ಶ್ರೀನಿವಾಸಪುರ: ತಾಲ್ಲೂಕಿನ ಅರಿಕೆರೆ ಗ್ರಾಮದಲ್ಲಿ ಸಾಲ ಬಾಧೆ ತಾಳಲಾರದೆ ಯುವ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದುದಾಗಿ ವರದಿಯಾಗಿದೆ.

 

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ತಾಲ್ಲೂಕಿನ ಅರಿಕೆರೆ ಗ್ರಾಮದಲ್ಲಿ ಸಾಲ ಬಾಧೆ ತಾಳಲಾರದೆ ಯುವ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದುದಾಗಿ ವರದಿಯಾಗಿದೆ.

  ಅರಿಕೆರೆ ಗ್ರಾಮದ ರೈತ ರಾಜೇಶ್‌ (24) ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡಿರುವ ರೈತ. ರಾಜೇಶ್‌ ನಾಲ್ಕು ದಿನಗಳ ಹಿಂದೆ ತೋಟದ ಸಮೀಪ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಚಿಕಿತ್ಸೆಗಾಗಿ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.

  ರಾಜೇಶ್‌ ತನ್ನ ತಾಯಿ ಹಾಗೂ ಅಣ್ಣನ ಜೊತೆ ವಾಸವಾಗಿದ್ದು, ತಮ್ಮ ಕೊಳವೆ ಬಾವಿಯಲ್ಲಿ ನೀರು ಖಾಲಿಯಾದ ಹಿನ್ನೆಲೆಯಲ್ಲಿ, ಗ್ರಾಮದ ಇನ್ನೊಬ್ಬ ರೈತ ಪಾಳ್ಯ ರಮೇಶ್‌ ಎಂಬುವವರ ಜಮೀನನ್ನು ಭೋಗ್ಯಕ್ಕೆ ಪಡೆದು 5 ವರ್ಷಗಳಿಂದ ಬೇಸಾಯ ಮಾಡುತ್ತಿದ್ದರು. ಟೊಮೆಟೊ ಮತ್ತಿತರ ಬೆಳೆ ಇಡಲು ಕೈಬದಲಾಗಿ ರೂ.10ಲಕ್ಷ ಸಾಲ ಮಾಡಿದ್ದರು. ಸಾಲ ತೀರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

  ತಹಶೀಲ್ದಾರ್‌ ಬಿ.ಎಸ್‌.ರಾಜೀವ್‌, ಪೊಲೀಸ್‌ ಸರ್ಕಲ್‌ ಇನ್ಸ್‌ಪೆಕ್ಟರ್‌ ಎಂ.ವೆಂಕಟರಾಮಪ್ಪ, ಕಂದಾಯ ನಿರೀಕ್ಷಕ ವಿನೋದ್‌, ಕೃಷಿ ಅಧಿಕಾರಿ ರಘು, ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌, ಗ್ರಾಮ ಸಹಾಯಕರಾದ ಕೃಷ್ಣ, ಶ್ರೀನಿವಾಸ್‌ ಸ್ಥಳಕ್ಕೆ ಭೇಟಿ ನೀಡಿದ್ದರು.

  ತಹಶೀಲ್ದಾರ್‌ ಬಿ.ಎಸ್‌.ರಾಜೀವ್‌ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿ ಮಾತನಾಡಿ, ಕೃಷಿ ಇಲಾಖೆ ಅಧಿಕಾರಿಗಳಿಂದ ವರದಿ ತರಿಸಿಕೊಂಡು, ಮೇಲಾಧಿಕಾರಿಗಳಿಗೆ ಕಳುಹಿಸಲಾಗುವುದು. ಪರಿಶೀಲನೆ ಬಳಿಕ ಸರ್ಕಾರದ ನಿಯಮದಂತೆ ಮೃತನ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ ನೀಡಬಹುದಾಗಿದೆ ಎಂದು ಹೇಳಿದರು.

  ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ. ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಸಲಹೆ ಮಾಡಿದರು.

  ಆಗ್ರಹ: ಆತ್ಮಹತ್ಯೆ ಮಾಡಿಕೊಂಡಿರುವ ರೈತನ ಕುಟುಂಬಕ್ಕೆ ಸರ್ಕಾರ ರೂ.10 ಲಕ್ಷ ಪರಿಹಾರ ನೀಡಬೇಕು ಹಾಗೂ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ರೈತ ಮುಖಂಡರಾದ ವೀರಭದ್ರಸ್ವಾಮಿ, ಶ್ರೀನಿವಾಸರೆಡ್ಡಿ ಆಗ್ರಹಿಸಿದ್ದಾರೆ.