ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ ತಾಲ್ಲೂಕಿನ ದಳಸನೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಪ್ರಕಟಿಸಲಾದ ನೂತನ ಕ್ಯಾಲೆಂಡರನ್ನು ಪಂಚಾಯಿತಿ ಅಧ್ಯಕ್ಷ ಎಸ್.ಬಾಬು ಬಿಡುಗಡೆ ಮಾಡಿದರು.
ಶ್ರೀನಿವಾಸಪುರ: ನಾಗರಿಕರು ನೀರನ್ನು ಮಿತವಾಗಿ ಬಳಸಬೇಕು ಎಂದು ದಳಸನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಬಾಬು ಹೇಳಿದರು.
ದಳಸನೂರು ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಪ್ರಕಟಿಸಲಾದ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿ, ಮುಂದಿನ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇರುವುದರಿಂದ, ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ನೀರು ಸರಬರಾಜಿಗೆ ಪೂರಕ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರಬೇಕು ಎಂದು ಹೇಳಿದರು.
ನೀರು ಪೋಲಾಗದಂತೆ ತಡೆಯುವಲ್ಲಿ ಜಲಗಾರರ ಪಾತ್ರ ಹಿರಿದು. ನೀರಿನ ಪೈಪ್ಗಳು ಹಾಗೂ ನಲ್ಲಿಗಳಲ್ಲಿ ನೀರು ವ್ಯರ್ಥವಾಗಿ ಹರಿದುಹೋಗುವುದನ್ನು ತಡೆಯಬೇಕು. ಸಾರ್ವಜನಿಕರು ಮನೆ ಬಳಕೆಗೆ ಹೊರತುಪಡಿಸಿ ನೀರು ಬಳಕೆ ಮಾಡಿಕೊಂಡಲ್ಲಿ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತರಬೇಕು. ನೀರು ಹಂಚಿಕೆಯಲ್ಲಿ ತಾರತಮ್ಯ ಮಾಡಬಾರದು ಎಂದು ಹೇಳಿದರು.
ಹಳ್ಳಿಗಳಲ್ಲಿ ಅನಗತ್ಯವಾಗಿ ಬೀದಿ ದೀಪ ಉರಿಸುವುದನ್ನು ಬಿಡಬೇಕು. ಸಂಜೆ ಕತ್ತಲಾಗುವ ಹೊತ್ತಿನಲ್ಲಿ ದೀಪ ಬೆಳಗಿಸಬೇಕು. ಬೆಳಿಗ್ಗೆ ಬೆಳಕು ಹರಿಯುತ್ತಿದ್ದಂತೆ ಆರಿಸಬೇಕು. ಹಗಲಿನಲ್ಲಿ ಬೀದಿ ದೀಪ ಉರಿಯುವುದರಿಂದ ವಿದ್ಯುತ್ ವ್ಯರ್ಥವಾಗುತ್ತದೆ. ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತದೆ ಎಂದು ಹೇಳಿದರು.
ಗ್ರಾಮಗಳಲ್ಲಿ ಸ್ವಚ್ಛತೆ ಪಾಲನೆ ಮಾಡಬೇಕು. ಪರಿಸರ ಮಾಲೀನ್ಯ ತಡೆಯಬೇಕು. ಚರಂಡಿಗಳನ್ನು ಸ್ವಚ್ಛಗೊಳಿಸುವುದರ ಮೂಲಕ ರೋಗ ರುಜಿನ ಬರದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೆಂಕಟರಾಮಪ್ಪ, ಸದಸ್ಯರಾದ ಕೃಷ್ಣಾರೆಡ್ಡಿ, ಹರಿಪ್ರಸಾದ್, ಕೆ.ಎಂ.ಗುರಪ್ಪ, ವೆಂಕಟೇಶ್, ಲಕ್ಷ್ಮೀಪತಿ ರೆಡ್ಡಿ, ರಮೇಶ್ ಇದ್ದರು.