ಶ್ರೀನಿವಾಸಪುರ ತಾಲ್ಲೂಕಿನ ಕೇತಗಾನಹಳ್ಳಿ ಗ್ರಾಮದಲ್ಲಿ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭವನ್ನು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಉದ್ಘಾಟಿಸಿದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ ತಾಲ್ಲೂಕಿನ ಕೇತಗಾನಹಳ್ಳಿ ಗ್ರಾಮದಲ್ಲಿ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭವನ್ನು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಉದ್ಘಾಟಿಸಿದರು.
ಶ್ರೀನಿವಾಸಪುರ: ರೈತರ ಹಿತದೃಷ್ಟಿಯಿಂದ, ಹಾಲು ಖರೀದಿ ದರವನ್ನು ಹೆಚ್ಚಿಸಬೇಕು ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.
  ತಾಲ್ಲೂಕಿನ ಕೇತಗಾನಹಳ್ಳಿ ಗ್ರಾಮದಲ್ಲಿ  ಏರ್ಪಡಿಸಿದ್ದ  ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹಾಲು ಉತ್ಪಾದನೆಯಲ್ಲಿ ಗ್ರಾಮೀಣ ಪ್ರದೇಶದ ಮಹಿಳೆಯರ ಶ್ರಮ ಅಡಗಿದೆ. ಉತ್ಪಾದನಾ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗಿನ ಖರೀದಿ ದರ ಹಾಗೂ ಸರ್ಕಾರ ನೀಡುವ ಪ್ರೋತ್ಸಾಹ ಧನದಿಂದ ಉತ್ಪಾದಕರಿಗೆ ಲಾಭ ಸಿಗುತ್ತಿಲ್ಲ. ಆದ್ದರಿಂದ ಪ್ರತಿ ಲೀಟರ್‌ ಹಾಲಿಗೆ ಕನಿಷ್ಟ ರೂ.40 ನಿಗದಿಪಡಿಸಬೇಕು ಎಂದು ಅಭಿಪ್ರಾಯಪಟ್ಟರು.
    ಸರ್ಕಾರದ ಮಟ್ಟದಲ್ಲಿ ಸಮಿತಿಯೊಂದನ್ನು ರಚಿಸಿ ಹಾಲಿನ ಬೆಲೆ ನಿಗದಿಪಡಿಸಬೇಕು. ರೈತರು ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗುವಂತೆ ಮಾಡಬೇಕು.ನಮ್ಮ ಹಾಲು ಉತ್ಪಾದಕರ ಸಹಕಾರ ಸಂಘಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಅದಕ್ಕೆ ಕಾರಣರಾದ ಹಿರಿಯ ಸಹಕಾರಿ ಧುರೀಣರ ಸ್ಮರಣೆ ಮಾಡಬೇಕು ಎಂದು ಹೇಳಿದರು.
  ಕೋಚಿಮುಲ್‌ ನಿರ್ದೇಶಕ ಎನ್‌.ಹನುಮೇಶ್‌ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘಗಳ ಪದಾಧಿಕಾರಿಗಳು, ರೈತರು ಉತ್ತಮ ಗುಣಮಟ್ಟದ ಹಾಲು ಉತ್ಪಾದಿಸುವಂತೆ ಪ್ರೋತ್ಸಾಹಿಸಬೇಕು. ಯುವಕರು ಈ ವೃತ್ತಿಯಲ್ಲಿ ತೊಡಗುವಂತೆ ಪ್ರೇರೇಪಿಸಬೇಕು. ಹಾಲಿನ ಖರೀದಿ ಬೆಲೆ ಹೆಚ್ಚಳ ಮಾಡುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲು ಈಗಾಗಲೇ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಹೇಳಿದರು.
    ವೆಂಕಟಸ್ವಾಮಿ, ಶಿವಶಂಕರ್‌ ನವ ಭಾರತದಲ್ಲಿ ಸಹಕಾರ ಸಂಘಗಳ ಪಾತ್ರ ಹಾಗೂ ಹೈನುಗಾರಿಕೆ ಪಾತ್ರ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ತಾಲ್ಲೂಕಿನ ಹಿರಿಯ ಸಹಕಾರಿ ಧುರೀಣರಾದ ಆಲವಟ್ಟ ಎನ್‌.ಶ್ರೀರಾಮರೆಡ್ಡಿ, ಅಪ್ಪಿರೆಡ್ಡಿ ಅವರನ್ನು ಸನ್ಮಾನಿಸಲಾಯಿತು.
  ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಕೆ.ಎಂ.ನಾಗರಾಜ್‌, ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಡಾ. ಶ್ರೀಕಾಂತ್‌, ಸಹಕಾರ ಕ್ಷೇತ್ರದ ಮುಖಂಡರಾದ ಸುಧಾಕರ್, ಡಿ.ಆರ್‌.ರಾಮಚಂದ್ರೇಗೌಡ, ಮುನಿವೆಂಕಟಪ್ಪ, ಕೆ.ಕೆ.ಮಂಜುನಾಥ್‌, ವೆಂಕಟರೆಡ್ಡಿ, ನಾರಾಯಣಸ್ವಾಮಿ, ವೆಂಕಟೇಶರೆಡ್ಡಿ, ಗುರಪ್ಪ, ಆವಲಪ್ಪ ಇದ್ದರು.