ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ: ಜನ್ಮಭೂಮಿ ಸೇವಾ ಟ್ರಸ್ಟ್ ವತಿಯಿಂದ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣೋತ್ಸವ ಸಮಾರಂಭ -ವಿಧಾನ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಶುಭ ಹಾರೈಸಿದರು.
ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರ್ಮಿಸಲಾಗಿದ್ದ ಭವ್ಯ ವೇದಿಕೆಯ ಮೇಲೆ ಜನ್ಮಭೂಮಿ ಸೇವಾ ಟ್ರಸ್ಟ್ ವತಿಯಿಂದ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣೋತ್ಸವ ಸಮಾರಂಭ ಏರ್ಪಡಿಸಲಾಗಿತ್ತು.
ಭಾನುವಾರ ಬೆಳಿಗ್ಗೆ ಪಟ್ಟಣದ ಎಲ್ಲ ರಸ್ತೆಗಳಿಂದ ಜನ ವೇದಿಕೆಯ ಮುಂದೆ ನಿರ್ಮಿಸಲಾಗಿದ್ದ ಬೃಹತ್ ಪೆಂಡಾಲ್ ಕೆಳಗೆ ಸೇರಿದವು. ಪಟ್ಟಣ ಹಾಗೂ ತಾಲ್ಲೂಕಿನ ವಿವಿಧ ಕಡೆಗಳಿಂದ ಆಗಮಿಸಿದ್ದ ಸಾವಿರಾರು ಜನರು ಪೆಂಡಾಲ್ ಕೆಳಗೆ ಹಾಕಲಾಗಿದ್ದ ಆಸನಗಳಲ್ಲಿ ಆಸೀನರಾಗಿದ್ದರು. ದೇವರ ಕಲ್ಯಾಣೋತ್ಸವ ಪ್ರಾರಂಭವಾಗುತ್ತಿದಂತೆ ಗೋವಿಂದನ ನಾಮಸ್ಮರಣೆ ಮುಗಿಲು ಮುಟ್ಟಿತು. ಇಡೀ ವಾತಾವರಣ ಭಕ್ತಿ ಭಾವದಲ್ಲಿ ಮಿಂದೆದ್ದಿತು.
ಆಂಧ್ರಪ್ರದೇಶದ ಸಿಂಹಾಚಲಂ ನಿಂದ ಆಗಮಿಸಿದ್ದ ಪಂಡಿತರು ವೇದಘೋಷದೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದರು. ಶಾಸ್ತ್ರೋಕ್ತವಾಗಿ ದೇವರ ಕಲ್ಯಾಣ ನೆರವೇರಿಸಿದರು. ಕಲ್ಯಾಣದ ಅಂತಿಮ ಘಟ್ಟದಲ್ಲಿ ಅರ್ಜಕರ ಹಾರ ಕುಣಿತ ನೋಡುಗರ ಗಮನ ಸೆಳೆಯಿತು. ವಿಧಾನ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಅವರು ಮಾತನಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಶುಭ ಹಾರೈಸಿದರು.
ಇದಕ್ಕೂ ಮುನ್ನ ಕಲ್ಯಾಣ ಮೂರ್ತಿಗಳನ್ನು ಹೊರಗಡೆಯಿಂದ ಜನರು ಹೆಗಲ ಮೇಲೆ ಹೊತ್ತು ತಂದು ಕಲ್ಯಾಣ ವೇದಿಕೆಯ ಮೇಲಿಟ್ಟರು. ಪುರೋಹಿತರು ಮೂರ್ತಿಗಳಿಗೆ ಹಂತ ಹಂತವಾಗಿ ಅಲಂಕಾರ ಮಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಮೇಕಲ ನಾರಾಯಣಸ್ವಾಮಿ ಎಳನೀರು ತಟ್ಟೆ ಹೊತ್ತರು.
ಕಲ್ಯಾಣೋತ್ಸವ ಮುಗಿದ ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗು ಉಚಿತವಾಗಿ ಲಾಡು ವಿತರಣೆ ಮಾಡಲಾಯಿತು. ಸಾಮೂಹಿಕ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಮಾಲೂರು ಶಾಸಕ ಜಂಜೇಗೌಡ, ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ. ಎಂ.ಆರ್.ಜಯರಾಮ್, ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ರಾಯಲ್ಪಾಡ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ರೆಡ್ಡಿ, ಮುಖಂಡರಾದ ರೋಣೂರು ಚಂದ್ರಶೇಖರ್, ಕೆ.ಕೆ.ಮಂಜು, ಎನ್.ಜಿ.ಬ್ಯಾಟಪ್ಪ, ಬಿ.ಎಲ್.ರಾಮಯ್ಯ, ಹರ್ಷ ಇದ್ದರು.
ಭವ್ಯ ಮೆರವಣಿಗೆ: ಶುಕ್ರವಾರ ಸಂಜೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಿಂಹಾಚಲಂ ನಿಂದ ತರಲಾಗಿದ್ದ ಲಕ್ಷ್ಮೀನರಸಿಂಹಸ್ವಾಮಿ ಉತ್ಸವ ಮೂರ್ತಿಗಳ ಭವ್ಯ ಮೆರವಣಿಗೆ ಏರ್ಪಡಿಸಲಾಗಿತ್ತು. ಮೆರವಣಿಗೆಯಲ್ಲಿ ವೀರಗಾಸೆ ಕುಣಿತ, ಡೊಳ್ಳು ಕುಣಿತ, ಸ್ತಬ್ಧ ಚಿತ್ರಗಳು ನೊಡುಗರ ಗಮನ ಸೆಳೆದವು. ಮೆರವಣಿಗೆಯ ಉದ್ದಕ್ಕೂ ಏರ್ಪಡಿಸಿದ್ದ ಬಾಣ ಬಿರುಸು ಪ್ರದರ್ಶನ ಜನರ ಕಣ್ತಣಿಸಿತು. ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಒಟ್ಟಿನಲ್ಲಿ 6 ದಿನಗಳ ಕಾಲ ನಡೆದ ಶ್ರೀನಿವಾಸಪುರ ಹಬ್ಬ ಪಟ್ಟಣದ ನಾಗರನ್ನು ರಂಜಿಸಿದ್ದು ಮಾತ್ರವಲ್ಲದೆ, ಕೊನೆಯ ದಿನವಾದ ಭಾನುವಾರ ನಡೆದ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣೋತ್ಸವ ಭಕ್ತಿ ಸಾಗರದಲ್ಲಿ ಮುಳುಗುವಂತೆ ಮಾಡಿತ್ತು