ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ: ಅಧಿಕಾರಿಗಳು ಕುಡಿಯುವ ನೀರು ಸರಬರಾಜಿಗೆ ಮೊದಲ ಆದ್ಯತೆ ನೀಡಬೇಕು : ಜಿಲ್ಲಾಧಿಕಾರಿ ಜೆ.ಮಂಜುನಾಥ್
ತಾಲ್ಲೂಕಿನ ಲಕ್ಷ್ಮೀಪುರ ಕ್ರಾಸ್ ಶುಕ್ರವಾರ ಏರ್ಪಡಿಸಿದ್ದ ನೆಲವಂಕಿ ಹೋಬಳಿ ಮಟ್ಟದ ಸಾರ್ವಜನಿಕರ ಕುಂದು ಕೊರತೆ ವಿಚಾರಣಾ ಸಭೆ ಉದ್ಘಾಟಿಸಿ ಮಾತನಾಡಿ, ಕುಡಿಯುವ ನೀರು ಪೂರೈಕೆಗೆ ಹಣದ ಕೊರತೆ ಇಲ್ಲ. ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕರ್ ಮಾಲೀಕರಿಗೆ ಪ್ರತಿ 15 ದಿನಗಳಿಗೊಮ್ಮೆ ಹಣ ನೀಡಲಾಗುತ್ತಿದೆ ಎಂದು ಹೇಳಿದರು.
ಬೆಸ್ಕಾಂ ಅಧಿಕಾರಿಗಳು ಕುಡಿಯುವ ನೀರು ಪೂರೈಕೆ ಮಾಡಲು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಈಗ ತಾಲ್ಲೂಕಿನಲ್ಲಿ ಬರವಿದ್ದು, ಮಳೆಯಾದರೆ ಪರಿಸ್ಥಿತಿ ಸುಧಾರಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ವಿದ್ಯುತ್ ನೀಡುವ ಸಮಯವನ್ನು ಮುಂಚಿತವಾಗಿಯೇ ತಿಳಿಸಬೇಕು. ಮನೆಗಳ ಮೇಲೆ ವಿದ್ಯುತ್ ತಂತಿಗಳು ಹೋಗಿದ್ದಲ್ಲಿ ಶೀಘ್ರವಾಗಿ ಕಂಬಗಳನ್ನು ಬದಲಾಯಿಸಬೇಕು ಎಂದು ಸೂಚಿಸಿದರು.
ತಾಲ್ಲೂಕಿನಲ್ಲಿ 48 ಸಾವಿರ ರೈತರಿದ್ದಾರೆ. ಆದರೆ ಈವರೆಗೆ 15 ಸಾವಿರ ರೈತರು ಮಾತ್ರ ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಲಾಭ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಈ ವಿಷಯದಲ್ಲಿ ಶೇ.33 ರಷ್ಟು ಪ್ರಗತಿಯಾಗಿದೆ. ಆದ್ದರಿಂದ ಉಳಿದ ಅರ್ಹ ರೈತರು ಅಗತ್ಯ ದಾಖಲೆಗಳೊಂದಿಗೆ ತಪ್ಪದೆ ಅರ್ಜಿ ಸಲ್ಲಿಸಬೇಕು ಎಂದು ಸಲಹೆ ಮಾಡಿದರು.
ಪ್ರತಿ ಹೋಬಳಿಯಲ್ಲೂ ಕುಂದು ಕೊರತೆ ಸಭೆಗಳನ್ನು ಏರ್ಪಡಿಸಿ ಸಮಾಲೋಸಿಸಲಾಗುವುದು. ಸ್ಥಳೀಯ ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು. ಈ ಉದ್ದೇಶ ಸಫಲವಾಗಬೇಕಾದರೆ, ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಹೇಳಿದರು.
ಸಭೆಯಲ್ಲಿ ಕುಡಿಯುವ ನೀರು, ವಿದ್ಯುತ್ ಸರಬರಾಜು, ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಾಯಿತು. ನೆಲವಂಕಿ, ಲಕ್ಷ್ಮೀಪುರ ಹಾಗೂ ಪುಲಗೂರುಕೋಟೆ ಗ್ರಾಮ ಪಂಚಾಯಿತಿಗಳಿಗೆ ಸೇರಿದ ನಾಗರಿಕರಿಂದ ಅಹವಾಲು ಸ್ವೀಕರಿಸಲಾಯಿತು.
ತಹಶೀಲ್ದಾರ್ ಬಿ.ಎಸ್.ರಾಜೀವ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಕಂದಾಯ ನಿರೀಕ್ಷಕ ಗುರುಪ್ರಸಾದ್, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಎಂ.ವೆಂಕಟರಾಮಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಂ.ನರೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುಳ, ಲಕ್ಷ್ಮಿದೇವಮ್ಮ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜು, ಮುಖಂಡರಾದ ನರಸಿಂಹಪ್ಪ, ವೆಂಕಟಶಿವಾರೆಡ್ಡಿ ಇದ್ದರು.