ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರದಲ್ಲಿ ಏರ್ಪಡಿಸಿದ್ದ ಸಿಐಟಿಯು 3ನೇ ತಾಲ್ಲೂಕು ಸಮ್ಮೇಳನ ಉದ್ಘಾಟಿಸಿ ಸಿಐಟಿಯು ರಾಜ್ಯ ಸಮಿತಿ ಸದಸ್ಯ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿದರು.
ಶ್ರೀನಿವಾಸಪುರ: ಕಾರ್ಮಿಕರು . ಕಾರ್ಮಿಕ ವಿರೋಧಿ ಕಾನೂನುಗಳ ವಿರುದ್ಧ ಧ್ವನಿ ಎತ್ತಬೇಕು ಎಂದು ಸಿಐಟಿಯು ರಾಜ್ಯ ಸಮಿತಿ ಸದಸ್ಯ ಗಾಂಧಿನಗರ ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ರಾಮ ಮಂದಿರದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಿಐಟಿಯು 3ನೇ ತಾಲ್ಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಪೋರೇಟ್ ವಲಯಕ್ಕೆ ಸಹಾಯ ಮಾಡುವುದಕ್ಕಾಗಿ ಕಾರ್ಮಿಕರ ಹಿತವನ್ನು ಬಲಿಗೊಡುತ್ತಿದೆ. ಕಾರ್ಮಿಕರ ಪರವಾಗಿದ್ದ 44 ಕಾನೂನುಗಳಿಗೆ ಅನಗತ್ಯ ತಿದ್ದುಪಡಿ ತರುವುದರ ಮೂಲಕ ದೇಶದ ಕಾರ್ಮಿಕ ಸಮುದಾಯದ ಮೇಲೆ ಗದಾಪ್ರಮಾಹ ನಡೆಸಿದೆ ಎಂದು ಹೇಳಿದರು.
ಪ್ರಧಾನಿ ಮಣ್ಣೆರಚುತ್ತಿದ್ದಾರೆ. ಜನ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ನಿಲುವು ತಳೆಯುವುದರ ಮೂಲಕ ದುಡಿಯುವ ವರ್ಗಕ್ಕೆ ಬರೆ ಹಾಕಿದ್ದಾರೆ. ಪ್ರಜಾಪ್ರಭುತ್ವ ನಿಲುವು ತಳೆದಿದ್ದಾರೆ ಎಂದು ಹೇಳಿದರು.
ಸಾಹಿತಿ ಸ.ರಘುನಾಥ ಮಾತನಾಡಿ, ಭಾರತ ಮಿಶ್ರ ಆರ್ಥಿಕ ನೀತಿ ಅನುಸರಿಸುತ್ತಿದೆ. ಕಾರ್ಪೊರೇಟ್ ವ್ಯವಸ್ಥೆ ಕಾರ್ಮಿಕ ಕ್ಷೇತ್ರವನ್ನು ಮಾಲೀನ್ಯಗೊಳಿಸಿದೆ. ಕೇಂದ್ರ ಸರ್ಕಾರ ತನಗೆ ಜೈ ಎನ್ನುವ ವರ್ಗಕ್ಕೆ ಮಣೆ ಹಾಕುತ್ತಿದೆ. ಮಹಾತ್ಮಾ ಗಾಂಧೀಜಿ ಅವರ ಆರ್ಥಿಕ ನೀತಿಯನ್ನು ಗಾಳಿಗೆ ತೂರಿದ್ದು, ಈ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ. ಅದರ ಪರಿಣಾಮವಾಗಿ ಯುವ ಸಮುದಾಯ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದೆ ಎಂದು ಹೇಳಿದರು.
ಸಿಐಟಿಯು ತಾಲ್ಲೂಕು ಅಧ್ಯಕ್ಷೆ ಜಿ.ಈಶ್ವರಮ್ಮ ಮಾತನಾಡಿ, ಸರ್ಕಾರ ಕಾರ್ಮಿಕರ ಕನಿಷ್ಠ ವೇತನವನ್ನು ಮಾಸಿಕ ರೂ.18000ಕ್ಕೆ ಹೆಚ್ಚಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಪಿಂಚಣಿ ಹಾಗೂ ಭವಿಷ್ಯ ನಿಧಿ ಸೌಲಭ್ಯ ಒದಗಿಸಬೇಕು. ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ದುಡಿಯುವ ಶಕ್ತಿ ಇರುವ ಪ್ರತಿಯೊಬ್ಬರಿಗೂ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ, ತಾಲ್ಲೂಕು ಅಧ್ಯಕ್ಷ ಪಾತಕೋಟ ನವೀನ್ ಕುಮಾರ್ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಕಾರ್ಮಿಕರ ಸಂಘಟನೆಗಾಗಿ ಶ್ರಮಿಸುತ್ತಿರುವ ಎನ್.ವೀರಪ್ಪರೆಡ್ಡಿ, ಚೌಡಮ್ಮ, ಗಾಂಧಿನಗರ ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ಆಂಜಿನಮ್ಮ , ಶಂಕರಪ್ಪ, ಎಸ್.ಎನ್.ಮೂರ್ತಿ, ಚಿಕ್ಕಣ್ಣ, ಶ್ರೀನಿವಾಸಪ್ಪ, ವೆಂಕಟರವಣಪ್ಪ, ನಾಗಭೂಷಣ, ಲಕ್ಷ್ಮಿದೇವಮ್ಮ, ಮಂಗಮ್ಮ, ಅಮರನಾರಾಯಣಪ್ಪ ಇದ್ದರು.