ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರದ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ಕೋರಂ ಕೊರತೆ : ಉಪ ವಿಭಾಗಾಧಿಕಾರಿ ವಿ.ಸೋಮಶೇಖರ್ ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಕಾದು ಸಭೆ ಮುಂದೂಡಿಕೆ.
ಶ್ರೀನಿವಾಸಪುರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲು, ಸದಸ್ಯರಿಗಾಗಿ ಕಾದು ಕುಳಿತಿರುವ ಉಪ ವಿಭಾಗಾಧಿಕಾರಿ ವಿ.ಸೋಮಶೇಖರ್ ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್.
ಶ್ರೀನಿವಾಸಪುರ: ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರ ಆಯ್ಕೆಗೆ ಸೋಮವಾರ ಏರ್ಪಡಿಸಿದ್ದ ಚುನಾವಣೆ ಕೋರಂ ಕೊರತೆಯಿಂದಾಗಿ ಮುಂದೂಡಲ್ಪಟ್ಟಿತು.
ಈ ಹಿಂದೆ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆಯಾಗಿದ್ದ ಮಂಜುಳ ರಾಮಚಂದ್ರಗೌಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಸಲು, ಉಪ ವಿಭಾಗಾಧಿಕಾರಿ ವಿ.ಸೋಮಶೇಖರ್ ಚುನಾವಣಾಧಿಕಾರಿಯಾಗಿ, ಚುನಾವಣಾ ಪ್ರಕ್ರಿಯೆ ಪ್ರಾರಂಭಿಸಿದರು. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಲು ತಾಲ್ಲೂಕು ಪಂಚಾಯಿತಿ ಸದಸ್ಯರಾದ ಭಾರತಿ, ನಾಗವೇಣಿರೆಡ್ಡಿ, ಬಾಲಾವತಿ, ಸುಗುಣಮ್ಮ ನಾಮಪತ್ರ ಸಲ್ಲಿಸಿ ಹೋದರು.
ಮಧ್ಯಾಹ್ನ 1 ಗಂಟೆಗೆ ಚುನಾವಣೆ ನಿಗದಿಪಡಿಸಲಾಗಿತ್ತು. ಆದರೆ ನಿಗದಿತ ಸಮಯ ಮುಗಿಯುತ್ತಿದ್ದರೂ 18 ಸದಸ್ಯರ ಪೈಕಿ 8 ಸದಸ್ಯರು ಮಾತ್ರ ಹಾಜರಾದರು. ಇದನ್ನು ಗಮನಿಸಿದ ಚುನಾವಣಾಧಿಕಾರಿ ವಿ.ಸೋಮಶೇಕರ್, ಕೋರಂ ಕೊರತೆಯಿಂದಾಗಿ ಡಿ.24ಕ್ಕೆ ಚುನಾವಣೆ ಮುಂದೂಡಿರುವುದಾಗಿ ಪ್ರಕಟಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಸಂಪತ್ ಇದ್ದರು.