ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ: ಸರ್ಕಾರ ಕನ್ನಡಿಗರ ಜೀವನ ಉತ್ತಮಗೊಳ್ಳಲು ಬೇಕಾದ ಯೋಜನೆಗಳನ್ನು ರೂಪಿಸಿ ಜಾರಿಗೆ ತರಬೇಕು.
ಶ್ರೀನಿವಾಸಪುರ: ಸರ್ಕಾರ ಕನ್ನಡಿಗರ ಜೀವನ ಉತ್ತಮಗೊಳ್ಳಲು ಬೇಕಾದ ಯೋಜನೆಗಳನ್ನು ರೂಪಿಸಿ ಜಾರಿಗೆ ತರಬೇಕು.ಕುಡಿಯುವ ನೀರು ಸಮಸ್ಯೆ ನಿವಾರಿಸಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ಹೇಳಿದರು.
ಪಟ್ಟಣದಲ್ಲಿ ಶನಿವಾರ ರಾತ್ರಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬೆಂಗಳೂರು ವಲಸಿಗರ ಬೀಡಾಗಿ ಪರಿಣಮಿಸಿದೆ. ಕನ್ನಡ ಭಾಷೆಗೆ ಮನ್ನಣೆ ಕಡಿಮೆಯಾಗುತ್ತಿದೆ. ಈ ಪರಿಸ್ಥಿತಿಯನ್ನು ಹೀಗೆಯೇ ಬಿಟ್ಟರೆ ಮುಂದೆ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಾರೆ ಎಂದು ಹೇಳಿದರು.
ಕನ್ನಡ ನಾಡು, ನುಡಿಯ ರಕ್ಷಣೆಗೆ ಕುವೆಂಪು ಅವರ ತತ್ವ ಅಳವಡಿಸಿಕೊಳ್ಳಬೇಕು. ಕನ್ನಡಿಗರು ಎಲ್ಲೇ ಇದ್ದರೂ ಕನ್ನಡತನವನ್ನು ಮೆರೆಯಬೇಕು. ರಾಜ್ಯ ಕನ್ನಡ ಅಗ್ರ ಭಾಷೆಯಾಗುವುದರೊಂದಿಗೆ ಸರ್ವಜನಾಂಗದ ಸುಂದರ ತೋಟವಾಗಬೇಕು ಎಂದು ಹೇಳಿದರು.
ಸಮಾಜ ಸೇವಕ ಡಾ.ಬಿ.ವಿ.ಶಿವಾರೆಡ್ಡಿ ಮಾತನಾಡಿ, ಕನ್ನಡ ಭಾಷಾ ಪ್ರೇಮ, ಕನ್ನಡ ರಾಜ್ಯೋತ್ಸವಕ್ಕೆ ಮಾತ್ರ ಸೀಮಿತಗೊಳ್ಳಬಾರದು. ರಾಜ್ಯೋತ್ಸವ ನಿತ್ಯೋತ್ಸವ ಆಗಬೇಕು. ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯ ಸೊಗಡು ನಿತ್ಯ ನೂತನವಾಗಿ ಹರಡಬೇಕು. ಗಡಿ ನಾಡಿನ ಜನರು ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಪರಸ್ಪರ ಕನ್ನಡದಲ್ಲಿ ವ್ಯವಹರಿಸಬೇಕು ಎಂದು ಹೇಳಿದರು.
ರಾಯಲ್ಪಾಡ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜುನಾಥರೆಡ್ಡಿ, ವೇದಿಕೆಯ ಜಿಲ್ಲಾಧ್ಯಕ್ಷ ಟಿ.ಸುಬ್ರಮಣಿ , ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೆಶಬಾಬು, ಮುಖಂಡರಾದ ಅಂಬರೀಶ್, ಕಿಶನ್ ರೆಡ್ಡಿ, ಶ್ರೀಕಾಂತ್ ಇದ್ದರು.
ಈ ಸಂದರ್ಭದಲ್ಲಿ ಕಿರಿಯ ಕಲಾವಿದ ಅರ್ಜುನ್ ಇಟ್ಟಿಗಿ ಅವರು ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು. ವಾದ್ಯಗೋಷ್ಠಿ ಏರ್ಪಡಿಸಲಾಗಿತ್ತು