ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎನ್.ಅರುಣ್ ಪ್ರಸಾದ್ ಭೇಟಿ ನೀಡಿ ಪರಿಶೀಲಿಸಿದರು. ಕಡತಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರಿಗಳು ಟೆಂಡರ್ ಕರೆಯದೆ ಕಾಮಗಾರಿ ನಿರ್ವಹಿಸುವುದರ ಮೂಲಕ ಕೆಪಿಟಿಪಿ ಕಾಯ್ದೆ ಉಲಂಘಿಸಿದ್ದಾರೆ. ಕಾಮಗಾರಿ ಗುತ್ತಿಗೆ ನೀಡುವ ಮುನ್ನ ವಾರ್ತಾ ಪ್ರಚಾರ ಇಲಾಖೆ ಮೂಲಕ ಪತ್ರಿಕೆಗಳಲ್ಲಿ ಟೆಂಡರ್ ಕರೆದು, ಕಡಿಮೆ ಹಣಕ್ಕೆ ಕಾಮಗಾರಿ ನಿರ್ವಹಿಸುವ ವ್ಯಕ್ತಿಗಳಿಗೆ ಕಾಮಗಾರಿ ವಹಿಸಿಕೊಡುವುದು ನಿಯಮ. ಆದರೆ ಆ ನಿಯಮವನ್ನು ಗಾಳಿಗೆ ತೂರಲಾಗಿದೆ ಎಂದು ಹೇಳಿದರು. ಎಸ್ಸಿ, ಎಸ್ಟಿ ಮೀಸಲಾತಿಗೆ ಮಾನ್ಯತೆ ನೀಡದೆ ಕಾಮಗಾರಿಗಳ ಬಿಲ್ ಪಾಸ್ ಮಾಡಲಾಗಿದೆ. ಅಧಿಕಾರಿಗಳು ಖರ್ಚು ವೆಚ್ಚದ ಮಾಹಿತಿ ನೀಡಲು ವಿಫಲರಾಗಿದ್ದಾರೆ. ಎಂದು ಹೇಳಿದರು. 2018–19 ಹಾಗೂ 2019–20ನೇ ಸಾಲಿಗೆ ಸಂಬಂಧಿಸಿದಂತೆ ರಿಜಿಸ್ಪರ್ನಲ್ಲಿ ಸಹಾಯಕ ನಿರ್ದೇಶಕರ ಸಹಿ ಇಲ್ಲದೆ, ಸುಮಾರು ರೂ. 2 ಕೋಟಿ ಬಿಲ್ ಪಾಸ್ ಮಾಡಲಾಗಿದೆ. ಈ ರಿಜಿಸ್ಟರ್ ಅನ್ನು ವಶಕ್ಕೆ ಪಡೆಯಲಾಗಿದೆ. ಇಲಾಖೆಯಲ್ಲಿ ನಡೆಯುವ ಯಾವುದೇ ಅವ್ಯವಹಾರ ಸಹಿಸಲಾಗದು. ನಿಯಮ ಪಾಲಿಸದ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಮೇಗೌಡ, ಸಿಬ್ಬಂದಿ ರಾಜೇಶ್, ಅರುಣ್ ಕುಮಾರ್, ಲಕ್ಷ್ಮಿ, ನರಸಿಂಹಪ್ಪ ಇದ್ದರು