ಶ್ರೀನಿವಾಸಪುರದಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಶ್ರೀನಿವಾಸಪುರದಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌  ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು.

 ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ  ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌  ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ, ರೈತರ ಹಿತದೃಷ್ಟಿಯಿಂದ ಪೋಡಿ ಹಾಗೂ ಪಿ.ನಂಬರ್‌ ತೆಗೆಯುವ ಕಾರ್ಯ ಶೀಘ್ರವಾಗಿ ಮುಕ್ತಾಯವಾಗಬೇಕು. ಫೆ.ಅಂತ್ಯದ ವೇಳೆಗೆ ಪಿ.ನಂಬರ್‌ ಸಮಸ್ಯೆ ಪರಿಹಾರವಾಗಿರಬೇಕು ಎಂದು ಸೂಚಿಸಿದರು.
  ತಾಲ್ಲೂಕಿನ 71 ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಸ್ಮಶಾನದ ಸಮಸ್ಯೆ ಇತ್ತು. 9 ಗ್ರಾಮಗಳಲ್ಲಿ ಸಮಸ್ಯೆ ಪರಿಹಾರವಾಗಿದೆ. ಉಳಿದ ಕಡೆ ಸ್ಮಶಾನಕ್ಕೆ ಜಾಗ ನಿಗದಿಪಡಿಸಿ, ಸುತ್ತಲೂ ಬೇಲಿ ಹಾಕಬೇಕು. ಸ್ಮಶಾನ ಒತ್ತುವರಿ ಆಗಿದ್ದಲ್ಲಿ ಮುಲಾಜಿಲ್ಲದೆ ಬಿಡಿಸಬೇಕು. ಯಾವುದೇ ಕಾರಣಕ್ಕೂ ಕೆರೆ ಅಂಗಳ ಮಂಜೂರು ಮಾಡಬಾರದು. ಬಗರ್‌ ಹುಕುಂ ಸಾಗುವಳಿ ಅರ್ಹರಿಗೆ ಸಿಗುವಂತೆ ನೋಡಿಕೊಳ್ಳಬೇಕು. ಸಂವಿಧಾನ ಇರುವುದು ನೊಂದವರ, ಬಡವರ ಅಭಿವೃದ್ಧಿಗಾಗಿ. ಶ್ರೀಮಂತರು ಕೊಬ್ಬಲು ಅಲ್ಲ ಎಂದು ಹೇಳಿದರು.
    ವೃದ್ಧಾಪ್ಯ ವೇತನ ನೀಡಿಕೆಯಲ್ಲಿ ತಡವಾಗುತ್ತಿದೆ ಎಂಬ ದೂರುಗಳು ಬರುತ್ತಿವೆ. ಸುಮಾರು 9 ತಿಂಗಳಿಂದ ಸರಿಯಾಗಿ ವೃದ್ಧಾಪ್ಯ ವೇತನ ಸಿಗುತ್ತಿಲ್ಲ. ಹೀಗಾದರೆ ಬಡವರು ಬದುಕಲು ಸಾಧ್ಯವಿಲ್ಲ. ಈ ಸಮಸ್ಯೆ ಶೀಘ್ರವಾಗಿ ನಿವಾರಣೆ ಆಗಬೇಕು. ಊರಿಗೆ ರಸ್ತೆ ಮಾಡಲು ಅಡ್ಡಗಾಲು ಹಾಕುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಚೆಕ್‌ ಡ್ಯಾಂ ನಿರ್ಮಾಣ ಕಾಮಗಾರಿಯನ್ನು ಸ್ಥಳೀಯರಿಗೆ ನೀಡಬೇಕು.ಕೆಸಿ ವ್ಯಾಲಿ ನೀರು ತುಂಬಲು ಆಯ್ದೆ ಕೆರೆಗಳನ್ನು ಸಿದ್ಧಪಡಿಸಬೇಕು ಎಂದು ಹೇಳಿದರು.
  ‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ಒಂದೆಡೆ ಕುಳಿತು ಮಾತನಾಡಲು ಅಗತ್ಯವಾದ ಸಮುದಾಯ ಭವನಗಳನ್ನು ನಿರ್ಮಿಸಬೇಕು ಎಂಬುದು ನನ್ನ ರಾಜಕೀಯ ದೀಕ್ಷೆಯಾಗಿದೆ. ಪ್ರತಿ ಗ್ರಾಮದಲ್ಲೂ ಅವರಿಗೆ ಒಂದು ನೆಲೆ ಇರಲೇ ಬೇಕು. ಅದಕ್ಕೆ ಪೂರಕವಾಗಿ ಯೋಜನೆ ರೂಪಿಸಿ ಜಾರಿಗೆ ತರಬೇಕು. ಜ.15 ರಿಂದ ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ವಿಚಾರಿಸುತ್ತೇನೆ’ ಎಂದು ಹೇಳಿದರು.
     ಉಪ ವಿಭಾಗಾಧಿಕಾರಿ ವಿ.ಸೋಮಶೇಖರ್‌, ತಹಶೀಲ್ದಾರ್‌ ಕೆ.ಎನ್‌.ಸುಜಾತ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ದಿಂಬಾಲ ಅಶೋಕ್‌, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನರೇಶ್‌, ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್‌, ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌, ಬಿಇಒ ಉಮಾದೇವಿ, ಟಿಎಚ್ಒ ಶ್ರೀನಿವಾಸ್‌, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಎ.ಬೈರಾರೆಡ್ಡಿ ಇದ್ದರು.