ಸರಕಾರಿ ಆಸ್ತಿ ಮಾರಾಟ ಮಾಡುವುದು ದೇಶೋದ್ದಾರವೇ? : ಕಾಂಗ್ರೆಸ್ ಐ.ಟಿ ಸೆಲ್

ಲೇಖನ: ಚಂದ್ರಶೇಖರ ಶೆಟ್ಟಿ

ಸರಕಾರಿ ಆಸ್ತಿ ಮಾರಾಟ ಮಾಡುವುದು ದೇಶೋದ್ದಾರವೇ? : ಕಾಂಗ್ರೆಸ್ ಐ.ಟಿ ಸೆಲ್

ಈ ಬಾರಿಯ ಕೇಂದ್ರ ಬಜೆಟ್ 27ಲಕ್ಷ ಕೋಟಿ ರೂ. ಮೊತ್ತದ ಬೃಹತ್ ಗಾತ್ರ ಹೊಂದಿರುವುದರ ಜೊತೆಗೆ 7ಲಕ್ಷ ಕೋಟಿ ವಿತ್ತೀಯ ಕೊರತೆ ಹೊಂದಿದೆಯೆಂದು ವಿತ್ತಖಾತೆ ಹೇಳಿಕೊಂಡಿದೆ. ಮೋದಿ ಸರಕಾರದ ಹಿಂದಿನ ಅವಧಿಯಲ್ಲಿ ವಿತ್ತೀಯ ಕೊರತೆ ನೀಗಿಸಲು 3ಲಕ್ಷ ಕೋಟಿ ರೂ. ಮೌಲ್ಯದ ಸರಕಾರಿ ಆಸ್ತಿಯನ್ನು ಮಾರಾಟ ಮಾಡಲಾಗಿದೆ. ಮತ್ತು ಈ ಬಾರಿಯ ವಿತ್ತೀಯ ಕೊರತೆ ನೀಗಿಸಲು ಕೂಡ ಸರಕಾರಿ ಆಸ್ತಿ ಮಾರಾಟ ಮಾಡುವ ಅಂಶಗಳನ್ನು ಈ ಬಜೆಟ್‍ನಲ್ಲಿ ಸೇರ್ಪಡೆ ಮಾಡಲಾಗಿದೆ. ಇಷ್ಟಲ್ಲದೆ ಭಾರತೀಯ ರಿಸರ್ವ್ ಬ್ಯಾಂಕ್ ವಶದಲ್ಲಿರುವ 10ಲಕ್ಷ ಕೋಟಿ ರೂ. ಮೀಸಲು ನಿಧಿಯನ್ನು ತನ್ನ ವಶ ಪಡೆಯುವ ಪ್ರಯತ್ನವನ್ನು ಮೋದಿ ಸರಕಾರ ಮಾಡುತ್ತಿರುವುದು ಅದು ಕಾನೂನು ಬಾಹಿರ ಮತ್ತು ದೇಶದ ಭವಿಷ್ಯಕ್ಕೆ ಅಪಾಯಕಾರಿಯಾದುದು ಎಂದು ಅದನ್ನು ವಿರೋಧಿಸಿ ರಿಸರ್ವ್ ಬ್ಯಾಂಕ್ ಗವರ್ನರ್ ಹಾಗೂ ಉಪ ಗವರ್ನರ್‍ಗಳು ಸರಣಿಯಲ್ಲಿ ರಾಜಿನಾಮೆ ನೀಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಹಾಗಾದರೆ ವಿತ್ತೀಯ ಕೊರತೆ ನೀಗಿಸಲು ಸರಕಾರಿ ಒಡೆತನದ ಆಸ್ತಿಪಾಸ್ತಿಯನ್ನು ಮಾರಾಟ ಮಾಡುವುದು ಅಥವಾ ರಿಸರ್ವ್ ಬ್ಯಾಂಕ್ ವಶದಲ್ಲಿರುವ ಮೀಸಲು ನಿಧಿಯನ್ನು ಸರಕಾರ ತನ್ನ ವಶ ಪಡೆಯುವಂತಹ ಕ್ರಮಗಳು ಇವೆಲ್ಲಾ ದೇಶೋದ್ಧಾರದ ಲಕ್ಷಣಗಳೇ ಎಂದು ಕಾಂಗ್ರೆಸ್ ಐ.ಟಿ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಪ್ರಶ್ನಿಸಿದ್ದಾರೆ.

