ಶ್ರೀನಿವಾಸಪುರದ ಕೋಚಿಮುಲ್‌ ಕ್ಯಾಂಪ್‌ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕೋಚಿಮುಲ್‌ ನಿರ್ದೇಶಕ ಎನ್‌.ಹನುಮೇಶ್‌ ವಿವಿಧ ಫಲಾನುಭವಿಗಳಿಗೆ ಚೆಕ್‌ ವಿತರಿಸಿದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 ಶ್ರೀನಿವಾಸಪುರದ ಕೋಚಿಮುಲ್‌ ಕ್ಯಾಂಪ್‌ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕೋಚಿಮುಲ್‌ ನಿರ್ದೇಶಕ ಎನ್‌.ಹನುಮೇಶ್‌ ವಿವಿಧ ಫಲಾನುಭವಿಗಳಿಗೆ ಚೆಕ್‌ ವಿತರಿಸಿದರು.

ಶ್ರೀನಿವಾಸಪುರ: ಹಾಲು ಉತ್ಪಾದಕರು ರಾಸುಗಳಿಗೆ ತಪ್ಪದೆ ವಿಮೆ ಮಾಡಿಸಬೇಕು. ಗುಣಾತ್ಮಕ ಹಾಲು ಉತ್ಪಾದಿಸಬೇಕು ಎಂದು ಕೋಚಿಮುಲ್‌ ನಿರ್ದೇಶಕ ಎನ್‌.ಹನುಮೇಶ್‌ ಹೇಳಿದರು.
  ಪಟ್ಟಣದ ಕೋಚಿಮುಲ್‌ ಕ್ಯಾಂಪ್‌ ಕಚೇರಿ ಸಭಾಂಗಣದಲ್ಲಿ ಕೋಚಿಮುಲ್‌, ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ಸ್ಥಳೀಯ ಶಿಬಿರ ಕಚೇರಿಯ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ರಾಸು ವಿಮೆ ಹಾಗೂ ಕಟ್ಟಡ ಅನುದಾನದ ಚೆಕ್‌ ವಿತರಿಸಿ ಮಾತನಾಡಿ, ರಾಸು ವಿಮೆ ಹಾಲು ಉತ್ಪಾದಕರಿಗೆ ವರದಾನವಾಗಿದೆ ಎಂದು ಹೇಳಿದರು.
  ತಾಲ್ಲೂಕಿನಲ್ಲಿ ಪ್ರತಿ ದಿನ 72 ಸಾವಿರ ಲೀಟರ್‌ ಹಾಲು ಕೋಚಿಮುಲ್‌ ಹಾಲು ಉತ್ಪಾದಕರ ಸಂಘಗಳಿಗೆ ಬರುತ್ತಿದೆ. ಸುಮಾರು 20 ಸಾವಿರ ಲೀಟರ್‌ ಹಾಲು ಖಾಸಗಿ ಡೇರಿಗಳ ಪಾಲಾಗುತ್ತಿದೆ. ಆದರೆ ಹೆಚ್ಚಿನ ಹಾಲು ಉತ್ಪಾದಕರು ಗುಣ ಮಟ್ಟದ ಹಾಲು ಉತ್ಪಾದನೆಗೆ ಅಗತ್ಯ ಗಮನ ನೀಡುತ್ತಿಲ್ಲ. ಇದರಿಂದಾಗಿ ಅವರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ಹೇಳಿದರು.
    ಶಿಬಿರ ಕಚೇರಿ ಸಹಾಯಕ ವ್ಯವಸ್ಥಾಪಕ ಕೆ.ಎಸ್‌.ನರಸಿಂಹಯ್ಯ ಮಾತನಾಡಿ, ಹಾಲು ಉತ್ಪಾದಕರು ತಮ್ಮ ರಾಸುಗಳಿಗೆ ಉತ್ತಮ ಗುಣಮಟ್ಟದ ಆಹಾರ ನೀಡುವುದರ ಮೂಲಕ ಅತ್ಯುತ್ತಮ ಗುಣಮಟ್ಟದ ಹಾಲನ್ನು ಪಡೆದುಕೊಳ್ಳಬೇಕು. ಹಾಲು ಉತ್ಪಾದಕರ ಸಹಕಾರ ಸಂಘಗಳ ಪದಾಧಿಕಾರಿಗಳು ಹಾಗೂ ನಿರ್ದೆಶಕರು ರೈತರು ಉತ್ತಮ ಕರ್ಜೆಯ ಹಾಲು ಉತ್ಪಾದಿಸಲು ಅಗತ್ಯವಾದ ಸಲಹೆ ಸೂಚನೆ ನೀಡಬೇಕು ಎಂದು ಹೇಳಿದರು.
  ಈ ಸಂದರ್ಭದಲ್ಲಿ 15 ಹಾಲು ಉತ್ಪಾದಕರಿಗೆ ತಲಾ ರೂ.60 ಸಾವಿರ, ಹಾಗೂ ಎರಡು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಕಟ್ಟಡ ನಿರ್ಮಿಸಿಕೊಳ್ಳಲು ತಲಾ ರೂ. 1.5 ಲಕ್ಷದ ಚೆಕ್‌ಗಳನ್ನು ವಿತರಿಸಲಾಯಿತು. 25 ಫಲಾನುಭವಿಗಳಿಗೆ ತಲಾ ರೂ.35 ಸಾವಿರ ಮೌಲ್ಯದ ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಲಾಯಿತು.
  ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ.ವಿ.ಎನ್‌.ಶ್ರೀಕಾಂತ್‌, ವಿಸ್ತರಣಾಧಿಕಾರಿಗಳಾದ ಎನ್‌.ಗಣೇಶ್‌, ದೇವರಾಜ್‌, ಎ.ಎನ್‌.ಶ್ರೀನಿವಾಸಮೂರ್ತಿ ಇದ್ದರು.