ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ,ಎಲ್ಲ ಅರ್ಹ ವ್ಯಕ್ತಿಗಳೂ ರಕ್ತದಾನ ಮಾಡಲು ಮುಂದಾಗಬೇಕು : ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿಜಯಕುಮಾರ್
ಶ್ರೀನಿವಾಸಪುರ: ಎಲ್ಲ ಅರ್ಹ ವ್ಯಕ್ತಿಗಳೂ ರಕ್ತದಾನ ಮಾಡಲು ಮುಂದಾಗಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿಜಯಕುಮಾರ್ ಹೇಳಿದರು. ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಆರ್ಯ ವೈಶ್ಯ ಮಂಡಳಿ ಟ್ರಸ್ಟ್ ಹಾಗೂ ತಾಲ್ಲೂಕು ಆರೋಗ್ಯ ಇಲಾಖೆ ವತಿಯಿಂದ ಬುಧವಾರ ಏರ್ಪಡಿಸಿದ್ದ ಉಚಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ರಕ್ತದಾನ ಶ್ರೇಷ್ಠ ದಾನವಾಗಿದ್ದು, ಮಾನವ ಸೇವೆಯೇ ಮಾಧವ ಸೇವೆ ಎಂಬ ಧ್ಯೇಯ ವಾಕ್ಯಕ್ಕೆ ಪೂರಕವಾಗಿದೆ ಎಂದು ಹೇಳಿದರು.
ಎಲ್ಲ ಅರ್ಹ ಆರೋಗ್ಯವಂತ ವ್ಯಕ್ತಿಗಳೂ ರಕ್ತದಾನ ಮಾಡಬಹುದು. ಅದರರಿಂದ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಕೆಲವೇ ದಿನಗಳಲ್ಲಿ ನೀಡಿದಷ್ಟು ರಕ್ತ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ವಿದ್ಯಾವಂತ ಯುವ ಸಮುದಾಯ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ಆರ್ಯ ವೈಶ್ಯ ಮಂಡಳಿ ಟ್ರಸ್ಟ್ ಅಧ್ಯಕ್ಷ ವೈ.ಆರ್.ಶಿವಪ್ರಕಾಶ್ ಮಾತನಾಡಿ, ದೇಶದಲ್ಲಿ ರಕ್ತದ ಕೊರತೆ ಇದೆ. ಅನಿವಾರ್ಯ ಸಂದರ್ಭಗಳಲ್ಲಿ ಅಗತ್ಯವಾದ ರಕ್ತ ಸಿಗದೆ ಅಸುನೀಗುವ ಪ್ರಕರಣಗಳಿಗೆ ಕೊರತೆಯಿಲ್ಲ ಎಂದು ಹೇಳಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ವಿಜಯ, ಪುಸಭಾ ಸದಸ್ಯ ಬಿ.ವೆಂಕಟರೆಡ್ಡಿ, ರೆಡ್ ಕ್ರಾಸ್ಸಂಸ್ಥೆ ಪದಾಧಿಕಾರಿಗಳಾದ ಎನ್.ಗೋಪಾಲಕೃಷ್ಣಗೌಡ, ವಿ.ಸೊಮಶೇಖರ್, ಜಿ.ಶ್ರೀನಿವಾಸ್, ಮುಖಂಡರಾದ ಕೆ.ವಿ.ಸೂರ್ಯನಾರಾಯಣಶೆಟ್ಟಿ, ವೈ.ಎಂ.ನಾಗೇಂದ್ರ ಬಾಬು, ಬದ್ರಿ, ಸತ್ಯನಾರಾಯಣ ಇದ್ದರು.
ರಕ್ತದಾನ: ಶಿಬಿರದಲ್ಲಿ 80 ಮಂದಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು. ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಹಣ್ಣು ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.