ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ: ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಪ್ರತಿಯೊಬ್ಬರೂ ಸಹಕರಿಸಬೇಕು
ಶ್ರೀನಿವಾಸಪುರ: ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಪ್ರತಿಯೊಬ್ಬರೂ ಸಹಕರಿಸಬೇಕು. ಈ ವಿಷಯವಾಗಿ ಏನಾದರೂ ಸಮಸ್ಯೆಗಳು ಕಂಡುಬಂದಲ್ಲಿ ಪೊಲೀಸರಿಗೆ ದೂರು ನೀಡಬೇಕು ಎಂದು ತಹಶೀಲ್ದಾರ್ ಬಿ.ಎಸ್.ರಾಜೀವ್ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಧಾರ್ಮಿಕ ಹಬ್ಬಗಳು ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಡಬೇಕು. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು ಎಂದು ಹೇಳಿದರು.
ರಸ್ತೆ ಬದಿ ವ್ಯಾಪಾರಿಗಳು ವಾಹನ ಸಂಚಾರಕ್ಕೆ ಅಡ್ಡಿಯನ್ನು ಉಂಟುಮಾಡದೆ, ಪುರಸಭೆ ವಾಣಿಜ್ಯ ಸಂಕೀರ್ಣದಲ್ಲಿ ನಿಗದಿಪಡಿಸಲಾಗಿರುವ ಸ್ಥಳದಲ್ಲಿ ತಮ್ಮ ವಸ್ತುಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡಬೇಕು. ರಸ್ತೆ ಬದಿಯಲ್ಲಿ ತಳ್ಳುಗಾಡಿಗಳು ಹಾಗೂ ಮಾರಾಟದ ವಸ್ತುಗಳನ್ನು ಇಡುವುದರಿಂದ ಪಾದಚಾರಿಗಳಿಗೆ ಹಾಗೂ ಆಂಬ್ಯುಲೆನ್ಸ್ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂದು ಹೇಳಿದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಮಾತನಾಡಿ, ವರ ಮಹಾಲಕ್ಷ್ಮಿ ಹಬ್ಬ ಮುಗಿಯುವ ವರೆಗೆ ಫುಟ್ ಪಾತ್ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಸನ್ಮಾನ: ಈ ಸಂದರ್ಭದಲ್ಲಿ ರಾಷ್ಟ್ರಪತಿ ಪದಕ ಪಡೆದ ಡಿವೈಎಸ್ಪಿ ಬಿ.ಕೆ.ಉಮೇಶ್ ಅವರನ್ನು ಸನ್ಮಾನಿಸಲಾಯಿತು.
ಬಿ.ಕೆ..ಉಮೇಶ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಪೊಲೀಸರು ನಾಗರಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು. ಕಾನೂನನ್ನು ಗೌರವಿಸಿ ಕಾರ್ಯನಿರ್ವಹಿಸಬೇಕು. ಕಾನೂನು ಪಾಲನೆಯಲ್ಲಿ ತಾರತಮ್ಯ ಮಾಡಬಾರದು. ಕಾನೂನನ್ನು ರಕ್ಷಿಸಿದರೆ, ಕಾನೂನು ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿದರು.
ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ರಾಘವೇಂದ್ರ ಪ್ರಕಾಶ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳಾದ ಆರ್.ವೆಂಕಟೇಶ್, ನರಸಿಂಹಮೂರ್ತಿ, ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್, ಮುಖಂಡರಾದ ಕೆ.ಕೆ.ಮಂಜು, ರಾಮಾಂಜಮ್ಮ, ಏಜಾಜ್ ಪಾಷ, ಈರಪ್ಪ, ಮಹಮದ್ ರಫಿ, ಶೇಕ್ ಶಫಿವುಲ್ಲಾ ಇದ್ದರು.