ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಗ್ರಾಮದ ನ್ಯಾಷನಲ್‌ ಪ್ರೌಢ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಉದ್ಘಾಟಿಸಿದರು.

 

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಗ್ರಾಮದ ನ್ಯಾಷನಲ್‌ ಪ್ರೌಢ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಉದ್ಘಾಟಿಸಿದರು.

ಶ್ರೀನಿವಾಸಪುರ: ರೈತರು  ಕೃಷಿ ಹಾಗೂ ತೋಟಗಾರಿಕೆಯಲ್ಲಿ ವೈಜ್ಞಾನಿಕ ಪದ್ಧತಿ ಅನುಸರಿಸಬೇಕು ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್‌ಹೇಳಿದರು.
 ತಾಲ್ಲೂಕಿನ ಯಲ್ದೂರು ಗ್ರಾಮದ ನ್ಯಾಷನಲ್‌ ಪ್ರೌಢ ಶಾಲೆ ಆವರಣದಲ್ಲಿ ಕೃಷಿ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ವತಿಯಿಂದ  ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಧಿಕಾರಿಗಳು ಸರ್ಕಾರದ ಸೌಲಭ್ಯಗಳನ್ನು ಕೃಷಿಕರ ಮನೆ ಬಾಗಿಲಿಗೆ ತಲುಪಿಸಬೇಕು ಎಂದು ಅಭಿಪ್ರಾಯಪಟ್ಟರು.
  ಸರ್ಕಾರ ಮನೆ ನಿರ್ಮಾಣಕ್ಕೆ ನೀಡುವ ಹಣವನ್ನು ಹೆಚ್ಚಿಸಿದೆ. ಸಾಮಾನ್ಯ ವರ್ಗಕ್ಕೆ ರೂ. 1.20 ಲಕ್ಷ ಹಾಗೂ ಎನ್‌ಆರ್‌ಇಜಿ ಯೋಜನೆಯಡಿ ರೂ.25 ಸಾವಿರ ನಿಡಲಾಗುತ್ತಿದೆ.  ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ರೂ.1.50 ಲಕ್ಷ ಹಾಗೂ ಎನ್‌ಆರ್‌ಇಜಿ ಯೋಜನೆಯಡಿ ರೂ.25 ಸಾವಿರ ನೀಡಲಾಗುತ್ತಿದೆ. ಕ್ಷೇತ್ರದಲ್ಲಿ 18 ಸಾವಿರ ಮನೆಗಳನ್ನು ಪಕ್ಷಾತೀತವಾಗಿ ವಿತರಿಸಲಾಗಿದೆ ಎಂದು ಹೇಳಿದರು.
    ಸ್ತ್ರೀ ಶಕ್ತಿ ಸಂಘಗಳಿಗೆ ಡಿಸಿಸಿ ಬ್ಯಾಂಕ್‌ ವತಿಯಿಂದ ಬಡ್ಡಿ ರಹಿತ ಸಾಲ ಶೌಲಭ್ಯ ಕಲ್ಪಿಸಲಾಗಿದೆ. ಸಾಲದ ಮೊತ್ತವನ್ನು ಹೆಚ್ಚಿಸಲಾಗಿದೆ. ಪಡೆದುಕೊಂಡ ಸಾಲವನ್ನು ಸದುಪಯೋಗ ಪಡಿಸಿಕೊಂಡು, ನಿಗದಿತ ಸಮಯದ ಒಳಗೆ ಮರುಪಾವತಿ ಮಾಡಬೇಕು. ಈ ವಿಚಾರದಲ್ಲಿ ಅವರಿವತು ಹೇಳುವ ಮಾತುಗಳಿಗೆ ಕಿವಿಗೊಡಬಾರದು. ದೇಶದಲ್ಲಿ ಸಾವಿರಾರು ಕೋಟಿ ಸಾಲ ಪಡೆದ ವ್ಯಕ್ತಿಗಳು ದೇಶ ಬಿಟ್ಟು ಹೋಗಿದ್ದಾರೆ. ಆದರೆ ಬಡವರು ಪಡೆದ ಸಾಲವನ್ನು ನಿಯತ್ತಾಗಿ ಹಿಂದಿರುಗಿಸುತ್ತಿದ್ದಾರೆ. ಅದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
