ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ
ಶ್ರೀನಿವಾಸಪುರ ತಾಲ್ಲೂಕಿನ ವೇಂಪಲ್ಲಿ ಗ್ರಾಮದಲ್ಲಿ ಪೌರತ್ವ ತಿದ್ದುಪಡಿ ಕಾಯ್ಕೆ ಬೆಂಬಲಿಸಿ ಏರ್ಪಡಿಸಿದ್ದ ಜನ ಜಾಗೃತಿ ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ಕೆ.ಎನ್ ವೇಣುಗೋಪಾಲ್ ಮಾತನಾಡಿದರು.
ಶ್ರೀನಿವಾಸಪುರ: ಪ್ರತಿ ಪಕ್ಷಗಳು ಪೌರತ್ವ ತಿದ್ದುಪಡಿ ಕಾಯ್ಕೆ ಬಗ್ಗೆ ತಪ್ಪು ಸಂದೇಶ ಬಿತ್ತುತ್ತಿವೆ. ಇದರಿಂದ ಅಶಾಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಹೇಳಿದರು.
ತಾಲ್ಲೂಕಿನ ವೇಂಪಲ್ಲಿ ಗ್ರಾಮದಲ್ಲಿ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ಕೆ ಬೆಂಬಲಿಸಿ ಗುರುವಾರ ಏರ್ಪಡಿಸಿದ್ದ ಜನ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೌರತ್ವ ಕಾಯ್ದೆ ತಿದ್ದುಪಡಿಯಿಂದ ಭಾರತೀಯ ಮುಸ್ಲಿಂ ಸಮುದಾಯಕ್ಕೆ ಯಾವುದೇ ತೊಂದರೆ ಇಲ್ಲ. ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫಘಾನಿಸ್ಥಾನದಿಂದ ಭಾರತಕ್ಕೆ ವಲಸೆ ಬಂದಿರುವ ಅಲ್ಪ ಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಸದುದ್ದೇಶದಿಂದ ಮಾತ್ರ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಹೇಳಿದರು.
ಈ ಹಿಂದಿನ ಸರ್ಕಾರಗಳು ಮಾಡಲು ಉದ್ದೇಶಿಸಿದ್ದ ಪೌರತ್ವ ತಿದ್ದುಪಡಿ ಕಾಯ್ಕೆಯನ್ನು ಪ್ರಧಾನಿ ಮೋದಿ ಅವರು ಜಾರಿಗೆ ತಂದಿದ್ದಾರೆ. ಇದರಿಂದ ಅನ್ಯ ದೇಶಗಳಲ್ಲಿ ಕಿರುಕಳಕ್ಕೆ ಒಳಗಾಗಿ ಭಾರತಕ್ಕೆ ಬಂದಿದ್ದ ಅಲ್ಪ ಸಂಖ್ಯಾತರಿಗೆ ನೆಮ್ಮದಿ ದೊರೆಯಲಿದೆ. ಉಳಿದುಕೊಳ್ಳಲು ತಮ್ಮದೇ ಸೂರು ಸಿಗಲಿದೆ. ಇದನ್ನು ವಿರೋಧಿಸುವುದು ದೇಶ ದ್ರೋಹವಾಗುತ್ತದೆ. ಭಾರತದ ಅಲ್ಪ ಸಂಖ್ಯಾತರಲ್ಲಿ ಅನಗತ್ಯ ಭಯ ಬಿತ್ತುವ ಕಾರ್ಯ ನಿಲ್ಲಬೇಕು ಎಂದು ಹೇಳಿದರು.
ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಜಯರಾಮರೆಡ್ಡಿ ಮಾತನಾಡಿ, ಕಾಂಗ್ರೆಸ್ ಹುಳಿ ಹಿಂಡುವ ಕೆಲಸ ಮಾಡುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ಕೆ ಬಗ್ಗೆ ಮುಸ್ಲಿಮರನ್ನು ತಪ್ಪುದಾರಿಗೆ ಎಳೆಯುತ್ತಿದೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಂ.ಲಕ್ಷ್ಮಣಗೌಡ ಮಾತನಾಡಿ, ಪೌರತ್ವ ತಿದ್ದುಪಡಿ ಮಸೂದೆ ಬಿಜೆಪಿ ಚುನಾವಣಾ ಪ್ರಣಾಳಿಕೆಯ ಒಂದು ಪ್ರಮುಖ ಅಂಶವಾಗಿತ್ತು. ದೇಶದ ಹಿತದೃಷ್ಟಿಯಿಂದ ಪ್ರಧಾನಿ ಮೋದಿ ಅವರ ನಿಲುವನ್ನು ಪ್ರತಿಯೊಬ್ಬರೂ ಬೆಂಬಲಿಸಬೇಕು ಎಂದು ಹೇಳಿದರು.
ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗರಾಜ್, ಮಾಜಿ ಅಧ್ಯಕ್ಷ ವೆಂಕಟೇಗೌಡ, ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಇ,ಶಿವಣ್ಣ, ಮುಖಂಡರಾದ ರಾಮಕೃಷ್ಣಾರೆಡ್ಡಿ, ಟಿ.ಎನ್.ಬೈರಾರೆಡ್ಡಿ, ಶ್ರೀರಾಮರೆಡ್ಡಿ, ರಾಮಾಂಜಿ, ನಾಗರಾಜ್, ರೆಡ್ಡಪ್ಪ, ಶ್ರೀನಾಥಬಾಬು, ರಘುನಾಥರೆಡ್ಡಿ ಇದ್ದರು.