ಶ್ರೀನಿವಾಸಪುರ: ಪಟ್ಟಣದ ಪುರಸಭೆಯ ಅಧ್ಯಕ್ಷೆಯಾಗಿ ಜೆಡಿಎಸ್‌ ನ ಎಂ.ಎನ್‌.ಲಲಿತಾ ಶ್ರೀನಿವಾಸ್ ಹಾಗೂ ಉಪಾಧ್ಯಕ್ಷೆಯಾಗಿ ಆಯಿಷಾ ನಯಾಜ್‌ ಚುನಾಯಿತರಾದರು.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪಟ್ಟಣದ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಸೋಮವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ ಎಂ.ಎನ್‌.ಲಲಿತಾ ಶ್ರೀನಿವಾಸ್‌ ಹಾಗೂ ಆಯಿಷಾ ನಯಾಜ್‌ ಕ್ರಮವಾಗಿ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆಯಾಗಿ ಚುನಾಯಿತರಾದರು.
  ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಾಧ್ಯ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾಗಿತ್ತು. ಚುನಾವಣೆಯಲ್ಲಿ ಪುರಸಭೆಯ ಒಟ್ಟು 23 ಸ್ಥಾನಗಳ ಪೈಕಿ ಜೆಡಿಎಸ್‌ 11, ಕಾಂಗ್ರೆಸ್‌ 8 ಹಾಗೂ ಪಕ್ಷೇತರರು 4 ಮಂದಿ ಚುನಾಯಿತರಾಗಿದ್ದರು. ಪಕ್ಷೇತರರಲ್ಲಿ ಕಾಂಗ್ರೆಸ್‌ನ 3 ಹಾಗೂ ಜೆಡಿಎಸ್‌ನ ಒಬ್ಬ ಸದಸ್ಯ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಗೆದ್ದಿದ್ದರು. ಆದರೂ ಆವರವರ ಪಕ್ಷಗಳಿಗೆ ನಿಷ್ಠೆ ವ್ಯಕ್ತಪಡಿಸಿದ್ದರು.  ಹಾಲಿ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಮತ್ತು ಸಂಸದ ಎಸ್‌.ಮುನಿಸ್ವಾಮಿ ಚುನಾವಣೆಯಲ್ಲಿ ಮತ ಚಲಾಯಿಸಿದ್ದರೆ ಪರಿಸ್ಥಿತಿಯಲ್ಲಿ ಏರುಪೇರಾಗುವ ಅವಕಾಶ ಇತ್ತು. ಆದರೆ ಅವರು ಮತದಾನದಲ್ಲಿ ಭಾಗವಹಿಸಿದ ಪರಿಣಾಮವಾಗಿ ಜೆಡಿಎಸ್‌ ಅಭ್ಯರ್ಥಿಗಳ ಆಯ್ಕೆ ಸುಲಭವಾಯಿತು.  ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌ ಇದ್ದರು.  ಜನ ಮರೆತಿಲ್ಲ: ಚುನಾವಣೆ ಬಳಿಕ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ‘ವಿರೋಧ ಪಕ್ಷದ ಕೆಲವರು ತಾಲ್ಲೂಕಿನ ಜನತೆ ನನ್ನನ್ನು ಮರೆತುಬಿಟ್ಟಿದ್ದಾರೆ. ಅವರಿಗೆ ಇನ್ನು ಭವಿಷ್ಯವಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ ಜನರು ನನ್ನನ್ನು ಮರೆತಿಲ್ಲ ಎಂಬುದನ್ನು ಪುರಸಭೆಯಲ್ಲಿ ಗೆಲುವು ತಂದುಕೊಡುವುದರ ಮೂಲಕ ಜನರೇ ಸಾರಿದ್ದಾರೆ, ಎಂದು ಹೇಳಿದರು.  ‘ಅರ್ಧ ಶತಮಾನದಷ್ಟು ಕಾಲ ತಾಲ್ಲೂಕಿನ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು, ಸಾರ್ವಜನಿಕರ ಸೇವೆ ಮಾಡಿದ್ದೇನೆ. ತಾಲ್ಲೂಕಿನಲ್ಲಿ  ಬಹುತೇಕ ಎಲ್ಲ ಅಭಿವೃದ್ಧಿ ಕಾರ್ಯಗಳೂ ನಾನು ಶಾಸಕನಾಗಿದ್ದ ಅವಧಿಯಲ್ಲಿ ಕೈಗೊಳ್ಳಲಾಗಿದೆ. ಇದನ್ನು ನಿರಾಕರಿಸಲು ಸಾಧ್ಯವಿಲ್ಲ. ಜನ ಪ್ರತಿನಿಧಿಗಳು ವಿನಯದಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ತಾವು ಜನ ಸೇವಕರು ಎಂಬುದನ್ನು ಮರೆಯಬಾರದು’ ಎಂದು ಹೇಳಿದರು.      ಅಧ್ಯಕ್ಷ , ಉಪಾಧ್ಯಕ್ಷರ ಚುನಾವಣೆ ಮುಗಿಯುತ್ತಿದ್ದಂತೆ ಜೆಡಿಎಸ್‌ ಕಾರ್ಯಕರ್ತರು ಮಾಜಿ ಸಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರನ್ನು ಹೆಗಲ ಮೇಲೆ ಹೊತ್ತು ಕುಣಿದಾಡಿದರು. ಆಯ್ಕೆಯಾದ ಅಧ್ಯಕ್ಷೆ ಹಾಗು ಉಪಾಧ್ಯಕ್ಷೆಯನ್ನು ಎಂಜಿ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದರು.  ಜಿಲ್ಲಾ ಪಂಚಾಯಿತಿ ಸದಸ್ಯರಾದ ತೂಪಲ್ಲಿ ಆರ್‌.ನಾರಾಯಣಸ್ವಾಮಿ, ಎಂ.ವಿ.ಶ್ರೀನಿವಾಸ್‌, ನಂಜುಂಡಪ್ಪ, ಮುಖಂಡರಾದ ಬಿ.ವೆಂಕಟರೆಡ್ಡಿ, ಕೆ.ಶಿವಪ್ಪ, ಬಿ.ಎನ್‌.ಸೂರ್ಯನಾರಾಯಣ, ಮುನಿಯಪ್ಪ, ವೇಣುಗೋಪಾಲರೆಡ್ಡಿ, ನೀಲಾವತಿ, ಕೆ.ಪಿ.ನಾಗೇಶ್‌, ರಾಮಚಂದ್ರೇಗೌಡ, ಜಯಲಕ್ಷ್ಮಿ, ಶಬ್ಬೀರ್‌, ಅಪ್ಪೂರು ರಾಜು, ಬಾಬಾಜಾನ್‌, ಅನಂದ್‌ ಇದ್ದರು
.