  ಡಿಸಿಸಿ ಬ್ಯಾಂಕ್‌ ವತಿಯಿಂದ ಸಮಾಜದ ಎಲ್ಲ ಸಮುದಾಯದ ಜನರಿಗೂ ಅಭಿವೃದ್ಧಿ ಸಾಲ ನೀಡಲಾಗುವುದು. ವಿವಿಧ ರಿಯಾತಿಗಳ ಹಣವನ್ನು ಬ್ಯಾಂಕ್‌ನಿಂದಲೇ ತುಂಬಲಾಗುವುದು. ಅಗ್ರಹಾರದ ಕೆರೆಗೆ ಕೆಸಿ ವ್ಯಾಲಿ ನೀರು ಹರಿದು ಬರುತ್ತಿದ್ದು, ಇನ್ನೊಂದು ವಾರದಲ್ಲಿ ತುಂಬುವುದು. ಉಳಿದ ಕೆರೆಗಳಿಗೆ ಹಂತ ಹಂತವಾಗಿ ನೀರು ಹರಿಸಲಾಗುವುದು. ಭಗವಂತ ಆರೋಗ್ಯ, ಆಯಸ್ಸು ನೀಡಿದಲ್ಲಿ ಜನರಿಗೆ ಇನ್ನಷ್ಟು ಸೇವೆ ಮಾಡುತ್ತೇನೆ ಎಂದು ಹೇಳಿದರು. 
  ಈ ಸಂದರ್ಭದಲ್ಲಿ ಕೆ.ಆರ್‌.ರಮೇಶ್‌ ಕುಮಾರ್‌ ಫಲಾನುಭವಿಗಳಿಗೆ ಕಾರ್ಯಾದೇಶ ನೀಡಿದರು. ಕೃಷಿ ಸಂಬಂಧ ತೆರೆಯಲಾಗಿದ್ದ ಮಳಿಗೆಗಳನ್ನು ಉದ್ಘಾಟಿಸಿದರು. ಆತ್ಮಹತ್ಯೆ ಮಾಡಿಕೊಂಡಿದ್ದ ಹಾಗೂ ಹೆಜ್ಜೇನು ದಾಳಿಯಿಂದ ಜೀವ ಕಳೆದುಕೊಂಡಿದ್ದ ರೈತರ ಕುಟುಂಬಗಳಿಗೆ ಪರಿಹಾರ ಧನದ ಚೆಕ್‌ ವಿತರಿಸಿದರು.
  ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಂ.ನರೇಶ್‌,  ಕಾರ್ಯನಿರ್ವಹಣಾಧಿಕಾರಿ ಎಸ್‌.ಆನಂದ್‌, ಸದಸ್ಯ ಜಿ.ಎಂ.ಕೃಷ್ಣಾರೆಡ್ಡಿ, ಮಾಜಿ ಸದಸ್ಯ ಕೆ.ಕೆ.ಮಂಜುನಾಥ್‌, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿತಮ್ಮ ಸೋಮಣ್ಣ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ದಿಂಬಾಲ ಅಶೋಕ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂಜಯ್‌ ರೆಡ್ಡಿ, ಉಪ ಕೃಷಿ ನಿರ್ದೇಶಕಿ ಜಿ.ಆರ್‌.ಭವ್ಯಾರಾಣಿ, ಸಹಾಯಕ ಕೃಷಿ ನಿರ್ದೇಶಕ ಕೆ.ರಾಮಕೃಷ್ಣ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಎ.ಬೈರಾರೆಡ್ಡಿ, ಮಾವು ಅಭಿವೃದ್ಧಿ ಕೇಂದ್ರದ ಉಪ ನಿರ್ದೇಶಕ ಎಚ್‌.ಟಿ.ಬಾಲಕೃಷ್ಣ, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸತ್ಯನಾರಾಯಣ, ಕೃಷಿ ವಿಜ್ಞಾನಿಗಳಾದ ಡಾ.ಪಲ್ಲವಿ, ಡಾ.ರಾಜೇಂದ್ರ, ರಾಮಚಂದ್ರ, ಪಿಡಿಒಗಳಾದ ಚಿನ್ನಪ್ಪ, ಕೃಷ್ಣ ಮತ್ತಿತರರು ಇದ್ದರು.