ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರತಾಲ್ಲೂಕು ಎಸ್ಎಫ್ಸಿಎಸ್ಗಳ ಅಧ್ಯಕ್ಷ ಕಾರ್ಯದರ್ಶಿಗಳ ಸಭೆ
ಸಾಲಕ್ಕೆ ಮಧ್ಯವರ್ತಿಗಳನ್ನು ಬಾಗಿಲಿಗೂ ಸೇರಿಸದಿರಿ-ಬ್ಯಾಲಹಳ್ಳಿ ಗೋವಿಂದಗೌಡ
ಕೋಲಾರ:- ಡಿ.ಸಿ.ಸಿ ಬ್ಯಾಂಕ್ ವತಿಯಿಂದ ನೀಡುತ್ತಿರುವ ಸಾಲಕ್ಕೆ ಮಧ್ಯವರ್ತಿಗಳ ಅವಶ್ಯಕತೆ ಬೇಕಾಗಿಲ್ಲ ಅವರನ್ನು ಬ್ಯಾಂಕಿನ ಬಾಗಿಲ ಬಳಿಯೂ ಸೇರಿಸಬಾರದು. ಸಾಲ ಮರುಪಾವತಿ ಮಾಡಿ ಹೊಸ ಸಾಲಕ್ಕೆ ಅರ್ಜಿ ಸಲ್ಲಿಸುವ ಮಹಿಳಾ ಸ್ವಸಹಾಯ ಸಂಘಗಳವರನ್ನು ಒಂದು ಕ್ಷಣವೂ ಕಾಯಿಸದೆ ಹೊಸ ಸಾಲ ನೀಡಿ ಎಂದು ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ತಾಕೀತು ಮಾಡಿದರು.
ಶ್ರೀನಿವಾಸಪುರ ಪಟ್ಟಣದ ಡಿ.ಸಿ.ಸಿ. ಬ್ಯಾಂಕ್ನ ಶ್ರೀನಿವಾಸಪುರ ಶಾಖೆಯಲ್ಲಿ ಮಂಗಳವಾರ ತಾಲೂಕಿನ ವ್ಯವಸಾಯ ಸೇವಾ ಸಹಕಾರ ಸಂಘಗಳ ಅಧ್ಯಕ್ಷರ ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡುತ್ತಿದ್ದರು.
ಆಡಿಟ್ ನೆಪದಲ್ಲಿ ಸ್ವಸಹಾಯ ಸಂಘಗಳ ಗುಂಪುಗಳಿಂದ ಸಾವಿರಾರು ರೂಪಾಯಿಯನ್ನು ವಸೂಲಿ ಮಾಡುವವರ ವಿರುದ್ದ ದೂರು ನೀಡಿದರೆ ಕ್ರಮ ಕೈಗೊಂಡು ಈಗಾಗಲೇ ಹೆಚ್ಚುವರಿಯಾಗಿ ಹಣ ವಸೂಲಿ ಮಾಡಿದರೆ ಅದನ್ನು ಮರುಪಾವತಿಸುವುದಾಗಿ ತಿಳಿಸಿದರು.
ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳವರಿಗೆ ಆಡಿಟ್ ಮಾಡಿಸಿಕೊಡುತ್ತೇವೆ ಹಾಗೂ ಹೊಸ ಸಾಲ ಕೊಡಿಸುವುದಾಗಿ ಮಧ್ಯವರ್ತಿಗಳು ಆಡಿಟ್ ನೆಪದಲ್ಲಿ ಸಾವಿರಾರು ರೂಪಾಯಿಗಳನ್ನು ಪಡೆಯುತ್ತಿದ್ದಾರೆ ಎಂಬ ವ್ಯಾಪಕ ದೂರುಗಳು ಮಹಿಳಾ ಸ್ವಸಹಾಯ ಸಂಘಗಳಿಂದ ನಮಗೆ ದೂರವಾಣಿ ಮೂಲಕ ತಿಳಿಸುತ್ತಿದ್ದಾರೆ. ಅಂತಹವರನ್ನು ನೀವು ಹತ್ತಿರಕ್ಕೆ ಸೇರಿಸಿಕೊಂಡರೆ ನಿಮ್ಮ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕಾರ್ಯದರ್ಶಿಗಳಿಗೆ ಎಚ್ಚರಿಕೆ ನೀಡಿದರಲ್ಲದೆ ಸ್ಪೀಕರ್ ರಮೇಶ್ ಕುಮಾರ್ವರು ಬ್ಯಾಂಕಿನ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದಾರೆ. ಆ ಗೌರವಕ್ಕೆ ನಾವು ಚ್ಯುತಿ ತರದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗಿದೆ ಎಂದರು.
