ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಆಯಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಪ್ರಚಾರ ಜಾಥಾಗೆ ಶಾಸಕ ಕೆ.ಆರ್.ರಮೇಶ್ ಕುಮಾರ್ ಚಾಲನೆ ನೀಡಿದರು.
ಶ್ರೀನಿವಾಸಪುರ: ಫಲಾನುಭವಿಗಳು ಆಯಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಆಯಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಪ್ರಚಾರ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಈ ಯೋಜನೆಯಿಂದ ಸಮಾಜದ ಎಲ್ಲ ವರ್ಗದ ಜನರಿಗೂ ಅನುಕೂಲವಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳ ಸದಸ್ಯರು ವಾರ್ಷಿಕ ರೂ.5 ಲಕ್ಷದ ವರಗೆ ಉಚಿತ ಚಿಕಿತ್ಸೆಗೆ ಅರ್ಹರಾಗಿರುತ್ತಾರೆ. ಎಪಿಎಲ್ ಕಾಡ್ ಹೊಂದಿರುವ ಕುಟುಂಬಗಳ ಸದಸ್ಯರಿಗೆ ವೈದ್ಯಕೀಯ ವೆಚ್ಚದಲ್ಲಿ ಶೇ.30 ರಷ್ಟು ರಿಯಾಯಿತಿ ದೊರೆಯುತ್ತದೆ ಎಂದು ಹೇಳಿದರು.
ಪ್ರತಿಯೊಬ್ಬರೂ ಆರೋಗ್ಯ ಕಾರ್ಡ್ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಹಾಗೂ ವಿದ್ಯಾವಂತರು ಈ ಯೋಜನೆಯ ಪ್ರಯೋಜನಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಅದರಲ್ಲೂ ಗ್ರಾಮೀಣ ಪ್ರದೇಶದ ಬಡವರು ಈ ಯೋಜನೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಆರೋಗ್ಯವೇ ಭಾಗ್ಯ. ಆರೋಗ್ಯ ಇದ್ದಲ್ಲಿ ಜನರು ಹೇಗೋ ಜೀವನ ಮಾಡುತ್ತಾರೆ. ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ದೊರೆಯಬೇಕು ಎಂದು ಹೇಳಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ. ಎಂ.ಸಿ.ವಿಜಯ ಮಾತನಾಡಿ, ಶಾಸಕ ರಮೇಶ್ ಕುಮಾರ್ ಅವರು ಆರೋಗ್ಯ ಸಚಿವರಾಗಿದ್ದಾಗ ವಿನೂತನ ಆರೋಗ್ಯ ಯೋಜನೆಗಳನ್ನು ಜಾರಿಗೆ ತಂದರು. ಅದರಿಂದ ಸಮಾಜದಲ್ಲಿನ ಬಡವರಿಗೆ ಹೆಚ್ಚಿನ ಪ್ರಯೋಜನವಾಗಿದೆ. ಜನರ ಆರೋಗ್ಯ ಸುಧಾರಣೆಯಲ್ಲಿ ಸೇವಾ ಯೋಜನೆಗಳ ಪಾತ್ರ ಹಿರಿದು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಜಿ.ಶ್ರೀನಿವಾಸ್ ಇದ್ದರು.
ಜಾಥಾ: ಪಟ್ಟಣದ ಹೊರ ವಲಯದ ಬೈರಪ್ಪಲ್ಲಿ ಗ್ರಾಮದ ಭೈರವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಿ, ಆಯಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಬಗ್ಗೆ ಅರಿವು ಮೂಡಿಸಿದರು.