ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಬುಧವಾರ ಏರ್ಪಡಿಸಿದ್ದ ಸಾಲ ವಿತರಣಾ ಸಮಾರಂಭದಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್ ರಸ್ತೆ ಬದಿ ವ್ಯಾಪಾರಿಗಳಿಗೆ ಸಾಲದ ಹಣ ವಿತರಣೆ ಮಾಡಿದರು.
ಶ್ರೀನಿವಾಸಪುರ: ಪಡೆದ ಸಾಲವನ್ನು ನಿಗದಿತ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ಪುರಸಭೆ ಮಾರುಕಟ್ಟೆ ಕಟ್ಟಡದ ಆವರಣದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಬುಧವಾರ ಏರ್ಪಡಿಸಿದ್ದ ಸಾಲ ವಿತರಣಾ ಸಮಾರಂಭದಲ್ಲಿ ರಸ್ತೆ ಬದಿ ವ್ಯಾಪಾರಿಗಳಿಗೆ ಸಾಲದ ಹಣ ವಿತರಿಸಿ ಮಾತನಾಡಿ, ಡಿಸಿಸಿ ಬ್ಯಾಂಕ್ ವತಿಯಿಂದ ಸಾಲ ನೀಡುವಾಗ ಮಧ್ಯವರ್ತಿಗಳನ್ನು ದೂರವಿಡಲಾಗಿದೆ. ಮಧ್ಯವರ್ತಿಗಳು ಸಾಲ ಕೊಡಿಸುವ ನೆಪದಲ್ಲಿ ಬಡವರ ಹಣ ಲಪಟಾಯಿಸುತ್ತಿದ್ದರು. ಕೊಡುವ ಸಾಲದ ಹಣ ಮಧ್ಯವರ್ತಿಗಳ ಪಾಲಾದರೆ, ಸಾಲ ನೀಡಿದ ಉದ್ದೇಶ ಸಫಲವಾಗುವುದಿಲ್ಲ ಎಂದು ಹೇಳಿದರು.
ಸಾಲ ಮರುಪಾವತಿ ಮಾಡಿದ ಫಲಾನುಭವಿಗಳಿಗೆ ಮತ್ತೆ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಸಾಲ ಪಡೆದವರು ಪ್ರಾಮಾಣಿಕವಾಗಿ ಮರುಪಾವತಿ ಮಾಡಿದರೆ ಬ್ಯಾಂಕ್ ಉಳಿಯಲು ಸಾಧ್ಯವಾಗುತ್ತದೆ. ಇನ್ನಷ್ಟು ಜನರಿಗೆ ಅಭಿವೃದ್ಧಿ ಸಾಲ ನೀಡಲು ಸಾಧ್ಯವಾಗುತ್ತದೆ. ಸಾಲ ಪಡೆದ ವ್ಯಕ್ತಿಗಳಿಂದ ಬ್ಯಾಂಕ್ಗೆ ತೊಂದರೆಯಾಗಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ 57 ಮಂದಿ ರಸ್ತೆ ಬದಿ ವ್ಯಾಪಾರಿಗಳಿಗೆ ರೂ.22.80 ಲಕ್ಷ ಹಾಗೂ ಸೋಮಯಾಜಲಹಳ್ಳಿ ವ್ಯಾಪ್ತಿಯ ರೈತರಿಗೆ ರೂ.46 ಲಕ್ಷ ಬಡ್ಡಿ ರಹಿತ ಸಾಲ ವಿತರಿಸಲಾಯಿತು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಸ್ಥಳೀಯ ಡಿಸಿಸಿ ಬ್ಯಾಂಕ್ ಶಾಖೆಯ ಅಧ್ಯಕ್ಷ ವೆಂಕಟರೆಡ್ಡಿ, ಎಪಿಎಂಸಿ ಅಧ್ಯಕ್ಷ ಎನ್.ರಾಜೇಂದ್ರಪ್ರಸಾದ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್, ಮುಖಂಡರಾದ ಕೆ.ಕೆ.ಮಂಜುನಾಥರೆಡ್ಡಿ, ಬಿ.ಜಿ.ಖಾದರ್, ಕೃಷ್ಣಾರೆಡ್ಡಿ, ನಾಗರಾಜ್, ಮುನಿರಾಜು, ವೈ.ಆರ್.ಶಿವಪ್ರಕಾಶ್್, ಮುನಿಸ್ವಾಮಿ ಇದ್ದರು.