ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಬೀದಿ ಬದಿ ವ್ಯಾಪಾರಿಗಳಿಗೆ ನೆರವಾಗುವ ದೃಷ್ಟಿಯಿಂದ ತಲಾ ರೂ.10 ಸಾವಿರ ವಿತರಣೆ ಮಾಡಲಾಗುತ್ತಿದೆ ಎಂದು ಕರ್ನಾಟಕ ಮಹಿಳಾ ನಿಗಮದ ಅಧ್ಯಕ್ಷೆ ಶಶಿಕಲಾ ವಿ.ತೆಂಗಳಿ ಹೇಳಿದರು.
ಪಟ್ಟಣದಲ್ಲಿ ರಸ್ತೆ ಬದಿ ವ್ಯಾಪಾರ ನಡೆಸುವ ಮಹಿಳೆಯರಿಗೆ ಸೋಮವಾರ ಆರ್ಥಿಕ ನೆರವಿನ ಚೆಕ್ ವಿತರಿಸಿ ಮಾತನಾಡಿ, ಮಹಿಳೆಯರು ಹೊಟ್ಟೆಪಾಡಿಗಾಗಿ ರಸ್ತೆ ಬದಿಯಲ್ಲಿ ಕುಳಿತು ಹೂವು, ಹಣ್ಣು, ತರಕಾರಿ ಮುಂತಾದ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಆದರೆ ಕೊರೊನಾ ಅವರ ತುತ್ತನ್ನು ಕಸಿದುಕೊಂಡಿದೆ. ಆದ್ದರಿಂದಲೇ ಮಹಿಳಾ ನಿಗಮ ಅವರ ರಕ್ಷಣೆಗೆ ಧಾವಿಸಿದೆ ಎಂದು ಹೇಳಿದರು. ಆರ್ಥಿಕ ನೆರವು ಪಡೆದ ಮಹಿಳಾ ಫಲಾನುಭವಿಗಳು, ಪಡೆದ ಹಣವನ್ನು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿ ಲಾಭ ಮಾಡಿಕೊಳ್ಳಬೇಕು. ನಿಗಮದ ನೆರವನ್ನು ಸಣ್ಣ ಪ್ರಮಾಣದ ಬಂಡವಾಳವೆಂದು ತಿಳಿದು ಬಳಸಿಕೊಳ್ಳಬೇಕು. ಪ್ರತಿ ಕುಟುಂಬದ ಕಣ್ಣಾದ ಹೆಣ್ಣು ಶ್ರಮವಹಿಸಿ ದುಡಿದು ಕುಟುಂಬವನ್ನು ಚಾಕಚಕ್ಯತೆಯಿಂದ ನಡೆಸಿಕೊಂಡು ಹೋಗುವ ಕಲೆಯನ್ನು ಕರಗತ ಮಾಡಿಕೊಂಡಿರುತ್ತಾಳೆ. ಸರ್ಕಾರದ ಸೌಲಭ್ಯ ಸದುಪಯೋಗ ಆಗಬೇಕು ಎಂದು ಹೇಳಿದರು. ಸಮಾರಂಭದಲ್ಲಿ ಪಟ್ಟಣದ 56 ಮಹಿಳಾ ಬೀದಿ ಬದಿ ವ್ಯಾಪಾರಿಗಳಿಗೆ ತಲಾ ರೂ.10 ಸಾವಿರ ಹಾಗೂ ಚೇತನ ಯೋಜನೆಯಡಿ 5 ಮಂದಿ ದಮನಿತ ಮಹಿಳೆಯರಿಗೆ ತಲಾ ರೂ.1 ಲಕ್ಷ ನೆರವು ನೀಡಲಾಯಿತು. ಶಾಸಕ ರಮೇಶ್ ಕುಮಾರ್ ಅವರು ಸರ್ಕಾರಕ್ಕೆ ಕಳುಹಿಸಿದ್ದ ಪ್ರಸ್ತಾವನೆಗೆ ಸ್ಪಂದಿಸಿ ಸರ್ಕಾರ ಈ ನೆರವು ಒದಗಿಸಿದೆ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಎಂ.ಜಿ.ಪಾಲಿ, ಅಭಿವೃದ್ಧಿ ನಿರ್ದೇಶಕಿ ಬಿ.ಎಸ್.ಶೀಲಾ, ಸಿಡಿಪಿಒ ರೋಸಲಿನ್ ಸತ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಮಮತ, ಮೇಲ್ವಿಚಾರಕಿ ನಾನಮ್ಮ, ನವೀನ್, ಮುನಿರಾಜು ಇದ್ದರು.