ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ: ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು, ಕೃಷಿ ಭೂಮಿ ಗುತ್ತಿಗೆ ಕಾಯ್ದೆನ್ನು ವಿರೋಧಿಸಿ ಪ್ರತಿಭಟನೆ
ಶ್ರೀನಿವಾಸಪುರ: ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು, ಕೃಷಿ ಭೂಮಿ ಗುತ್ತಿಗೆ ಕಾಯ್ದೆನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಪ್ರತಿಭಟನ ನಿರತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಈ ಕಾಯ್ದೆ ದೇಶದ ಕೃಷಿಕರು ಹಾಗೂ ಕೃಷಿ ಕೂಲಿಕಾರರ ಬದುಕಿಗೆ ಮಾರಕವಾಗಿದೆ. ಕೃಷಿ ಉತ್ಪಾದನೆ ಹಾಗೂ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಬಹುರಾಷ್ಟ್ರೀಯ ಕಂಪನಿಗಳಿಗೆ ಒಪ್ಪಿಸುವ ಉದ್ದೇಶ ಕೇಂದ್ರ ಸರ್ಕಾರಕ್ಕಿದೆ. ರಾಜ್ಯ ಸರ್ಕಾರ ಅದನ್ನು ಬೆಂಬಲಿಸುತ್ತಿದೆ ಎಂದು ಆಪಾದಿಸಿದರು.
ದೇಶದಲ್ಲಿನ ವಿಸ್ತಾರವಾದ ಬೀಳು ಭೂಮಿಯನ್ನು ರೈತರಿಂದ ಕಿತ್ತು ಬಂಡವಾಳಶಾಹಿ ಕೃಷಿ ವ್ಯವಸ್ಥೆಗೆ ಒಪ್ಪಿಸಲು ಸರ್ಕಾರ ಮುಂದಾಗಿದೆ. ಇದರಿಂದ ದೇಶದ ರೈತರು ಭೂಮಿ ಕಳೆದುಕೊಂಡು ಕಂಪನಿಗಳ ಮುಂದೆ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಲಿದೆ. ದಾವೋಸ್‌ನಲ್ಲಿ ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ ಮೇರೆಗೆ ರಾಜ್ಯದ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ವ್ಯವಸ್ಥೆ ಜಾರಿಗೆ ತರುವ ಮಾತು ಕೊಟ್ಟು ಬಂದಿದ್ದಾರೆ ಎಂದು ಹೇಳಿದರು.
ಕಾರ್ಯಕರ್ತರು ಕೃಷಿ ಭೂಮಿ ಗುತ್ತಿಗೆ ಕಾಯ್ದೆ 2016ರ ಪ್ರತಿಗಳನ್ನು ಸುಟ್ಟು ಪ್ರತಿಭಟಿಸಿದರು. ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಉಪ ತಹಶೀಲ್ದಾರ್‌ಗೆ ನೀಡಿದರು.
ಕೆಪಿಆರ್ಎಸ್ ತಾಲ್ಲೂಕು ಅಧ್ಯಕ್ಷ ಪಾತಕೋಟ ನವೀನ್ ಕುಮಾರ್, ಕಾರ್ಯದರ್ಶಿ ಎಸ್.ಎಂ.ನಾಗರಾಜ್, ಗೌರವಾಧ್ಯಕ್ಷ ಎನ್.ವೀರಪ್ಪರೆಡ್ಡಿ, ಮುಖಂಡರಾದ ಆರ್.ವೆಂಕಟೇಶ್, ವೆಂಕಟಲಕ್ಷ್ಮಮ್ಮ, ಸೈಯದ್ ಫಾರೂಕ್, ಕೆ.ನಂಜಪ್ಪ, ಮಂಗಮ್ಮ , ಶ್ರೀನಿವಾಸರೆಡ್ಡಿ, ನಾಗರಾಜ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ನಂಬಿಹಳ್ಳಿ ಶ್ರೀರಾಮರೆಡ್ಡಿ, ಪ್ರಧಾನ ಕಾರ್ಯದರ್ಶಿ ಸಿ.ಬಿ.ದೇವರಾಜ, ಕಾರ್ಯದರ್ಶಿ ಹೆಬ್ಬಟ ರಮೇಶ್, ಖಜಾಂಚಿ ಎಂ.ಶ್ರೀಧರ್ ಇದ್ದರು.