ಶ್ರೀನಿವಾಸಪುರ ಕೊರೊನಾ ಸೋಂಕು ಪರೀಕ್ಷೆ ವರದಿ ವಿಳಂಬವಾಗುತ್ತಿರುವುದನ್ನು ವಿರೋಧಿಸಿ ಧರಣಿ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ ಕೊರೊನಾ ಸೋಂಕು ಪರೀಕ್ಷೆ ವರದಿ ವಿಳಂಬವಾಗುತ್ತಿರುವುದನ್ನು ವಿರೋಧಿಸಿ ಧರಣಿ
ಶ್ರೀನಿವಾಸಪುರ: ಇಲ್ಲಿನ ಖಾಸಗಿ ಆಸ್ಪತ್ರೆಯೊಂದರ ಮುಂದೆ ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ ಹಾಗೂ ಆಸ್ಪತ್ರೆ ಹೊಂ ಸಿಬ್ಬಂದಿ  ಬುಧವಾರ, ಕೋಲಾರದ ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ  ಕೊರೊನಾ ಸೋಂಕು ಪರೀಕ್ಷೆ ವರದಿ ವಿಳಂಬವಾಗುತ್ತಿರುವುದನ್ನು ವಿರೋಧಿಸಿ ಧರಣಿ ನಡೆಸಿದರು.
  ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ ಮಾತನಾಡಿ, ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರಲ್ಲಿ ಕೊರೊನಾ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 12 ಒಳರೋಗಿಗಳು ಹಾಗೂ ಅವರ ಸಂಪರ್ಕದಲ್ಲಿದ್ದ 10 ಮಂದಿಯ ಗಂಟಲು ದ್ರವ ತೆಗೆದು ಜೂ.11ರಂದು ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ 6 ದಿನ ಕಳೆದರೂ ವರದಿ ಬಂದಿಲ್ಲ ಎಂದು ದೂರಿದರು.
  ಸಮಯಕ್ಕೆ ಸರಿಯಾಗಿ ಪರೀಕ್ಷಾ ವರದಿ ಬರದ ಪರಿಣಾಮವಾಗಿ, ರೋಗಿಗಳಿಗೆ ಚಿಕಿತ್ಸೆನೀಡಲು ಸಾಧ್ಯವಾಗುತ್ತಿಲ್ಲ. ಅವರ ಸಂಪರ್ಕದಲ್ಲಿದ್ದ ವ್ಯಕ್ತಿಗಳು ಎಲ್ಲೆಂದರಲ್ಲಿ ಓಡಾಡುತ್ತಿರುವುದರಿಂದ ಕೊರೊನಾ ಸೋಂಕು ಹರಡುವ ಅಪಾಯ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. 
  ನಿಯಮಾನುಸಾರ 48 ಗಂಟೆಯಿಂದ 72 ಗಂಟೆ ಒಳಗೆ ಪರೀಕ್ಷಾ ವರದಿ ನೀಡಬೇಕು. ಜಿಲ್ಲಾ ಕೇಂದ್ರದಲ್ಲಿನ ಸರ್ಕಾರಿ ಪ್ರಯೋಗಾಲಯದಲ್ಲಿ ಅದು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
  
  ಭೇಟಿ: ತಹಶೀಲ್ದಾರ್ ಎಸ್‌.ಎಂ.ಶ್ರೀನಿವಾಸ್‌, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್‌ ಸ್ಥಳಕ್ಕೆ ಭೇಟಿ ನೀಡಿ, ಅನುಮಾನಾಸ್ಪದ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪರೀಕ್ಷೆ ಫಲಿತಾಂಶ ತಡವಾಗುತ್ತಿದೆ. ಆದಷ್ಟು ಶೀಘ್ರವಾಗಿ ವರದಿ ನೀಡುವಂತೆ ಹಿರಿಯ ಅಧಿಕಾರಿಗಳನ್ನು ಕೋರಲಾಗುವುದು ಎಂದು ತಿಳಿಸಿದ ಬಳಿಕ ಧರಣಿ ಹಿಂದಕ್ಕೆ ಪಡೆಯಲಾಯಿತು.