ನೋಟು ನಿಷೇಧದ ನಂತರ ದೇಶದೊಳಗಿನ ವ್ಯಾಪಾರ ವ್ಯವಹಾರಗಳು ಹಠಾತ್ ಕುಂಠಿತಗೊಂಡ ಪರಿಣಾಮವಾಗಿ ಸುಮಾರು 7ಲಕ್ಷ ಕೈಗಾರಿಕೆಗಳು ದಿವಾಳಿ ಅಂಚಿಗೆ ತಲುಪಿ ಬಾಗಿಲು ಮುಚ್ಚಿವೆ. ಹಾಗೆ ಬಾಗಿಲು ಮುಚ್ಚಿದ ಕಾರಣದಿಂದ ಕನಿಷ್ಠ 3.5ಕೋಟಿ ಕಾರ್ಮಿಕ ಕುಟುಂಬಗಳು ಮತ್ತು ವ್ಯಾಪಾರಿ ಕುಟುಂಬಗಳು ಬೀದಿಪಾಲಾಗಿವೆ. ಇದರ ದುಷ್ಪರಿಣಾಮದ ಫಲವಾಗಿ ನಿರುದ್ಯೋಗ ಸಮಸ್ಯೆಯು ಕಳೆದ 45 ವರ್ಷಗಳ ಹಿಂದಿನ ಮಟ್ಟಕ್ಕೆ ತಲುಪಿದೆ. ಹಾಗೆಂದು ನಾವು ಹೇಳುತ್ತಿಲ್ಲ ಬದಲಿಗೆ ಸರಕಾರದ ದಾಖಲೆಗಳೇ ಹೇಳುತ್ತಿವೆ. ಇದೀಗ ಬಜೆಟ್‍ನಲ್ಲಿ ಪೆಟ್ರೋಲ್, ಡಿಸೆಲ್ ಮೇಲೆ ಸೆಸ್ ಹೆಚ್ಚಿಸಿದ ಕಾರಣದಿಂದಾಗಿ ಸಾರಿಗೆ ವ್ಯವಸ್ಥೆ ತುಟ್ಟಿಯಾಗಿ ಅದರ ಫಲವಾಗಿ ಸಹಜವಾಗಿಯೇ ದಿನಬಳಕೆಯ ಆಹಾರ ಸಾಮಗ್ರಿಗಳ ಬೆಲೆ ಏರಿಕೆ ಕಾಣಲಿದೆ. ಬಡವರು ಊಟಕ್ಕೂ ಪರದಾಡುವ ಸ್ಥತಿ ನಿರ್ಮಾಣವಾಗಲಿರುವ ಸಕಲ ಕೆಟ್ಟ ಲಕ್ಷಣಗಳೂ ಗೋಚರಿಸುತ್ತಿವೆ. ಸ್ಟಾರ್ಟಪ್ ಕಂಪೆನಿಗಳಿಗೆ ವಿಧಿಸಿರುವ ತೆರಿಗೆ ವಿನಾಯಿತಿ ಸೌಲಭ್ಯವನ್ನು ದೊಡ್ಡ ದೊಡ್ಡ ಕಾರ್ಪೋರೆಟ್ ಕಂಪೆನಿಗಳು ವಿವಿಧ ಲಾಭದಾಯಕ ಉದ್ದಿಮೆಗಳಿಗೆ ಹೂಡಿಕೆ ಮಾಡುವ ಮೂಲಕ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಸೃಷ್ಠಿಸಲ್ಪಟ್ಟಿದೆ. ಹಾಗೆಯೇ ಇದು ಸಿರಿವಂತರನ್ನು ಇನ್ನಷ್ಟು ಸಿರಿವಂತರನ್ನಾಗಿಸುವ, ಕೋಟ್ಯಾಧೀಶರನ್ನು ಬಹುಕೋಟ್ಯಾಧೀಶರನ್ನಾಗಿಸುವ ಹಾಗೂ ಬಡವರನ್ನು ಇನ್ನಷ್ಟು ಬಡವರನ್ನಾಗಿಸುವ ಬಜೆಟ್ ಆಗಿದೆ ಎಂದವರು ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.