ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ: ಸಾರ್ವಜನಿಕರು ನಾಡ ಕಚೇರಿಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಉಪ ವಿಭಾಗಾಧಿಕಾರಿ ಸಿ.ಸೋಮಶೇಖರ್ ಹೇಳಿದರು.
ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ರೂ.20 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನಾಡ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿ, ನಾಡ ಕಚೇರಿಯಲ್ಲಿ 44 ಸೇವೆಗಳು ಸಿಗುತ್ತವೆ. ಜನನ, ಮರಣ ಪ್ರಮಾಣ ಪತ್ರ, ಪಹಣಿ, ಕೃಷಿ ಪ್ರಮಾಣ ಪತ್ರ ಸೇರಿದಂತೆ ಅಗತ್ಯವಿರುವ ಹಲವು ಸೇವೆಗಳನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿಕೊಡಲಾಗುವುದು ಎಂದು ಹೇಳಿದರು. ಜಿಲ್ಲೆಯಲ್ಲಿ ಈವರೆಗೆ 14 ಸಾವಿರ ಪಿ ನಂಬರ್ಗಳನ್ನು ರದ್ದುಪಡಿಸಲಾಗಿದೆ. ಪಿ ನಂಬರ್ ರದ್ದುಪಡಿಸುವ ಅಭಿಯಾನ ನಡೆಸಲಾಗಿದೆ. 5.45 ಲಕ್ಷ ಪಹಣಿಗಳನ್ನು ತಿದ್ದುಪಡಿ ಮಾಡಲಾಗಿದೆ. ಇನ್ನು 6 ಸಾವರಿ ಪಹಣಿಗಳನ್ನು ಮಾತ್ರ ತಿದ್ದುಪಡಿ ಮಾಡಬೇಕಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಕೆ.ಎನ್.ಸುಜಾತ ಮಾತನಾಡಿ, ನಾಡ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ 10 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುವರು. ಸಮಸ್ಯೆ ಇದ್ದಲ್ಲಿ ಇಲ್ಲಿನ ಅಧಿಕಾರಿಗಳ ಗಮನ್ನೆ ತಂದು ಪರಿಹಾರ ಕಂಡಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ವೃದ್ಧಾಪ್ಯ ವೇತನದ ಪ್ರಮಾಣ ಪತ್ರ ವಿತರಿಸಲಾಯಿತು. ಪಿ ನಂಬರ್ ತೆಗೆದ ಪಹಣಿಗಳನ್ನು ನೀಡಲಾಯಿತು.
ಜಿಲ್ಲಾಧಿಕಾರಿ ಕಚೇರಿಯ ಆರ್ಎಚ್ಎ ಗೌತಮ್, ಉಪ ತಹಶೀಲ್ದಾರ್ ಬಲರಾಮ್, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನರೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಂಕರಮ್ಮ, ಉಪಾಧ್ಯ ಮಂಜುನಾಥ್, ರಾಯಲ್ಪಾಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಗಣೇಶ್, ಸುಬ್ಬಣ್ಣ, ವಾಜೀದ್ ಸಾಬ್, ಬಾಬು ಇದ್ದರು.