ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ರಾಮ ಮಂದಿರ ಭಾರತೀಯ ಸಂಸ್ಕೃತಿಯ ಪ್ರತೀಕವಾಗಲಿದೆ. ಜನರ ಪ್ರಾರ್ಥನೆ ಫಲಿಸಿದೆ ಎಂದು ಜಿಲ್ಲಾ ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷ ಎಂ.ವೇಮಣ್ಣ ಹೇಳಿದರು.
ಪಟ್ಟಣದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಡೆಸಲಾದ ಶಿಲಾನ್ಯಾಸ ಹಿನ್ನೆಲೆಯಲ್ಲಿ ಬುಧವಾರ ವಿಶ್ವ ಹಿಂದೂ ಪರಿಷತ್ ವತಿಯಿಂದ ಏರ್ಪಡಿಸಿದ್ದ ರಾಮ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ಶತಮಾನಗಳಷ್ಟು ಹಳೆಯದಾದ ವಿವಾದ ಶಾಂತಿಯುತವಾಗಿ ಕೊನೆಗೊಂಡು ಮಂದಿರ ನಿರ್ಮಾಣವಾಗುತ್ತಿರುವುದು ಸಂತೋಷ ಸಂಗತಿಯಾಗಿದೆ ಎಂದು ಹೇಳಿದರು. ತಾಲ್ಲೂಕು ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷ ಕೆ.ದಿವಾಕರ್ ಮಾತನಾಡಿ, ರಾಮ ಮಂದಿರ ನಿರ್ಮಾಣ ಹಿಂದೂ ಸಮಾಜದ ಬಹುದಿಗಳ ಕನಸಕಾಗಿತ್ತು. ಈಗ ಅದು ನನಸಾಗುತ್ತಿದೆ. ಈ ಸಂಬಂಧ ನಡೆದ ಸುದೀರ್ಘ ಹೋರಾಟದಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ನೆನೆಯಬೇಕಾಗಿದೆ. ಆ ಭವ್ಯ ಮಂದಿರ ದೇಶದ ಹೆಮ್ಮೆಯಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲ್ಲೂಕು ವಿಶ್ವ ಹಿಂದೂ ಪರಿಷತ್ತಿನ ವತಿಯಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ರೂ.5ಲಕ್ಷ ಮೌಲ್ಯದ ಚೆಕ್ ನೀಡಲಾಯಿತು. ದೇವಾಲಯದ ಆವರಣದಲ್ಲಿ ನಿಲ್ಲಿಸಲಾಗಿದ್ದ ರಾಮನ ಭಾವ ಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಪುಷ್ಪಾರ್ಚನೆ ಮಾಡಲಾಯಿತು. ವಿಶ್ವ ಹಿಂದೂ ಪರಿತ್ ಹಾಗೂ ಆರ್ಎಸ್ಎಸ್ ಸದಸ್ಯರು ರಾಮನ ಪರ ಘೋಷಣೆ ಕೂಗಿ ಸಂಭ್ರಮಿಸಿದರು. ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್, ಪಿಎಸ್ಐ ನಾರಾಯಣಪ್ಪ, ಬಿಜೆಪಿ ಮುಖಂಡರಾದ ಎಂ.ಲಕ್ಷ್ಮಣಗೌಡ, ಎ.ಅಶೋಕರೆಡ್ಡಿ, ಇ.ಶಿವಣ್ಣ, ಟಿ.ನಾರಾಯಣಸ್ವಾಮಿ, ಕೊಟ್ರಗುಳಿ ನಾರಾಯಣಸ್ವಾಮಿ, ಕಪಾಲಿ ಮೋಹನ್, ಶಿವಮೂರ್ತಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.