ಇನ್ನು ಮುಂದೆ ಆಡಿಟ್ ರೋಲ್ಕಾಲ್ಗೆ ಕಡಿವಾಣ ಹಾಕುವುದಾಗಿ ತಿಳಿಸಿದ ಅಧ್ಯಕ್ಷರು ಹೊಸದಾಗಿ ಸಾಲಕ್ಕೆ ಬರುವ ಹಾಗೂ ಪಡೆದುಕೊಂಡ ಸಾಲವನ್ನು ಮರುಪಾವತಿ ಮಾಡಿ ಮತ್ತೆ ಸಾಲಕ್ಕಾಗಿ ಬರುವವರಿಗೆ ಡಿ.ಸಿ.ಸಿ. ಬ್ಯಾಂಕ್ ಸಿಬ್ಬಂಧಿಯಿಂದಲೇ ಆಡಿಟ್ ಮಾಡಿಸಲಾಗುವುದು. ಸಾಲಕ್ಕಾಗಿ ಬರುವ ಯಾವ ಹೆಣ್ಣು ಮಕ್ಕಳ ಮನಸ್ಸನ್ನು ನೋಯಿಸಬಾರದು ದಲ್ಲಾಳಿಗಳು ಬಂದರೆ ಅವರನ್ನು ಹೊದ್ದು ಹೋಡಿಸಿ ಹೆಣ್ಣು ಮಕ್ಕಳಿಗೆ ಆಗುವ ವಂಚನೆಯನ್ನು ತಡೆಗಟ್ಟುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಸ್ತ್ರೀ ಶಕ್ತಿ ಸಂಘಗಳವವರಾಗಲಿ ಅಥವಾ ರೈತರ ಬೆಳೆ ಸಾಲಕ್ಕೆ ಬರುವ ಫಲಾನುಭವಿಗಳ ಅರ್ಜಿಗಳನ್ನು ಸ್ಥಳ ಪರಿಶೀಲನೆ ನಡೆಸಿ ಆರ್ಹರಿಗೆ ಮಾತ್ರ ಸಾಲ ನೀಡಿ ಎಂದು ಬ್ಯಾಂಕಿನ ವ್ಯವಸ್ಥಾಪಕ ಭಾನುಪ್ರಕಾಶ್ಗೆ ತಿಳಿಸಿದರಲ್ಲದೆ ರೈತರಲ್ಲದೆ ಇರುವವರಿಗೆ ರೈತರ ಹೆಸರಿನಲ್ಲಿ ಸಾಲ ನೀಡಬೇಡಿ. ಈಗಾಗಲೇ ಬ್ಯಾಂಕಿಗೆ ನೇರವಾಗಿ ಸಾಲಕ್ಕಾಗಿ ಅರ್ಜಿ ನೀಡಿರುವ 120 ಮಹಿಳಾ ಸ್ವ ಸಹಾಯ ಸಂಘಗಳವರಿಗೆ 20 ದಿನಗಳೊಳಗಾಗಿ ಅವರಿಗೆ ಸಾಲ ನೀಡಬೇಕು ಅಷ್ಟರೊಳಗಾಗಿ ಆಯಾ ಗ್ರಾಮಗಳಿಗೆ ಬೇಟಿ ನೀಡಿ ಪರಿಶೀಲನೆ ಕಾರ್ಯ ಮುಗಿಸಬೇಕು ಎಂದು ಬ್ಯಾಂಕಿನ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.
