಸಭೆಯಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಬಂಗವಾದಿ ನಾಗರಾಜಗೌಡ, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್,ನಳಿನಿ.ವಿ ವರಮಹಾಲಕ್ಷಿ, ಬಂಗಾರಪೇಟೆ ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಕೆಜಿಎಫ್ ಅಧ್ಯಕ್ಷ ಶಿವು, ಮುಳಬಾಗಿಲು ಅಧ್ಯಕ್ಷ ಫಾರೂಖ್ಪಾಷ, ಮಾಲೂರು ಅಧ್ಯಕ್ಷ ಮಾಸ್ತಿ ವೆಂಕಟೇಶ್, ಶ್ರೀನಿವಾಸಪುರ ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವಕ್ಕಲೇರಿ ಹನುಮಯ್ಯ, ಸುಪ್ರೀಂ ಚಲ ಮತ್ತಿತರರು ಉಪಸ್ಥಿತರಿದ್ದರು.