ಚುನಾವಣೆ ನಡೆಯದೆ ಇರುವ ಸಹಕಾರ ಸಂಘಗಳ ಚುನಾವಣೆ ನಡೆಸಬೇಕು. ಬ್ಯಾಂಕಿಗೆ ಸ್ಥಾಳಾವಕಾಸ ಕಡಿಮೆ ಇರುವುದರಿಂದ ಪಕ್ಕದಲ್ಲಿಯೇ ಇರುವ ಕಸಬಾ ಸೋಸೈಟಿಯ ಕಟ್ಟಡದ ಹಾಲ್ನ್ನು ದುರಸ್ಥಿಗೊಳಿಸಿ ಬ್ಯಾಂಕನ್ನು ಆಷಾಡ ಮುಗಿದ ನಂತರ ಬದಲಾಯಿಸುವುದು ಹಾಗೂ ಬ್ಯಾಂಕಿನ ಸಿಬ್ಬಂಧಿಯನ್ನು ಚುರುಕುಗೊಳಿಸುವ ಕೆಲಸ ಆಗಬೇಕಾಗಿದೆ ಎಂದು ವ್ಯವಸ್ಥಾಪಕರಿಗೆ ಸೂಚಿಸಿದರು. ಕಾಯಕ ಯೋಜನೆಗೆ ಸರ್ಕಾರದಿಂದ ಅನುಮೋಧನೆ ದೊರೆತರೆ ಸಂಘದ ಪ್ರತಿ ಸದಸ್ಯರಿಗೂ ಒಂದು ಲಕ್ಷ ರೂಗಳು ನೀಡಲಾಗುವುದು ಅಲ್ಲಿಯ ತನಕ ಪ್ರತಿ ಸದಸ್ಯರಿಗೆ 50ಸಾವಿರ ರೂಗಳನ್ನು ನೀಡಲಾಗುವುದು ಎಂದರು.
ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಬೈರಪಲ್ಲಿ ವೆಂಕಟರೆಡ್ಡಿ, ಮಾಜಿ ಅಧ್ಯಕ್ಷ ಮಣಿಗಾನಹಳ್ಳಿ ವೆಂಕಟರೆಡ್ಡಿ, ಡಿ.ಸಿ.ಸಿ ಬ್ಯಾಂಕಿನ ಕೇಂದ್ರ ಕಛೇರಿಯ ಪತ್ತಿನ ಶಾಖೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಎನ್. ಬೈರೇಗೌಡ, ಯಲ್ದೂರು ಎಸ್.ಎಫ್.ಎಸ್ ಅಧ್ಯಕ್ಷ ನಾರಾಯಣಸ್ವಾಮಿ, ಮುದಿಮುಡುಗು ವಿ.ಎಸ್.ಎಸ್.ಎಸ್.ಎನ್ ಅಧ್ಯಕ್ಷ ಬಗ್ಗಲಘಟ್ಟ ಶ್ರೀನಿವಾಸರೆಡ್ಡಿ, ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಭಾಕರರೆಡ್ಡಿ, ವೀರಪ್ಪರೆಡ್ಡಿ, ಶಿವಾರೆಡ್ಡಿ, ನಾರಾಯಣಸ್ವಾಮಿ, ಶ್ರೀನಾಥ್, ವೆಂಕಟರವಣಾಶೆಟ್ಟಿ, ಮೇಲ್ವಿಚಾರಕರಾದ ಎಂ. ವೆಂಕಟಮುನಿಯಪ್ಪ ಮುಂತಾದವರು ಉಪಸ್ಥಿತರಿದ್ದರು.